ದೇವದುರ್ಗ: ತಾಲೂಕಿನ ವಿವಿಧೆಡೆ ಪೊಲೀಸರು, ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ಬುಧವಾರ ಜಂಟಿಯಾಗಿ ದಾಳಿ ನಡೆಸಿ ನಾಲ್ಕು ಹಿಟಾಚಿ, 3 ಟಿಪ್ಪರ್, 2 ಟ್ರ್ಯಾಕ್ಟರ್ ವಶಕ್ಕೆ ಪಡೆದು ಸುಮಾರು 25ಲಕ್ಷ ರೂ. ಮೌಲ್ಯದ 3 ಸಾವಿರ ಮೆಟ್ರಿಕ್ ಟನ್ ಮರಳು ಜಪ್ತಿ ಮಾಡಿದ್ದಾರೆ.
ಗೋಪಳಾಪುರ ಬಳಿ ಕೃಷ್ಣಾ ನದಿಯಲ್ಲಿ ಮರಳನ್ನು ಅಕ್ರಮವಾಗಿ ದಾಸ್ತಾನು ಮಾಡುತ್ತಿದ್ದ 2 ಹಿಟಾಚಿ ವಶಕ್ಕೆ ಪಡೆಯಲಾಗಿದ್ದು ಸುಮಾರು 6.32ಲಕ್ಷ ರೂ. ಮೌಲ್ಯದ 800ಮೆಟ್ರಿಕ್ ಟನ್ ಮರಳು ಜಪ್ತಿ ಮಾಡಲಾಗಿದೆ. ಇದೇ ಗ್ರಾಮದಲ್ಲಿ ನದಿಯಿಂದ ಮರಳು ಸಂಗ್ರಹಕ್ಕೆ ಬಳಸುತ್ತಿದ್ದ ಇನ್ನೆರಡು ಜೆಸಿಬಿಗಳನ್ನು ವಶಕ್ಕೆ ಪಡೆಯಲಾಗಿದ್ದು ಚಾಲಕರು ಪರಾರಿಯಾಗಿದ್ದಾರೆ.
ನಗರಗುಂಡ ಗ್ರಾಸ್‌ನಲ್ಲಿ ಮರಳು ಸಾಗಿಸುತ್ತಿದ್ದ ಟ್ರ್ಯಾಕ್ಟರ್ ವಶಕ್ಕೆ ಪಡೆದು 2 ಮೆಟ್ರಿಕ್ ಟನ್ ಮರಳು, ದೇವದುರ್ಗ-ಹೂವಿನಹೆಡಗಿ ರಸ್ತೆಯಲ್ಲಿ 25 ಮೆಟ್ರಿಕ್ ಮರಳು ಸಾಗಿಸುತ್ತಿದ್ದ 2 ಟಿಪ್ಪರ್ ವಶಕ್ಕೆ ಪಡೆಯಲಾಗಿದೆ. ಗೋಪಳಾಪುರದ ಸರ್ವೇ ನಂಬರ್ 36/2ರಲ್ಲಿ ಸಂಗ್ರಹಿಸಿದ್ದ ಸುಮಾರು 16.59 ಲಕ್ಷ ರೂ. ಮೌಲ್ಯದ 2100 ಮೆಟ್ರಿಕ್ ಟನ್ ಮರಳು ವಶಕ್ಕೆ ಪಡೆದು ಮಲ್ಲಿಕಾರ್ಜುನ ಶಾಂತಗೌಡ ವಿರುದ್ಧ ಕೇಸ್ ದಾಖಲಿಸಿಕೊಳ್ಳಲಾಗಿದೆ.