ಭೀಮನಗೌಡ 
ಜಿಲ್ಲೆ

ಕಾಂಗ್ರೆಸ್ ಚಿಂತನಾ ಮಂಥನಾ ಸಭೆ ಅ.2ಕ್ಕೆ

ದೇವದುರ್ಗ: ಮುಂಬರುವ ಜಿಪಂ, ತಾಪಂ ಹಾಗೂ ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ತಾಲೂಕಿನಲ್ಲಿ ಕಾಂಗ್ರೆಸ್ ಬಲಪಡಿಸಲು ಪಟ್ಟಣದ ಬಿ.ಎಚ್.ಕಲ್ಯಾಣ ಮಂಟಪದಲ್ಲಿ ಅ.2ರ ಬೆಳಗ್ಗೆ 10ಕ್ಕೆ ಕಾಂಗ್ರೆಸ್ ಕಾರ್ಯಕರ್ತರ ಚಿಂತನಾ ಮಂಥನಾ ಸಭೆ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಭೀಮನಗೌಡ ನಾಗಡದಿನ್ನಿ ಹೇಳಿದರು.

ಪಟ್ಟಣದ ಪತ್ರಿಕಾಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಂಗಳವಾರ ಮಾತನಾಡಿದರು. ರಾಜ್ಯ ಸರ್ಕಾರದ ಸಾಧನೆಗಳು ಹಾಗೂ ಐದು ಗ್ಯಾರೆಂಟಿಗಳನ್ನು ಜನರಿಗೆ ತಲುಪಿಸುವ ಜತೆಗೆ ಮುಂದಿನ ಚುನಾವಣೆ ದೃಷ್ಟಿಯಿಂದ ಸಭೆ ಕರೆಯಲಾಗಿದೆ. ಸಾಮೂಹಿಕ ನಾಯಕತ್ವದಲ್ಲಿ ಸಭೆ ಜರುಗಲಿದ್ದು ತಾಲೂಕಿನ ಎಲ್ಲ ವಿಭಾಗದ ಮುಖ್ಯಸ್ಥರು, ನಾಯಕರು, ಕಾರ್ಯಕರ್ತರು ಭಾಗವಹಿಸಲಿದ್ದಾರೆ ಎಂದರು.

ಕಾಂಗ್ರೆಸ್ ಸಂಘಟನೆ ಬಲಪಡಿಸಲು ಮುಂಬರುವ ದಿನಗಳಲ್ಲಿ ಬೃಹತ್ ಸಮಾವೇಶ ಆಯೋಜಿಸುವ ಯೋಜನೆ ಇದೆ. ಪೂರ್ವಭಾವಿ ಸಭೆಯಲ್ಲಿ ಈ ಬಗ್ಗೆ ಚರ್ಚಿಸಲಾಗುವುದು. ಕಾರ್ಯಕರ್ತರಲ್ಲಿ ಉಂಟಾಗಿರುವ ಗೊಂದಲಗಳನ್ನು ಪರಿಹರಿಸುವ ಜತೆಗೆ ಪಕ್ಷ ಸಂಘಟನೆ ಕುರಿತು ಸಭೆಯಲ್ಲಿ ಚರ್ಚೆ ಮಾಡಲಾಗುವುದು. ಸಭೆಗೆ ಪ್ರತಿಯೊಬ್ಬ ನಾಯಕರಿಗೂ ವೈಯಕ್ತಿಕವಾಗಿ ಆಹ್ವಾನ ನೀಡಲಾಗುವುದು. ಪಕ್ಷದಲ್ಲಿ ಸಣ್ಣಪುಟ್ಟ ಗೊಂದಲ, ಗುಂಪುಗಳು ಇರಬಹುದು. ಸಭೆಯ ಮೂಲಕ ಅವುಗಳಿಗೆ ಪರಿಹಾರ ಕಂಡುಕೊಳ್ಳಲಾಗುವುದು ಎಂದರು.

ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹುದ್ದೆಗೆ ನಾಲ್ಕೈದು ಜನ ಆಕಾಂಕ್ಷಿಗಳಿದ್ದು, ಎರಡ್ಮೂರು ತಿಂಗಳಲ್ಲಿ ಹೊಸ ಅಧ್ಯಕ್ಷರನ್ನು ನೇಮಕ ಮಾಡಲಾಗುವುದು. ಕೆಲ ಮುಖಂಡರಿಗೆ ಅಸಮಾಧಾನವಿದೆ. ಭಿನ್ನಾಭಿಪ್ರಾಯ ಬದಿಗೊತ್ತಿ ಲೋಕಸಭೆ ಹಾಗೂ ಜಿಪಂ, ತಾಪಂ ಚುನಾವಣೆಯಲ್ಲಿ ಅತಿಹೆಚ್ಚು ಸ್ಥಾನ ಗೆಲ್ಲಲು ಯೋಜನೆ ಮಾಡಲಾಗುವುದು. ಸಭೆಗೆ ತಾಲೂಕಿನ ಕಾರ್ಯಕರ್ತರು, ಮುಖಂಡರು, ನಾಯಕರು ಭಾಗವಹಿಸಿ ಯಶಸ್ವಿಗೊಳಿಸಬೇಕೆಂದು ಕೋರಿದರು.

ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ಗಂಗಪ್ಪಯ್ಯ ಪೂಜಾರಿ, ಹೇಮರೆಡ್ಡಿ, ಭೀಮರೆಡ್ಡಿ ಮಲದಕಲ್, ತಿಮ್ಮಣ್ಣ ಎನ್.ಗಣೇಕಲ್, ವೀರೇಶ ಪಾಟೀಲ್, ಹೂವಿನಹೆಡಗಿ, ಬಾಪುಗೌಡ ಚಿಕ್ಕಹೊನ್ನಕುಣಿ, ಪ್ರಕಾಶ ಪಾಟೀಲ್ ಇತರರಿದ್ದರು.