ದೇವದುರ್ಗ ತಾಲೂಕು ನಾಗಡದಿನ್ನಿಯಲ್ಲಿ ಆಯೋಜಿಸಿದ್ದ ವಲಯಮಟ್ಟದ ಪೋಷಣ ಅಭಿಯಾನ ಕಾರ್ಯಕ್ರಮದಲ್ಲಿ ಮೇಲ್ವಿಚಾರಕಿ ಶರಣಮ್ಮ ರಾಥೋಡ್ ಮಾತನಾಡಿದರು. ಪ್ರಾಥಮಿಕ ಶಾಲೆ ಶಿಕ್ಷಕ ರವಿಕುಮಾರ್, ಗ್ರಾಪಂ ಸದಸ್ಯರಾದ ಶರಣಗೌಡ, ಭಾರತಿ ವಿರುಪನಗೌಡ, ಎಸ್ಡಿಎಂಸಿ ಅಧ್ಯಕ್ಷ ನಬಿಸಾಬ್ ಇದ್ದರು. 
ಜಿಲ್ಲೆ

ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ಸಹಕಾರ ಅಗತ್ಯ

ಶಾಮಸುಂದರ್ ಕೊಪ್ಪಳಕರ್

ದೇವದುರ್ಗ: ಗರ್ಭಿಣಿಯರ ಮತ್ತು ಮಕ್ಕಳ ಆರೋಗ್ಯ ವೃದ್ಧಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರ ವಿವಿಧ ಯೋಜನೆಗಳನ್ನು ಜಾರಿಗೊಳಿಸಿವೆ. ಇವುಗಳನ್ನು ಸದ್ಬಳಕೆ ಮಾಡಿಕೊಳ್ಳಿ ಎಂದು ರಾಮದುರ್ಗ ವಲಯ ಮೇಲ್ವಿಚಾರಕಿ ಶರಣಮ್ಮ ರಾಥೋಡ್ ಹೇಳಿದರು.

ತಾಲೂಕಿನ ನಾಗಡದಿನ್ನಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಿಶು ಅಭಿವೃದ್ಧಿ ಯೋಜನೆ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ವಲಯ ಮಟ್ಟದ ಪೋಷಣ ಅಭಿಯಾನದಲ್ಲಿ ಶುಕ್ರವಾರ ಮಾತನಾಡಿದರು.

ಸದೃಢ ದೇಶ ಕಟ್ಟಲು ಆರೋಗ್ಯವಂತ ಸಮಾಜ ನಿರ್ಮಾಣ ಅಗತ್ಯ. ಶುದ್ಧ ಗಾಳಿ, ನೀರು, ಪೌಷ್ಟಿಕ ಆಹಾರದಿಂದ ಉತ್ತಮ ಆರೋಗ್ಯ ಪಡೆಯಲು ಸಾಧ್ಯ. ಆರೋಗ್ಯವಂತ ಸಮಾಜಕ್ಕೆ ಸಾರ್ವಜನಿಕರ ಸಹಕಾರ ಅಗತ್ಯ. ಮಹಿಳೆಯರು, ಗರ್ಭಿಣಿಯರ ಕಡಿಮೆ ತೂಕ, ಅಪೌಷ್ಟಿಕ, ಕಡಿಮೆ ತೂಕದ ಮಕ್ಕಳ ಜನನ ಪ್ರಮಾಣ ನಿಯಂತ್ರಿಸುವುದು, ಬಾಣಂತಿ ಹಾಗೂ ಮಕ್ಕಳಲ್ಲಿ ರಕ್ತಹೀನತೆ ತಡೆಗಟ್ಟುವುದು, ಪೋಷಣೆ ಅಭಿಯಾನದ ಉದ್ದೇಶವಾಗಿದೆ. ಈ ಎಲ್ಲ ರೋಗ ದೂರ ಮಾಡಲು ಪ್ರತಿದಿನ ಪೌಷ್ಟಿಕಾಂಶ ಆಹಾರ ಸೇವಿಸಬೇಕು. ಅಂಗನವಾಡಿ ಮೂಲಕ ಜಾರಿಗೊಳಿಸಿದ ಯೋಜನೆಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು. ಯೋಜನೆ ಜನರಿಗೆ ಸಮರ್ಪಕವಾಗಿ ತಲುಪಲು ಕಾರ್ಯಕರ್ತೆಯರು ಪ್ರಾಮಾಣಿಕ ಪ್ರಯತ್ನ ಮಾಡಬೇಕು ಎಂದರು
ಪ್ರಮುಖರಾದ ಪ್ರಶಾಂತ್ ಸೂರ್ಯವಂಶಿ, ವಾಣಿಶ್ರೀ, ಮಹಾಂತೇಶ ಇತರರಿದ್ದರು.