ದೇವದುರ್ಗ: ದಲಿತರಿಗೆ ಹಲಗೆ ಬಾರಿಸುವುದು ಹಾಗೂ ಕ್ರಾಂತಿಗೀತೆ ಹಾಡುವುದನ್ನು ಕಲಿಸಲು ಅ.12, 13 ಹಾಗೂ 14ರಂದು ತರಬೇತಿ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಮಾದಿಗ ಮೀಸಲಾತಿ ಹೋರಾಟ ಸಮಿತಿ ರಾಜ್ಯಾಧ್ಯಕ್ಷ ಶಿವರಾಜ ಅಕ್ಕರಕಿ ಹೇಳಿದರು.
ಪಟ್ಟಣದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಂಗಳವಾರ ಮಾತನಾಡಿದರು. ದಲಿತ ಹಾಗೂ ಪ್ರಗತಿಪರ ಸಂಘಟನೆಗಳ ಒಕ್ಕೂಟದಿಂದ ಪಟ್ಟಣದ ಡಾ.ಬಾಬು ಜಗಜೀವನ್‌ರಾಮ್ ಕಲ್ಯಾಣ ಮಂಟಪದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಪ್ರಮುಖವಾಗಿ ದಲಿತರ ಅಸ್ತ್ರ ಹಲಗೆ ಕಲೆ, ಕ್ರಾಂತಿಗೀತೆ ಹಾಡುವುದರ ಬಗ್ಗೆ ತರಬೇತಿ ನೀಡುವ ಜತೆಗೆ ಅದರ ಮಹತ್ವ ಕುರಿತು ಯುವಕರಿಗೆ ಅರಿವು ಮೂಡಿಸಲಾಗುವುದು ಎಂದರು.
ದಲಿತರಿಗೆ ಮೀಸಲಾತಿ, ರಾಜಕೀಯ ಸ್ಥಾನಮಾನಗಳು, ಸೌಲಭ್ಯ ಕಲ್ಪಿಸಲು ಡಾ.ಬಿ.ಆರ್.ಅಂಬೇಡ್ಕರ್ ಜೀವನವನ್ನೇ ಮುಡುಪಾಗಿ ಇಟ್ಟಿದ್ದರು. ಆದರೆ, ಅವರ ಮೇಲೆ ಒತ್ತಡ ಹಾಕಿ ಪೂನಾ ಒಪ್ಪಂದ ಮಾಡಲಾಯಿತು. ಇದರಿಂದ ಶೋಷಿತರಿಗೆ ಪೂರ್ಣಪ್ರಮಾಣದ ಅಧಿಕಾರ, ಅವಕಾಶ ದೊರೆತಿಲ್ಲ. ಹೀಗಾಗಿ ಪೂನಾ ಒಪ್ಪಂದದ ಬಗ್ಗೆ ಪರಾಮರ್ಶೆ ಮಾಡಲೇಬೇಕಾಗಿದೆ ಎಂದರು.
ಸಾಮೂಹಿಕ ಅಭಿವೃದ್ಧಿ ಎಂಬುದು ಕನಸಿನ ಮಾತಾಗಿದೆ. ಅಂಬೇಡ್ಕರ್ ಚಿಂತನೆಗಳ ಬಗ್ಗೆ ಅರಿವು ಮೂಡಿಸುವ ಜತೆಗೆ ಪೂನಾ ಒಪ್ಪಂದದ ಐತಿಹಾಸಿಕ ಘಟನೆ ಕುರಿತ ಚರ್ಚೆ, ಜಾಗೃತಿ ಸಭೆಗಳನ್ನು ರೂಪಿಸಲಾಗುತ್ತಿದೆ. ಹೋರಾಟ ಪರಿಣಾಮಕಾರಿಯಾಗಿ ರೂಪಿಸಲು ಹಲಿಗೆ ಬಾರಿಸಿಸುವುದು, ಕ್ರಾಂತಿ ಗೀತೆಗಳ ರಚನೆ ಮತ್ತು ಹಾಡುವ ಕುರಿತು ತರಬೇತಿ ನೀಡಲಾಗುವುದು. ಪ್ರಗತಿಪರರು, ಬುದ್ದಿಜೀವಿಗಳು, ಚಿಂತಕರು, ಕಲಾವಿದರು, ಸಾಹಿತಿಗಳು ಭಾಗವಹಿಸಲಿದ್ದಾರೆ. ಯುವಕರು ಇದರ ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.
ಹಿರೇಬೂದೂರು ಗ್ರಾಪಂ ಅಧ್ಯಕ್ಷ ಬೂದೆಪ್ಪ ಕ್ಯಾದಿಗಿ, ಮುಖಂಡರಾದ ಹನುಮಂತಪ್ಪ ಅಕ್ಕರಕಿ, ಶಾಂತಕುಮಾರ ಹೊನ್ನಟಗಿ, ಪ್ರಭು ದಳಪತಿ ಇದ್ದರು.