ದೇವದುರ್ಗ: ಮಹಿಳೆಯರ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಅಭಿವೃದ್ಧಿಗಾಗಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ಹಲವು ಯೋಜನೆ ಜತೆಗೆ ಜ್ಞಾನ ವಿಕಾಸದಂತಹ ಜಾಗೃತಿ ಕಾರ್ಯಕ್ರಮ ಮಾಡುತ್ತಿದ್ದು, ಸ್ತ್ರೀಯರು ಸದ್ಬಳಕೆ ಮಾಡಿಕೊಂಡು ಸ್ವಾವಲಂಬಿಗಳಾಗಬೇಕು ಎಂದು ಸಂಸ್ಥೆ ಪ್ರಾದೇಶಿಕ ನಿರ್ದೇಶಕ ಬಿ.ಗಣೇಶ ಹೇಳಿದರು.
ಪಟ್ಟಣದ ಖೇಣೇದ್ ಫಂಕ್ಷನ್ ಹಾಲ್‌ನಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ, ಬಿ.ಸಿ.ಟ್ರಸ್ಟ್‌ನಿಂದ ಹಮ್ಮಿಕೊಂಡಿದ್ದ ತಾಲೂಕು ಮಟ್ಟದ ಮಹಿಳಾ ವಿಚಾರಗೋಷ್ಠಿಯಲ್ಲಿ ಭಾನುವಾರ ಮಾತನಾಡಿದರು. ರಾಜ್ಯದಲ್ಲಿ 28ಸಾವಿರ ಜ್ಞಾನವಿಕಾಸ ಸಂಘಗಳು ಹಾಗೂ ಸ್ವ-ಸಹಾಯ ಗುಂಪುಗಳಿವೆ. ಮಹಿಳೆಯರ ಆರ್ಥಿಕ ಸಬಲೀಕರಣ ಹಾಗೂ ಉದ್ಯೋಗಕ್ಕಾಗಿ ಡಾ.ವೀರೇಂದ್ರ ಹೆಗ್ಗಡೆ ಹಾಗೂ ಹೇಮಾವತಿ ಹೆಗ್ಗಡೆ ರಾಷ್ಟ್ರೀಯ ಬ್ಯಾಂಕ್‌ಗಳೊಂದಿಗೆ ಸಂಘಗಳಿಗೆ 90ಸಾವಿರ ಕೋಟಿ ರೂ. ಸಾಲ ನೀಡಿದ್ದಾರೆ. ಇದು ಬಡ ಕುಟುಂಬಗಳ ಬದಲಾವಣೆಗೆ ಕಾರಣವಾಗಿದೆ. ಪ್ರಗತಿ ಬಂಧು, ಜ್ಞಾನ ವಿಕಾಸ, ಜ್ಞಾನ ದೀಪ, ವಾತ್ಸಲ್ಯ ಸಂಘ ಮುಂತಾದ ಯೋಜನೆಗಳಡಿ ರೈತರು, ಮಹಿಳೆಯರು, ಯುವಕರು, ಅನಾಥರು, ವೃದ್ಧರು, ಮಕ್ಕಳು ಹಾಗೂ ಅವರ ಶಿಕ್ಷಣ, ಆರ್ಥಿಕ ಸಬಲೀಕರಣಕ್ಕೆ ಶ್ರಮಿಸಲಾಗುತ್ತಿದೆ ಎಂದು ತಿಳಿಸಿದರು.
ವಕೀಲ ಬಸನಗೌಡ ದೇಸಾಯಿ ಸಮಾರಂಭ ಉದ್ಘಾಟಿಸಿ ಮಾತನಾಡಿ, ಮಹಿಳೆಯರು ಶಿಕ್ಷಣ ಮತ್ತು ಕಾನೂನು ಜ್ಞಾನ ಪಡೆದು ಸಮಾಜದ ಮುಖ್ಯವಾಹಿನಿಗೆ ಬರಬೇಕು. ಸಾಮಾಜಿಕ ಪಿಡುಗುಗಳಾದ ವರದಕ್ಷಿಣೆ, ಬಾಲ್ಯವಿವಾಹ, ಕೌಟುಂಬಿಕ ದೌರ್ಜನ್ಯ, ಅತ್ಯಾಚಾರದಂತಹ ಕೃತ್ಯಗಳನ್ನು ಹಿಮ್ಮೆಟ್ಟಿಸಲು ಇಂತಹ ಸಂಸ್ಥೆಗಳೊಂದಿಗೆ ಕೈ ಜೋಡಿಸಿ, ಸಂಘಟಿತರಾಗಬೇಕು ಎಂದು ಸಲಹೆ ನೀಡಿದರು.
ಉಪನ್ಯಾಸಕಿ ಜ್ಯೋತಿ ಲತಾ, ಮಹಿಳಾ ಸಬಲೀಕರಣ ಹಾಗೂ ಕುಟುಂಬದಲ್ಲಿ ಸಂಸ್ಕೃತಿ-ಸಂಪ್ರದಾಯ ಬೆಳೆಸುವಲ್ಲಿ ಮಹಿಳೆಯರ ಪಾತ್ರ ಕುರಿತು ಉಪನ್ಯಾಸ ನೀಡಿದರು. ಜನಜಾಗೃತಿ ವೇದಿಕೆ ಜಿಲ್ಲಾ ಸದಸ್ಯ ಭಾನುಪ್ರಕಾಶ ಖೇಣೇದ್, ಡಾ.ನಿರ್ಮಲಾ, ಡಾ.ಲೀಲಾವತಿ, ಪಿಎಸ್‌ಐ ಉಮೇರಾ ಭಾನು, ಸಹಪ್ರಾಧ್ಯಾಪಕ ಸುಭಾಷ್‌ಚಂದ್ರ ಪಾಟೀಲ್, ಮಾಜಿ ಸೈನಿಕ ಪಂಪಣ್ಣ ಅಕ್ಕಕರಕಿ, ಸಂಸ್ಥೆ ನಿರ್ದೇಶಕ ಸಂತೋಷಕುಮಾರ ಇತರರಿದರು. ನಂತರ ಸ್ವ-ಸಹಾಯ ಗುಂಪುಗಳಿಗೆ ಸಹಾಯಧನ ನೀಡಲಾಯಿತು.