ಜಿಲ್ಲೆ

ಅಧ್ಯಾತ್ಮದಿಂದ ಸನ್ಮಾರ್ಗದಲ್ಲಿ ನಡೆಯಲು ಸಾಧ್ಯ

ಪ್ರವೀಣ ಉದುಸಾ ದಲಬಂಜನ್

ದೇವದುರ್ಗ: ಸಮಾಜದಲ್ಲಿ ಧರ್ಮ ಮಾರ್ಗದಿಂದ ವಿಮುಖವಾದರೆ ಸಮಾಜದಲ್ಲಿ ಶಾಂತಿಗೆ ಭಂಗ ಬರಲಿದೆ. ಅಧ್ಯಾತ್ಮ, ಗುರು-ಹಿರಿಯರಿಗೆ ಗೌರವ, ಮಾನವೀಯ ಮೌಲ್ಯಗಳು, ಸನ್ಮಾರ್ಗದ ಜೀವನವೇ ಧರ್ಮವಾಗಿದೆ ಎಂದು ನೀಲಗಲ್ ಬೃಹನ್ಮಠದ ರೇಣುಕಾ ಶಾಂತಮಲ್ಲ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ತಾಲೂಕಿನ ಗೋಪಳಾಪುರದ ಶಿವಲಿಂಗೇಶ್ವರ ದೇವಸ್ಥಾನದಲ್ಲಿ ಆಯೋಜಿಸಿದ್ದ ಶ್ರೀ ಸೂಗೂರೇಶ್ವರ ದೇವರ ಮಹಾಪುರಾಣ, ಪಲ್ಲಕ್ಕಿ ಮಹೋತ್ಸವ, ನಂದಿಕೋಲು ಸೇವೆ ಹಾಗೂ ಉಚ್ಛಾಯ ಕಾರ್ಯಕ್ರಮದಲ್ಲಿ ಸಾನ್ನಿಧ್ಯವಹಿಸಿ ಭಾನುವಾರ ಮಾತನಾಡಿದರು. ಧರ್ಮದಿಂದಲೇ ವಿಶ್ವಕ್ಕೆ ಶಾಂತಿ. ಧರ್ಮ ಅಳಿದರೆ ಮನುಕುಲ ವಿನಾಶದ ಹಂಚಿಕೆಗೆ ತಲುಪುತ್ತದೆ. ಸನ್ಮಾರ್ಗದಲ್ಲಿ ನಡೆಯುವುದೇ ನಿಜವಾದ ಧರ್ಮ. ಆದರೆ, ಇಂದು ಜನರು ಧರ್ಮ ಮಾರ್ಗದಿಂದ ವಿಮುಖರಾಗುತ್ತಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದರು.

ಗುರು-ಹಿರಿಯರಿಗೆ ನೀಡುವ ಗೌರವ ಕಡಿಮೆಯಾಗಿದ್ದು, ತಂದೆ ತಾಯಿಗಳನ್ನು ಮರೆಯುತ್ತಿದ್ದಾರೆ. ಮಾನವೀಯ ಮೌಲ್ಯಗಳು ಕ್ಷೀಣಿಸುವ ಹಂತಕ್ಕೆ ಬಂದಿವೆ. ಹೀಗಾಗಿಯೇ ಸಮಾಜದಲ್ಲಿ ಅನಾಚಾರಗಳು ನಡೆಯುತ್ತಿವೆ. ಅಧ್ಯಾತ್ಮದಿಂದ ಮಾತ್ರ ಸಮಾಜವನ್ನು ಸನ್ಮಾರ್ಗದಲ್ಲಿ ಮುನ್ನಡೆಸಲು ಸಾಧ್ಯ. ಜನರಿಗೆ ಗುರು ಹಾಗೂ ದೇವರ ಮೇಲೆ ನಂಬಿಕೆ ಇರಿಸಿ ಅವರು ತೋರುವಂತ ಸನ್ಮಾರ್ಗದಲ್ಲಿ ಮುನ್ನಡೆದರೆ ಮಾತ್ರ ಜೀವನದಲ್ಲಿ ಮುಕ್ತಿಹೊಂದಲು ಸಾಧ್ಯ ಎಂದರು.

ದೇವಸ್ಥಾನದಲ್ಲಿ ಬೆಳಗ್ಗೆ ವಿಶೇಷ ಪೂಜಾ ಕಾರ್ಯಕ್ರಮಗಳು ಜರುಗಿದವು. ಸಂಜೆ ಉಚ್ಛಾಯ ಕಾರ್ಯಕ್ರಮ ಜರುಗಿತು. ಸುಲ್ತಾನಪುರದ ಶಂಭು ಸೋಮನಾಥ ಶಿವಾಚಾರ್ಯ ಸ್ವಾಮೀಜಿ, ಗಬ್ಬೂರಿನ ಪಂಚಯ್ಯಸ್ವಾಮಿ ಕಂಬಮಠ, ಗಂಗಾಧರ ಶಿವಾಚಾರ್ಯ ಸ್ವಾಮೀಜಿ, ಪ್ರವಚನಕಾರರಾದ ನಾಗಭೂಷಣ, ಸಿದ್ದಯ್ಯ ಸ್ವಾಮಿ, ಕೃಷ್ಣ ಚೌಡಾಪುರ ಇತರರಿದ್ದರು.