ದೇವದುರ್ಗ: ಪಟ್ಟಣದ ಬಿಎಚ್ ಕಲ್ಯಾಣ ಮಂಟಪದಲ್ಲಿ ಕೆಶಿನಾ ಅಭಿಮಾನಿ ಬಳಗದಿಂದ ಶಾಸಕ ಕೆ.ಶಿವನಗೌಡ ನಾಯಕ ಜನ್ಮ ದಿನ ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು. ಕರೊನಾ ವಾರಿಯರ್ಸ್‌ಗೆ ಸನ್ಮಾನ, ಪತ್ರಿಕಾ ವಿತರಕರಿಗೆ ಕಿಟ್ ವಿತರಣೆ, ಯುವಕರಿಂದ ರಕ್ತದಾನ ಬುಧವಾರ ಜರುಗಿತು.
ಬಸವ ಕೇಂದ್ರದ ಮುಖ್ಯಸ್ಥರಾದ ಶ್ರೀಬಸವ ದೇವರು ಅರವಿನಮನೆ ಕಾರ್ಯಕ್ರಮ ಉದ್ಘಾಟಿಸಿದರು. ಉಪನ್ಯಾಸಕ ಮುನಿಯಪ್ಪ ನಾಗೋಲಿ ಉಪನ್ಯಾಸ ನೀಡಿ, ಶಾಸಕ ಕೆ.ಶಿವನಗೌಡ ನಾಯಕ ಜನಕಲ್ಯಾಣಕ್ಕಾಗಿ ಹಗಲಿರುಳು ಶ್ರಮಿಸಿ ಕ್ಷೇತ್ರಕ್ಕೆ ಸಾವಿರಾರು ಕೋಟಿ ರೂ. ಅನುದಾನ ತಂದಿದ್ದಾರೆ. ಎಜುಕೇಷನ್ ಲೇಔಟ್, ಹೊಸ ಸರ್ಕಾರಿ ಕಚೇರಿ ಕಟ್ಟಡ ಸೇರಿ ಜಿಲ್ಲೆಗೆ ವಿಮಾನನಿಲ್ದಾಣ ತರುವಲ್ಲಿ ಶ್ರಮಿಸಿದ್ದಾರೆ. ಅವರಸೇವೆ ನಿರಂತರವಾಗಿ ಮುಂದುವರಿಯಲಿ ಎಂದರು.
ರಿಮ್ಸ್ ಆಡಳಿತ ಮಂಡಳಿ ಸದಸ್ಯ ಡಾ.ಎಚ್.ಎ.ನಾಡಗೌಡ ಮಾತನಾಡಿ, ಜಗತ್ತು ಕರೊನಾ ಮಹಾಮಾರಿಗೆ ನಲುಗಿದೆ. ಇದಕ್ಕೆ ಭಾರತ ಕೂಡ ಹೊರತಾಗಿಲ್ಲ. ಈ ರೋಗವನ್ನು ಔಷಧ, ಚಿಕಿತ್ಸೆ ಮೂಲಕ ನಿರ್ಮೂಲನೆ ಮಾಡುವ ಜತೆಗೆ ಸಾರ್ವಜನಿಕರು ಆರೋಗ್ಯ ಇಲಾಖೆ ನಿಯಮ ಪಾಲಿಸಿದರೆ, ಪರಿಣಾಮಕಾರಿಯಾಗಿ ತಡೆಯಬಹುದು. ಮಾಸ್ಕ್, ಸಾನಿಟೈಸರ್, ವ್ಯಕ್ತಗತ ಅಂತರ ಕಾಯ್ದುಕೊಳ್ಳಬೇಕು ಎಂದರು.
ವಿವಿಧ ಕ್ಷೇತ್ರದ ಸಾಧಕರಿಗೆ ಸನ್ಮಾನಿಸಲಾಯಿತು. ದೇನಾ ಬ್ಯಾಂಕ್ ನಿವೃತ್ತ ಮ್ಯಾನೇಜರ್ ಅನಂತರಾಜ್ ನಾಯಕ, ಜಿಪಂ ಮಾಜಿ ಸದಸ್ಯ ಪ್ರಕಾಶ ಪಾಟೀಲ್ ಜೇರಬಂಡಿ, ತಹಸೀಲ್ದಾರ್ ಮಧುರಾಜ್ ಯಾಳಗಿ, ತಾಪಂ ಇಒ ಪಂಪಾಪತಿ ಹಿರೇಮಠ, ಡಿಎಚ್‌ಒ ಡಾ.ಬನದೇಶ್ವರ, ಡಾ.ಆರ್.ಎಸ್.ಹುಲಿಮನಿ, ಹಂಪಿ ವಿವಿ ಸಿಂಡಿಕೇಟ್ ಸದಸ್ಯರಾದ ಬಸವರಾಜ ಕೊಪ್ಪರ, ಶರಣಗೌಡ ಸುಂಕೇಶ್ವರಹಾಳ, ರವಿಪಾಟೀಲ್ ಅಳ್ಳುಂಡಿ, ಶಿವಕುಮಾರ ಬಳೆ ಇತರರಿದ್ದರು.
ಕಾರ್ಯಕ್ರಮ ಅಚ್ಚುಕಟ್ಟಾಗಿ : ಶಾಸಕ ಕೆ.ಶಿವನಗೌಡ ನಾಯಕ ಅನುಪಸ್ಥಿತಿಯಲ್ಲಿ ಅವರ ಅಭಿಮಾನಿಗಳು ಅಚ್ಚುಕಟ್ಟಾಗಿ ಕಾರ್ಯಕ್ರಮ ಹಾಗೂ ರಕ್ತದಾನ ಶಿಬಿರ ನಡೆಸಿಕೊಟ್ಟರು. ಕರೊನಾ ತಡೆಗೆ ಶ್ರಮಿಸಿದ 476ಅಂಗನವಾಡಿ ಕಾರ್ಯಕರ್ತೆಯರು, 270ಆರೋಗ್ಯ ಇಲಾಖೆ ಸಿಬ್ಬಂದಿ ಹಾಗೂ ಅಧಿಕಾರಿಗಳು, ಪತ್ರಕರ್ತರು ಹಾಗೂ 245 ಆಶಾ ಕಾರ್ಯಕರ್ತೆಯರು, ಪತ್ರಿಕಾ ವಿತರಕರಿಗೆ ಸನ್ಮಾನಿಸಲಾಯಿತು. ಜತೆಗೆ ದುಡಿವ ವರ್ಗಕ್ಕೆ 10ಕ್ಕೂ ಹೆಚ್ಚು ಸಾಮಗ್ರಿ ಇರುವ ಆಹಾರದ ಕಿಟ್‌ಗಳನ್ನು ನೀಡಲಾಯಿತು. 150ಕ್ಕೂ ಹೆಚ್ಚು ಯುವಕರು, ಅಭಿಮಾನಿಗಳು ರಕ್ತದಾನ ಮಾಡಿದರು. ನಂತರ ಅಂಗವಿಕಲರಿಗೆ ಕೃತಕ ಕೈ, ಕಾಲು ಜೋಡಣೆ, ವೀಲ್‌ಚೇರ್ ಹಾಗೂ ಹ್ಯಾಂಡ್‌ಸ್ಟಿಕ್ ವಿತರಣೆ ಮಾಡಲಾಯಿತು.