ದೇವದುರ್ಗ: ಚುನಾವಣೆಗೆ ಇನ್ನೂ ಕೆಲ ತಿಂಗಳು ಬಾಕಿ ಇರುವಂತೆ ದಲಿತರಿಗೆ ಆಸೆ ತೋರಿಸಿ ತಮ್ಮತ್ತ ಸೆಳೆಯುವ ಕೆಲಸವನ್ನು ರಾಜ್ಯ ಸರ್ಕಾರ ಮಾಡುತ್ತಿದೆ ಎಂದು ಆಮ್ ಆದ್ಮಿ ಪಕ್ಷದ ಜಿಲ್ಲಾ ಘಟಕದ ಮಾಜಿ ಅಧ್ಯಕ್ಷ ಭೀಮರಾಯ ಜರದಬಂಡಿ ಆರೋಪಿಸಿದರು.
ವಿಧಾನಸಭಾ ಕ್ಷೇತ್ರವಾರು ಬೈಕ್ ವಿತರಣೆ ಹಾಗೂ ಗಂಗಾ ಕಲ್ಯಾಣ ಯೋಜನೆ ನೆಪದಲ್ಲಿ 75ಸಾವಿರ ರೂ. ನೇರವಾಗಿ ಬ್ಯಾಂಕ್ ಖಾತೆಗೆ ಹಾಕುವುದಾಗಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿಕೆ ನೀಡಿದ್ದಾರೆ. ಇದು ಚುನಾವಣೆ ಸಂದರ್ಭದಲ್ಲಿ ಮತದಾರರಿಗೆ ಆಮಿಷ ತೋರಿಸುವ ಪ್ರಯತ್ನವಾಗಿದೆ ಎಂದು ದೂರಿದರು.
ಎಸ್ಸಿ, ಎಸ್ಟಿ ನಿಗಮಗಳಿಂದ ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ 100 ಬೈಕ್‌ಗಳನ್ನು ವಿತರಿಸಲಾಗುವುದು. ಗಂಗಾ ಕಲ್ಯಾಣ ಯೋಜನೆಯಡಿ ಮಧ್ಯವರ್ತಿಗಳ ಹಾವಳಿ ತಪ್ಪಿಸುವ ನೆಪದಲ್ಲಿ ದಲಿತರ ಬ್ಯಾಂಕ್ ಖಾತೆಗೆ 75 ಸಾವಿರ ರೂ. ಹಾಕುವುದಾಗಿ ಗುರುವಾರ ಸಿಎಂ ಹೇಳಿಕೆ ನೀಡಿದ್ದಾರೆ. ಇದು ಆಮಿಷದ ರಾಜಕೀಯವಾಗಿದೆ.
ಸರ್ಕಾರ ಸುಳ್ಳುಗಳನ್ನು ಹೇಳಿ ಜನರ ಕಿವಿಮೇಲೆ ಹೂವು ಇಡುತ್ತಿದೆ. ಪರಿಶಿಷ್ಟ ಜಾತಿ ಮತ್ತು ಪಂಗಡದ ಮೀಸಲಾತಿ ಹೆಚ್ಚಳ ಇನ್ನೂ ಅನುಷ್ಠಾನವಾಗಿಲ್ಲ. ಈಗ ಮತ್ತೊಂದು ಆಮಿಷ ತೋರುತ್ತಿದ್ದಾರೆ ಎಂದು ಟೀಕಿಸಿದರು. ಜಿಲ್ಲೆಯ ಏಳು ವಿಧಾನಸಭಾ ಕ್ಷೇತ್ರದಲ್ಲಿ ಎಎಪಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಾಗುವುದು. ಈ ಬಗ್ಗೆ ಕೇಂದ್ರ ಸಮಿತಿ ಸಮೀಕ್ಷೆ ನಡೆಸುತ್ತಿದೆ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.