ದೇವದುರ್ಗ ಮಿನಿವಿಧಾನಸೌಧ ಮುಂದೆ ಗ್ರಾಮ ಆಡಳಿತ ಅಧಿಕಾರಿಗಳು ಗುರುವಾರ ಪ್ರತಿಭಟನೆ ನಡೆಸಿದರು. ತಾಲೂಕು ಅಧ್ಯಕ್ಷ ಭೀಮನಗೌಡ ಪಾಟೀಲ್, ಕಾರ್ಯದರ್ಶಿ ಭಾವಸಾಬ್, ರುದ್ರಪ್ಪ, ದೇವರೆಡ್ಡಿ, ಹನುಂತ್ರಾಯ ಹೊನ್ನಕಾಟಮಳ್ಳಿ, ಅಭಿಷೇಕ, ಬಸವರಾಜ, ರುಕ್ಮಿಣಿ, ಮಹಾದೇವ ಇತರರಿದ್ದರು. 
ಜಿಲ್ಲೆ

ನೌಕರರಿಗೆ ಸಮಸ್ಯೆಯಾಗಿವೆ ವೆಬ್ ತಂತ್ರಾಂಶಗಳು

ದೇವದುರ್ಗ: ಬೆಳೆ ಸಮೀಕ್ಷೆ ಕಾರ್ಯದಿಂದ ಬಿಡುಗಡೆ, ಪ್ರಯಾಣಭತ್ಯೆ ಹೆಚ್ಚಳ, 25 ಲಕ್ಷ ರೂ. ಜೀವವಿಮೆ ನೀಡುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯ ಕಂದಾಯ ಇಲಾಖೆ ನೌಕರರು ಕರ್ನಾಟಕ ರಾಜ್ಯ ಗ್ರಾಮ ಆಡಳಿತ ಅಧಿಕಾರಿಗಳ ಕೇಂದ್ರ ಸಂಘದ ನೇತೃತ್ವದಲ್ಲಿ ಕೈಗೊಂಡಿರುವ ಮುಷ್ಕರ ಶುಕ್ರವಾರ ಎರಡನೇ ದಿನ ಪೂರೈಸಿತು.

ಪಟ್ಟಣದ ಮಿನಿವಿಧಾನ ಸೌಧದ ಮುಂದೆ ಗುರುವಾರ ಧರಣಿ ನಡೆಸಿದ ನೌಕರರು ಶುಕ್ರವಾರ ಕೆಲಸಕ್ಕೆ ಗೈರಾಗಿದ್ದರು. ಕಂದಾಯ ಇಲಾಖೆಯಿಂದ ನಿಗದಿಪಡಿಸಿದ ಮೊಬೈಲ್ ವೆಬ್ ತಂತ್ರಾಂಶಗಳು ನೌಕರರಿಗೆ ಸಮಸ್ಯೆಯಾಗಿ ಪರಿಣಮಿಸಿವೆ. ಮೊಬೈಲ್ ಸಾಧನ, ಲ್ಯಾಪ್‌ಟಾಪ್, ಇಂಟರ್‌ನೆಟ್, ಸ್ಕ್ಯಾನರ್ ನೀಡದ ಕಾರಣ ಕೆಲಸ ಮಾಡಲು ಸಮಸ್ಯೆಯಾಗುತ್ತಿದೆ. ಆಧಾರ್ ಸೀಡ್, ಲ್ಯಾಂಡ್‌ಬೀಟ್, ಬಗರ್ ಹುಕಂ, ಹಕ್ಕುಪತ್ರ, ನಮೂನೆ 1ರಿಂದ 5ರ ವೆಬ್ ಅಪ್ಲಿಕೇಷನ್, ಪೌತಿ ಆಂದೋಲನ ಆ್ಯಪ್ ನಿರ್ವಹಣೆಗೆ ತೊಂದರೆಯಾಗಿದೆ. ಕಂದಾಯ ನೌಕರರ ಮೇಲೆ ದಾಳಿ ನಡೆಸಿದರೂ ಭದ್ರತೆ ಇಲ್ಲದಂತಾಗಿದೆ ಎಂದು ಆರೋಪಿಸಿದರು.

ಕೂಡಲೇ ಕಂದಾಯ ನೌಕರರಿಗೆ ಬೆಳೆ ಸಮೀಕ್ಷೆ, ಬೆಳೆ ಹಾನಿ ಪರಿಹಾರ ಸಮೀಕ್ಷೆಯಿಂದ ಮುಕ್ತಿ ನೀಡಿ ಆ ಕೆಲಸವನ್ನು ತೋಟಗಾರಿಕೆ, ಕೃಷಿ ಇಲಾಖೆಗೆ ವಹಿಸಬೇಕು. ಕರ್ತವ್ಯದ ವೇಳೆ ಮೃತಪಟ್ಟರೆ 25ಲಕ್ಷ ರೂ. ಪರಿಹಾರ ನೀಡಬೇಕು. ಅಂತರ ಜಿಲ್ಲಾ ವರ್ಗಾವಣೆಗೆ ಅವಕಾಶ ನೀಡಬೇಕು. ಪ್ರಯಾಣಭತ್ಯೆ ಮೂರು ಸಾವಿರ ರೂ.ಗೆ ಹೆಚ್ಚಿಸಬೇಕು. ಸರ್ಕಾರಿ ರಜೆ ದಿನಗಳಲ್ಲಿ ಮೆಮೋ ಹಾಕಬಾರದು. ಮೊಬೈಲ್ ತಂತ್ರಾಂಶದ ವಿಷಯವಾಗಿ ಅಮಾನತು ರದ್ದು ಮಾಡಬೇಕು. ಪೊಲೀಸ್ ಇಲಾಖೆಯಂತೆ 13 ತಿಂಗಳ ವೇತನ ನೀಡಬೇಕು ಎಂದು ಒತ್ತಾಯಿಸಿದರು.

ತಾಲೂಕು ಅಧ್ಯಕ್ಷ ಭೀಮನಗೌಡ ಪಾಟೀಲ್, ಕಾರ್ಯದರ್ಶಿ ಭಾವಸಾಬ್, ನೌಕರರಾದ ದೇವರೆಡ್ಡಿ, ಶರಣಯ್ಯಸ್ವಾಮಿ, ರುದ್ರಪ್ಪ, ಹನುಂತ್ರಾಯ ಹೊನ್ನಕಾಟಮಳ್ಳಿ, ಅಭಿಷೇಕ, ಬಸವರಾಜ, ರುಕ್ಮಿಣಿ, ಮಹಾದೇವ, ವೀರೇಶ ಕುಮಾರ, ದೀಪಾಜಿ ಕುಮಾರ, ಸಂತೋಷ ಕುಮಾರ, ಸಂಗಣ್ಣ, ಗಂಗಪ್ಪ, ರಂಜಿತಾ, ಕೆಂಚಬಸಪ್ಪ ಇತರರಿದ್ದರು.