ಜಿಲ್ಲೆ

ಗ್ರಾಪಂ ಮತ ಎಣಿಕೆಗೆ 18 ರೂಮ್ ಸಿದ್ಧಪಡಿಸಿದ್ದು, ಕರ್ತವ್ಯಕ್ಕೆ 279 ಸಿಬ್ಬಂದಿ ನಿಯೋಜನೆ

Raichur

ದೇವದುರ್ಗ: ಪಟ್ಟಣದ ಡಾನ್ ಬೋಸ್ಕೋ ಶಿಕ್ಷಣ ಸಂಸ್ಥೆಯಲ್ಲಿ ಡಿ.30ರಂದು ನಡೆಯಲಿರುವ ಗ್ರಾಪಂ ಚುನಾವಣೆಯ ಮತ ಎಣಿಕೆ ಪ್ರಕ್ರಿಯೆಗೆ ತಾಲೂಕು ಚುನಾವಣೆ ಆಯೋಗ ಸಕಲ ಸಿದ್ಧತೆ ಮಾಡಿಕೊಂಡಿದೆ.

ತಾಲೂಕಿನ 28ಗ್ರಾಪಂಯ 486ಸ್ಥಾನಗಳಿಗೆ ಮತದಾನ ನಡೆದಿದ್ದು, 18ರೂಮ್‌ಗಳಲ್ಲಿ ಮತ ಎಣಿಕೆ ಪ್ರಕ್ರಿಯೆ ನಡೆಯಲಿದೆ. ಪ್ರತಿ ರೂಮ್‌ನಲ್ಲಿ ನಾಲ್ಕು ಟೇಬಲ್ ಅಳವಡಿಸಿದ್ದು, ಮೇಲ್ವಿಚಾರಕರು, ಸಹಾಯಕ ಸಿಬ್ಬಂದಿ, ಆರ್‌ಒ ಹಾಗೂ ಪಿಆರ್‌ಒಗಳು ಮತ ಎಣಿಕೆಯಲ್ಲಿ ಭಾಗವಹಿಸುವರು.

73 ಮೇಲ್ವಿಚಾರಕರು, 146 ಸಹಾಯಕ ಸಿಬ್ಬಂದಿ, 28 ಆರ್‌ಒ ಹಾಗೂ 32 ಎಆರ್‌ಒ ನೇಮಕ ಮಾಡಲಾಗಿದೆ. ಶಾಂತಿಯುತವಾಗಿ ಮತ ಎಣಿಕೆ ನಡೆಸಲು ಅಗತ್ಯ ಪೊಲೀಸ್ ಬಂದೋಬಸ್ತ್ ಕೈಗೊಂಡಿದ್ದು, ಅಭ್ಯರ್ಥಿಗಳ ಪರ ಒಬ್ಬರಿಗೆ ಅವಕಾಶ ಕಲ್ಪಿಸಲಾಗುವುದು ಎಂದು ತಾಲೂಕು ಚುನಾವಣಾಧಿಕಾರಿ ಮಧುರಾಜ್ ಯಾಳಗಿ ತಿಳಿಸಿದ್ದಾರೆ.

ತಾಲೂಕಿನಲ್ಲಿ ಒಟ್ಟು 33ಗ್ರಾಪಂಗಳಿದ್ದು, ನಾನಾ ಕಾರಣದಿಂದ ಜಾಲಹಳ್ಳಿ, ಕರಡಿಗುಡ್ಡ, ಚಿಂಚೋಡಿ, ಹೇಮನಾಳ, ಶಾವಂತಗೇರಾ ಗ್ರಾಪಂಗೆ ಚುನಾವಣೆ ನಡೆದಿಲ್ಲ. ಉಳಿದ 28ಗ್ರಾಪಂ 544ಸ್ಥಾನಗಳಲ್ಲಿ 58ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಉಳಿದ 486 ಸ್ಥಾನಗಳಿಗೆ 1214ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೆ ಎಂದು ಗ್ರೇಡ್-2 ತಹಸೀಲ್ದಾರ್ ಶ್ರೀನಿವಾಸ್ ಚಾಪಲ್ ತಿಳಿಸಿದ್ದಾರೆ.