ದೇವದುರ್ಗ: ತಾಲೂಕಿನ 29 ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಕುರಿತು ಚರ್ಚಿಸಲು ಶಾಸಕ ಹಾಗೂ ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮದ ಅಧ್ಯಕ್ಷ ಕೆ.ಶಿವನಗೌಡ ನಾಯಕ ಮಂಗಳವಾರ ಬೆಂಗಳೂರಿನಲ್ಲಿ ಕೃಷ್ಣಭಾಗ್ಯ ಜಲ ನಿಗಮದ ವ್ಯವಸ್ಥಾಪಕ ನಿರ್ದೇಶಕ ಶಿವಕುಮಾರರನ್ನು ಭೇಟಿಯಾಗಿ ಚರ್ಚಿಸಿದರು. ಕೆರೆ ತುಂಬಿಸುವ ಯೋಜನೆಗೆ ಶೀಘ್ರ ಚಾಲನೆ ನೀಡಬೇಕಿದ್ದು, ಟೆಂಡರ್ ಪ್ರಕ್ರಿಯೆ ಆರಂಭಿಸುವಂತೆ ಸೂಚಿಸಿದರು.
ಕೆರೆ ತುಂಬಿಸುವ ಯೋಜನೆಯಿಂದ ಕುಡಿವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ದೊರೆಯಲಿದೆ. ಕೆರೆಗಳ ವ್ಯಾಪ್ತಿಯಲ್ಲಿನ ಬೋರ್‌ವೆಲ್‌ಗಳಲ್ಲಿ ಅಂತರ್ಜಲ ಮಟ್ಟ ವೃದ್ಧಿಯಾಗಲಿದೆ. ಇದರಿಂದ ರೈತರಿಗೆ ಸಾಕಷ್ಟು ಅನುಕೂಲವಾಗಲಿದೆ. ತಾಲೂಕಿನ ನೀರಾವರಿ ವಂಚಿತ ಹಾಗೂ ಗುಡ್ಡಗಾಡು ಪ್ರದೇಶದ ರೈತರಿಗೆ ಕೆರೆ ತುಂಬಿಸುವ ಯೋಜನೆ ಬಹಳ ಸಹಕಾರಿಯಾಗಲಿದೆ ಎಂದರು.
330 ಕೋಟಿ ರೂ. ವೆಚ್ಚದಲ್ಲಿ 29 ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ದೊರೆತಿದೆ. ಮೊದಲ ಹಂತದಲ್ಲಿ 180 ಕೋಟಿ ರೂ. ವೆಚ್ಚದಲ್ಲಿ ಅರಕೇರಾ, ಆಲ್ಕೋಡ್, ಕ್ಯಾದಿಗೇರಾ, ಪಿಲಿಗುಂಡ, ಬುಂಕಲದೊಡ್ಡಿ, ಬಂಡೇಗುಡ್ಡ, ಮಲ್ಲೇನಾಯಕದೊಡ್ಡಿ ಸೇರಿ 9 ಕೆರೆಗಳಿಗೆ ನೀರು ತುಂಬಿಸಲಾಗುವುದು. ಎರಡನೇ ಹಂತದಲ್ಲಿ ಉಳಿದ 20 ಕೆರೆಗಳ ಅಭಿವೃದ್ಧಿ ಮತ್ತು ನೀರು ತುಂಬಿಸುವ ಯೋಜನೆ ಕೈಗೊಳ್ಳಲಾಗುವುದು ಎಂದರು.