ದೇವದುರ್ಗದ ಬಸ್ ನಿಲ್ದಾಣ ಸಮೀಪದ ಮೊಬೈಲ್ ಅಂಗಡಿಯ ಬೀಗ ಮುರಿದಿರುವುದು. ಕಳ್ಳರ ಚಲನವಲನ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿರುವುದು. 
ಜಿಲ್ಲೆ

ದೇವದುರ್ಗದಲ್ಲಿ ಖದೀಮರ ಹಾವಳಿ, ಜನರು ದಿವಾಳಿ ! - ಮನೆ, ಅಂಗಡಿ, ಮಳಿಗೆಗಳಿಗೆ ಕನ್ನ, ಮುಂದುವರಿದ ಸರಣಿ ಕಳ್ಳತನ

ದೇವದುರ್ಗ: ಪಟ್ಟಣ ಸೇರಿ ತಾಲೂಕಿನಲ್ಲಿ ಕಳ್ಳರ ಹಾವಳಿ ಹೆಚ್ಚಾಗಿದ್ದು, ಜನರು ನೆಮ್ಮದಿಯ ನಿದ್ರೆ ಮರೆತಿದ್ದಾರೆ. ಎಂದಿನಂತೆ ಪೊಲೀಸರು ದೂರು ದಾಖಲಿಸಿಕೊಂಡು ಹತ್ತರಲ್ಲಿ ಹನ್ನೊಂದು ಎನ್ನುವ ಮನಸ್ಥಿತಿಗೆ ಬಂದಿದ್ದಾರೆ ಎನ್ನುವ ಆರೋಪಗಳು ಕೇಳಿಬರುತ್ತಿವೆ.

ಬಸ್ ನಿಲ್ದಾಣ ಸಮೀಪದ ಎಸ್.ವಿ. ಮೊಬೈಲ್ ಶಾಪ್‌ನಲ್ಲಿ ಗುರುವಾರ ರಾತ್ರಿ ಕಳ್ಳತನವಾಗಿದೆ. ನಾಲ್ಕು ಜನರ ತಂಡ 50 ಸಾವಿರ ರೂ. ನಗದು ಹಾಗೂ ಬೆಲೆಬಾಳುವ ವಸ್ತುಗಳನ್ನು ಕದ್ದಿದ್ದಾರೆ. ಕಳ್ಳರು ಹೆಲ್ಮೆಟ್ ಧರಿಸಿ, ಬೀಗ ಮುರಿಯುವ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.

ಕೆಲ ದಿನಗಳ ಹಿಂದೆ ಅಂಬೇಡ್ಕರ್ ವೃತ್ತದಲ್ಲಿ ಫರ್ಟಿಲೈಸರ್ ಮಳಿಗೆಗೆ ಕನ್ನ ಹಾಕಲಾಗಿತ್ತು. ಹಳೇಬಸ್ ನಿಲ್ದಾಣದಲ್ಲಿ ಝರಾಕ್ಸ್, ಕಂಪ್ಯೂಟರ್ ಅಂಗಡಿಯಲ್ಲೂ ಕಳ್ಳತನವಾಗಿತ್ತು. ಅಲ್ಲದೆ, ಖದೀಮರು ಕಬ್ಬಿಣದ ರಾಡು, ಕಟ್ಟಿಗೆ ಹಿಡಿದು ಓಡಾಡುವ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿತ್ತು.

ಸಿಪ್ಪತಗೇರಾ ಏರಿಯಾದಲ್ಲಿ ನಿರ್ಮಾಣ ಹಂತದ ಮನೆಗಳಲ್ಲಿ ಲಕ್ಷಾಂತರ ರೂ. ಮೌಲ್ಯದ ವೈರ್, ಪೇಂಟ್ ಸೇರಿ ಎಲೆಕ್ಟ್ರಾನಿಕ್ ಸಾಮಗ್ರಿ ಸೇರಿ ನಾಲ್ಕೈದು ಮನೆಗಳಲ್ಲಿ ಕಳ್ಳತನ ನಡೆದಿತ್ತು.

ಇನ್ನು ಸಾರ್ವಜನಿಕ ಆಸ್ಪತ್ರೆಯಲ್ಲಿ ಲಕ್ಷಾಂತರ ರೂ. ಮೌಲ್ಯದ ಯಂತ್ರಗಳು, ನದಿದಂಡೆ ಗ್ರಾಮಗಳಲ್ಲಿ ನೂರಾರು ರೈತರ ಪಂಪ್‌ಸೆಟ್, ವಿದ್ಯುತ್ ವೈರ್, ಕೆಲ ತಿಂಗಳ ಹಿಂದೆ ಜಾಲಹಳ್ಳಿಯಲ್ಲಿ ಸರಣಿ ಕಳ್ಳತನ ಘಟನೆ ನಡೆದಿದ್ದವು.

