ದೇವದುರ್ಗ: ರಾಯಚೂರಿನ ಆರ್‌ಟಿಪಿಎಸ್ ಹಾಗೂ ವೈಟಿಪಿಎಸ್ ಘಟಕದಲ್ಲಿ ವಿದ್ಯುತ್ ಉತ್ಪಾದನೆಗಾಗಿ ನಾರಾಯಣಪುರ ಜಲಾಶಯದಿಂದ ಕೃಷ್ಣಾ ನದಿಗೆ ಮಂಗಳವಾರ ತಡರಾತ್ರಿ ಒಂದು ಟಿಎಂಸಿ ಅಡಿ ನೀರು ಹರಿಸಲಾಗಿದೆ.
ಹತ್ತು ಸಾವಿರ ಕ್ಯೂಸೆಕ್‌ನಂತೆ ಒಂದು ದಿನ ಪೂರ್ತಿ ಕೃಷ್ಣಾನದಿಗೆ ನೀರು ಹರಿಸಲಾಗಿದೆ. ಈ ಬೇಸಿಗೆಯಲ್ಲಿ ವಿದ್ಯುತ್ ಉತ್ಪಾದನೆಗಾಗಿ ನಾಲ್ಕನೇ ಬಾರಿಗೆ ಕೃಷ್ಣಾ ನದಿಗೆ ನೀರು ಹರಿಸಲಾಗುತ್ತಿದೆ. ಮಾರ್ಚ್ ಕೊನೇ ವಾರದಲ್ಲಿ ನದಿಗೆ ನಿತ್ಯ 5 ಸಾವಿರ ಕ್ಯೂಸೆಕ್‌ನಂತೆ ಎರಡು ದಿನ ಹರಿಸಲಾಗಿತ್ತು. ಏಪ್ರಿಲ್‌ನಲ್ಲಿ ಎರಡು ಸಲ ನೀರು ಬಿಡಲಾಗಿತ್ತು. ಒಮ್ಮೆ ಕೃಷ್ಣಾ ನದಿ ಹಾಗೂ ಇನ್ನೊಮ್ಮೆ ನಾರಾಯಣಪುರ ಬಲದಂಡೆ ನಾಲೆ ಮೂಲಕ ತಲಾ ಒಂದು ಟಿಎಂಸಿ ನೀರನ್ನು ವಿದ್ಯುತ್ ಉತ್ಪಾದನೆಗಾಗಿ ಹರಿಸಲಾಗಿತ್ತು.
ಈಗ ನಾಲ್ಕನೆ ಬಾರಿಗೆ ಕೃಷ್ಣಾನದಿ ಮೂಲಕ ಮತ್ತೆ ಒಂದು ಟಿಎಂಸಿ ಅಡಿ ನೀರು ಹರಿಸಲಾಗುತ್ತಿದೆ. ವಿಪರೀತ ಬಿಸಿಲು, ಕುಡಿವ ನೀರು, ಕೃಷಿ ಚಟುವಟಿಕೆ ಹಾಗೂ ಆವಿಯ ಪ್ರಮಾಣ ತೆಗೆದರೆ ಕೇವಲ 0.3ಟಿಎಂಸಿ ನೀರು ಮಾತ್ರ ಆರ್‌ಟಿಪಿಎಸ್‌ಗೆ ತಲಪುತ್ತದೆ. ಅಲ್ಲದೆ ನದಿಯ ತಗ್ಗು ಪ್ರದೇಶದಲ್ಲಿ ನೀರು ಹೆಚ್ಚಾಗಿ ನಿಲ್ಲುತ್ತಿದ್ದು ಸಮಸ್ಯೆ ಕಾರಣವಾಗಿದೆ.
ಈ ಹಿಂದೆ ಒಂದು ಟಿಎಂಸಿ ನೀರನ್ನು ಆರ್‌ಟಿಪಿಎಸ್‌ಗೆ ಬಿಟ್ಟು ತುಂಬಿಸಿದರೆ ಸುಮಾರು ಮೂರ‌್ನಾಲ್ಕು ತಿಂಗಳು ಸಾಕಾಗುತ್ತಿತ್ತು. ಈ ವರ್ಷ ಬರದ ಹಿನ್ನೆಲೆಯಲ್ಲಿ ವಿದ್ಯುತ್ ಬೇಡಿಕೆ ಹೆಚ್ಚಾಗಿದೆ. ಅಲ್ಲದೆ ನೀರುಬಿಟ್ಟ ನಂತರ ಶೇ.30 ನೀರು ಮಾತ್ರ ಘಟಕಕ್ಕೆ ತಲುಪುತ್ತಿದೆ. ಈ ಹಿನ್ನೆಲೆಯಲ್ಲಿ ನೀರು ಹರಿಸಲಾಗುತ್ತಿದೆ. ಜತೆಗೆ ಜನಜಾನುವಾರು, ಪ್ರಾಣಿ ಪಕ್ಷಿಗಳು ಹಾಗೂ ಜಲಚರಗಳಿಗೆ ಅನುಕೂಲವಾಗಲಿದೆ. ಈ ಹಿನ್ನೆಲೆಯಲ್ಲಿ ಕೃಷ್ಣಾನದಿಗೆ ಹಂತಹಂತವಾಗಿ ನೀರು ಹರಿಸಲಾಗುತ್ತಿದೆ ಎಂದು ಕೆಬಿಜೆಎನ್‌ಎಲ್ ಅಧಿಕಾರಿಗಳು ತಿಳಿಸಿದ್ದಾರೆ.