ಜಿಲ್ಲೆ

ಏಮ್ಸ್ ಮಂಜೂರಿಗೆ ಆಗ್ರಹ

ಕುರುವತ್ತಿ ಶ್ರೀಕಾಂತಪ್ಪ

ದೇವದುರ್ಗ: ರಾಜಕೀಯ, ಶೈಕ್ಷಣಿಕ, ಸಾಮಾಜಿಕ ಹಾಗೂ ಆರ್ಥಿಕವಾಗಿ ಹಿಂದುಳಿದ ರಾಯಚೂರು ಜಿಲ್ಲೆಗೆ ಏಮ್ಸ್ ಮಂಜೂರು ಮಾಡುವಂತೆ ಒತ್ತಾಯಿಸಿ ಕ್ಷತ್ರಿಯ ಮರಾಠ ಸಮುದಾಯದ ಮುಖಂಡರು, ಸಿಎಂಗೆ ಬರೆದ ಮನವಿ ಪತ್ರವನ್ನು ತಹಸೀಲ್ದಾರ್ ಶ್ರೀನಿವಾಸ್ ಚಾಪೇಲ್‌ಗೆ ಸೋಮವಾರ ಸಲ್ಲಿಸಿದರು.

ಕಲ್ಯಾಣ ಕರ್ನಾಟಕದ ಅತ್ಯಂತ ಹಿಂದುಳಿದ ಜಿಲ್ಲೆಯಾಗಿರುವ ರಾಯಚೂರಿಗೆ ಏಮ್ಸ್ ಮಂಜೂರು ಮಾಡುವಂತೆ ಒತ್ತಾಯಿಸಿ 282 ದಿನಗಳಿಂದ ಜಿಲ್ಲಾ ಏಮ್ಸ್ ಹೋರಾಟ ಸಮಿತಿ ಧರಣಿ ನಡೆಸುತ್ತಿದ್ದರೂ ಸರ್ಕಾರ ಸ್ಪಂದಿಸುತ್ತಿಲ್ಲ. ಸಿಎಂ ಬಸವರಾಜ ಬೊಮ್ಮಾಯಿ ಇತ್ತೀಚೆಗೆ ಮಂಡಿಸಿದ ಬಜೆಟ್‌ನಲ್ಲಿ ರಾಯಚೂರಿಗೆ ಏಮ್ಸ್ ಮಾದರಿ ಆಸ್ಪತ್ರೆ ಸ್ಥಾಪಿಸುವುದಾಗಿ ಘೋಷಿಸಿದ್ದಾರೆ. ಇದು ಮೂಗಿಗೆ ತುಪ್ಪ ಸವರುವ ಕೆಲಸ ಎಂದು ದೂರಿದರು.

ಕೂಡಲೇ ಏಮ್ಸ್ ಮಂಜೂರು ಮಾಡಿ ಜಿಲ್ಲೆಗೆ ನ್ಯಾಯ ಒದಗಿಸಬೇಕು. ಏಮ್ಸ್ ಸ್ಥಾಪನೆ ಕುರಿತು ಸಚಿವ ಸಂಪುಟದಲ್ಲಿ ಅನುಮೋದನೆ ಪಡೆದು, ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಬೇಕು ಎಂದು ಒತ್ತಾಯಿಸಿದರು. ತಾಲೂಕು ಅಧ್ಯಕ್ಷ ಎನ್.ಗೋಪಾಲ್ ರಾವ್, ಎನ್.ಚಂದ್ರಶೇಖರ್, ಡಾ.ಬಸವರಾಜ್, ಸುದರ್ಶನ್ ಜಗತಾಪ್, ಗಂಗಮ್ಮ ವಕೀಲ, ಎನ್.ವೆಂಕಟೇಶ್, ಉಮಾಬಾಯಿ, ಅನುರಾಧಾ, ಎಚ್.ಶಿವರಾಜ್ ಇತರರಿದ್ದರು.