ಬೇಸತ್ತ ವ್ಯಾಪಾರಿಗಳು ಪೊಲೀಸ್ ಠಾಣೆ ಮುಂದೆ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ದರು. ಈಗಲೂ ಮನೆಕಳ್ಳತನ ಮಾಮೂಲಿ ಎನ್ನುವಂತಿದ್ದು, ಪೊಲೀಸರು ಕಳ್ಳರಿಗೆ ಹೆಡಮುರಿ ಕಟ್ಟುವಲ್ಲಿ ವಿಫಲಾಗಿದ್ದಾರೆ ಎಂಬ ಮಾತು ಜನಸಾಮಾನ್ಯರಿಂದ ಕೇಳಿಬರುತ್ತಿದೆ.

ದೂರು ಕೊಡಲು ಹಿಂದೇಟು

ಮನೆ, ಅಂಗಡಿ-ಮುಂಗಟ್ಟು, ವ್ಯಾಪಾರಿ ಮಳಿಗೆಯಲ್ಲಿ ಕಳ್ಳತನವಾದರೆ ದೂರು ಕೊಡಲು ಜನರು ಹಿಂದೇಟು ಹಾಕುತ್ತಾರೆ. ದೂರು ಕೊಡಲು ಹೋದರೆ ನೂರಾರು ಪ್ರಶ್ನೆ ಕೇಳಲಾಗುತ್ತಿದೆ. ಸಿಸಿ ಕ್ಯಾಮರಾ ಯಾಕೆ ಹಾಕಿಕೊಂಡಿಲ್ಲ? ಏನು ಕಳ್ಳತನವಾಗಿದೆ ? ಬಿಲ್ ಕೊಡಿ, ಖರೀದಿಸಿದ ರಸೀದಿ ಕೊಡಿ ಎಂದು ಕೇಳುತ್ತಾರೆ. ಕೆಲವರು ದೂರು ಕೊಟ್ಟರೂ ಕಳ್ಳರನ್ನು ಹಿಡಿದು ಪರಿಹಾರ ನೀಡಿಲ್ಲ. ನಿರ್ಮಾಣ ಹಂತದ ಕಟ್ಟಡದಲ್ಲಿ ಎಲೆಕ್ಟ್ರಾನಿಕ್ ವಸ್ತುಗಳ ಕದ್ದವರನ್ನು ವ್ಯಾಪಾರಿಗಳು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದರೂ ಕಳ್ಳತನ ಘಟನೆಗಳು ಕಡಿಮೆಯಾಗಿಲ್ಲ.

ಕೋಟ್: ನಮ್ಮ ಮನೆಯಲ್ಲಿ 8 ಲಕ್ಷ ರೂ. ಮೌಲ್ಯದ ವಿದ್ಯುತ್ ವೈರ್, ಪೇಂಟ್, ಎಲೆಕ್ಟ್ರಾನಿಕ್ ವಸ್ತುಗಳು ಹಾಗೂ ಸುತ್ತಮುತ್ತ ನಾಲ್ಕೈದು ಮನೆಯಲ್ಲಿ ಕಳ್ಳತನವಾಗಿದೆ. ಕಳ್ಳರನ್ನು ನಾವೇ ಹಿಡಿದು ಕೊಟ್ಟರೂ ಪರಿಹಾರ ಕೊಡಿಸಿಲ್ಲ. ರಾತ್ರಿ ಬೈಕ್‌ನಲ್ಲಿ ಕಳ್ಳರು ಓಡಾಡಿದರೂ ಕ್ರಮಕೈಗೊಂಡಿಲ್ಲ. ಕಳ್ಳತನ ಘಟನೆಗಳು ನಿಂತಿಲ್ಲ.

ಹನುಮರೆಡ್ಡಿ ಪಾಟೀಲ್, ಸ್ಥಳೀಯ ವ್ಯಾಪಾರಿ, ದೇವದುರ್ಗ

ಕೋಟ್: ದೇವದುರ್ಗದಲ್ಲಿ ಮೊಬೈಲ್ ಅಂಗಡಿಯಲ್ಲಿ ಕಳ್ಳತನವಾದ ಬಗ್ಗೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸಿಸಿ ಕ್ಯಾಮರಾ ಪರಿಶೀಲಿಸಿ ಕ್ರಮಕೈಗೊಳ್ಳುತ್ತೇವೆ. ಕಳ್ಳತನ ಹೆಚ್ಚಳದ ಬಗ್ಗೆ ಬೀಟ್, ನೈಟ್‌ರೌಂಡ್ ಹೆಚ್ಚಿಸಲು ಪೊಲೀಸರ ಸಭೆ ನಡೆಸಲಾಗುವುದು.

ದತ್ತಾತ್ರೇಯ ಕರ್ನಾಡ್, ಡಿವೈಎಸ್ಪಿ