ದೇವದುರ್ಗ: ಪಾಶ್ಚಿಮಾತ್ಯ ಸಂಸ್ಕೃತಿಗೆ ಮಾರು ಹೋಗುತ್ತಿರುವ ಯುವಜನತೆ ಸಂಸ್ಕಾರ, ಸಂಪ್ರದಾಯ ಮರೆಯುತ್ತಿದ್ದಾರೆ. ಇದರಿಂದ ಸಮಾಜ ಹಾದಿ ತಪ್ಪುವ ಆತಂಕವಿದ್ದು, ಪಾಲಕರು ಎಚ್ಚರವಹಿಸಬೇಕು ಎಂದು ಹೆಡಗಿಮುದ್ರಿಮಠದ ಶಾಂತಮಲ್ಲಿಕಾರ್ಜುನ ಪಂಡಿತರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಪಟ್ಟಣದ ಸಾರ್ವಜನಿಕ ಕ್ಲಬ್ ಮೈದಾನದಲ್ಲಿ ವೀರಶೈವ ಲಿಂಗಾಯತ ರೆಡ್ಡಿ ಸಮುದಾಯದಿಂದ ಭಾನುವಾರ ಆಯೋಜಿಸಿದ್ದ ಮಹಾಸಾಧ್ವಿ ಹೇಮರಡ್ಡಿ ಮಲ್ಲಮ್ಮ ಜಯಂತಿ ಕಾರ್ಯಕ್ರಮದ ಸಾನ್ನಿಧ್ಯವಹಿಸಿ ಮಾತನಾಡಿದರು.
600 ವರ್ಷಗಳ ಹಿಂದೆ ಸಂಸಾರದ ಜೀವನ ಹೇಗೆ ನಡೆಸಬೇಕೆಂದು ಕಲಿಸಿಕೊಟ್ಟ ಹೇಮರಡ್ಡಿ ಮಲ್ಲಮ್ಮ ಮಹಿಳೆಯರಿಗೆ ಮಾದರಿಯಾಗಿದ್ದಾರೆ. ಅವರು ಒಂದೇ ಸಮಾಜದಕ್ಕೆ ಸಿಮಿತವಾದವರಲ್ಲ. ಮಾನವ ಕುಲಕ್ಕೆ ಜೀವನದ ಸಂದೇಶ ಕೊಟ್ಟವರು. ಎಲ್ಲ ಸಮುದಾಯದವರು ಕೂಡಿ ವಿಚಾರಗಳನ್ನು ಅರಿಯಬೇಕು.
ಯುವಕರು ದೇಶದ ರೂವಾರಿಗಳಾಗಿದ್ದು, ದುಷ್ಟಟಗಳಿಗೆ ಬಲಿಯಾಗದೆ ಸಮಾಜದ ಚಿಂತಕರಾಗಬೇಕು. ಪಾಲಕರು ಮಕ್ಕಳಿಗೆ ಆಸ್ತಿ ಮಾಡಲು ಆದ್ಯತೆ ಕೊಡದೆ ಸಂಸ್ಕಾರ ಕೊಡಿಸಲು ಮುಂದಾಗಬೇಕು ಎಂದರು.
ಜಯಂತಲಿಂಗೇಶ್ವರ ಶಿವಾಚಾರ್ಯ, ಬೂದಿಬಸವ ಶಿವಾಚಾರ್ಯ, ಗೆಜ್ಜೆಬಾವಿ ಮಠದ ಕರಿಬಸವ ಶಿವಾಚಾರ್ಯ, ನೀಲಗಲ್‌ಮಠದ ಪಂಡಿತ್ ಶಿವಾಚಾರ್ಯ, ಶಿಖರಮಠದ ಸಿದ್ದರಾಮೇಶ್ವರ ಶಿವಾಚಾರ್ಯ, ಹೇಮರಡ್ಡಿ ಮಲ್ಲಮ್ಮ ಸಮಾಜದ ತಾಲೂಕು ಅಧ್ಯಕ್ಷ ಬುಡ್ಡನಗೌಡ ಜಾಗಟಗಲ್, ರಾಜ್ಯ ಕಾರ್ಯದರ್ಶಿ ಸಂಜೀವ್‌ರಡ್ಡಿ ಸಾಹುಕಾರ, ಪ್ರಮುಖರಾದ ಸಿ.ಎಸ್.ಪಾಟೀಲ್, ಶರಣಪ್ಪಗೌಡ ಕೊರವಿ, ಮಲ್ಲನಗೌಡ ಗೆಜ್ಜೆಬಾವಿ, ಶರಣಗೌಡ ಕಮತಗಿ, ವೆಂಕಟರಾಯ ಬೆನಕನ್ ಇತರರಿದ್ದರು.
ಮೆರವಣಿಗೆ: ಜಯಂತಿ ನಿಮಿತ್ತ ಹೇಮರಡ್ಡಿ ಮಲ್ಲಮ್ಮ ಭಾವಚಿತ್ರ ಮೆರವಣಿಗೆ ಅದ್ದೂರಿಯಾಗಿ ನಡೆಯಿತು. ಬೂದಿಬಸವೇಶ್ವರ ಮಠದಿಂದ ಸಾರ್ವಜನಿಕ ಕ್ಲಬ್ ಮೈದಾನದವರೆಗೆ ನಡೆದ ಮೆರವಣಿಗೆಯಲ್ಲಿ ಮಹಿಳೆಯರ ಕುಂಭ-ಕಳಸ ಗಮನ ಸೆಳೆಯಿತು. ಮಹಿಳಾ ಕಲಾವಿದರ ವೀರಗಾಸೆ, ಕುದುರೆ ಕುಣಿತ, ಡೊಳ್ಳಿನ ಕುಣಿತ ಜರುಗಿತು. ನೂರಾರು ಯುವಕರು ಡಾನ್ಸ್ ಮಾಡಿ ಸಂಭ್ರಮಿಸಿದರು.