ಮಳಿಗೆ ಬಂದ್ ಮಾಡಲು ಸ್ಪಂದಿಸದ ಜನ
ದೇವದುರ್ಗ: ಮಹಾಮಾರಿ ಕರೊನಾ ಎರಡನೇ ಅಲೆ ತಡೆಯಲು ಸರ್ಕಾರ ಮೇ 4ರವರೆಗೆ ಲಾಕ್‌ಡೌನ್ ಘೋಷಿಸಿದ್ದು, ತಾಲೂಕಿನಲ್ಲಿ ವ್ಯಾಪಾರಿಗಳಿಂದ ಸ್ಪಂದನೆ ಸಿಗದ ಕಾರಣ ಪುರಸಭೆ ಮಳಿಗೆಗಳು ಸೀಲ್‌ಡೌನ್ ಮಾಡಲು ಆರಂಭಿಸಿದೆ.
ಕಿರಾಣಿ ಅಂಗಡಿ, ಮೆಡಿಕಲ್, ಆಸ್ಪತ್ರೆ, ಹಾಲು, ಪೆಟ್ರೋಲ್ ಬಂಕ್ ಸೇರಿ ಅಗತ್ಯ ಸೇವೆ ಒದಗಿಸುವ ಮಳಿಗೆಗಳಿಗೆ ಮಧ್ಯಾಹ್ನ 2ರವರೆಗೆ ಅವಕಾಶ ನೀಡಿದ್ದನ್ನೇ ನೆಪ ಮಾಡಿಕೊಂಡು ಇತರ ವ್ಯಾಪಾರಿ ಮಳಿಗಳೂ ತೆರೆಯಲಾಗುತ್ತಿದೆ. ಪುರಸಭೆ ಸಿಬ್ಬಂದಿ ಮೌಖಿಕವಾಗಿ ಎಚ್ಚರಿಕೆ ನೀಡುವಾಗ ಮಳಿಗೆ ಬಂದ್ ಮಾಡಿ, ಅವರು ಆಚೆ ಹೋಗುತ್ತಿದ್ದಂತೆ ಮತ್ತೆ ಮಳಿಗೆ ತೆರೆಯುತ್ತಿದ್ದಾರೆ. ಇದರಿಂದ ಪುರಸಭೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಸೀಲ್‌ಡೌನ್ ಅಸ್ತ್ರ ಪ್ರಯೋಗಿಸುತ್ತಿದ್ದಾರೆ. ಸೋಮವಾರ ಬೆಳಗ್ಗೆಯಿಂದ ನೂರಾರು ಮಳಿಗೆಗಳಿಗೆ ಸೀಲ್‌ಡೌನ್ ಮಾಡಲಾಗಿದ್ದು, ನಿಯಮ ಮೀರಿದರೆ ಪ್ರಕರಣ ದಾಖಲಿಸುವುದಾಗಿ ಎಚ್ಚರಿಕೆ ನೀಡುತ್ತಿದ್ದಾರೆ.
ಪಟ್ಟಣದ ಕಟಕರಕಟ್ಟೆ, ಮಹಾತ್ಮಗಾಂಧಿ ವೃತ್ತ, ಬಂಗಾರ ಬಜಾರ್ ಮತ್ತಿತರ ಕಡೆ ಸೀಲ್‌ಡೌನ್ ಮಾಡುತ್ತಿದ್ದಾರೆ. ಬಂಗಾರದಂಗಡಿ, ಬಟ್ಟೆ ಮಳಿಗೆ, ಚಪ್ಪಲಿ ಅಂಗಡಿ, ಫರ್ನಿಚರ್ಸ್ ಮಳಿಗೆ, ಸೈಬರ್ ಕಂಪ್ಯೂಟರ್ ಸೇರಿ ಬಹುತೇಕ ವಾಣಿಜ್ಯ ಮಳಿಗೆಗಳನ್ನು ಸೀಲ್‌ಡೌನ್ ಮಾಡುತ್ತಿದ್ದಾರೆ.
ವ್ಯಾಪಾರಿಗಳ ಜತೆ ವಾಗ್ವಾದ : ಸೆಮಿಲಾಕ್‌ಡೌನ್ ಹಿನ್ನೆಲೆಯಲ್ಲಿ ವ್ಯಾಪಾರಿ ಮಳಿಗೆಗಳಿಗೆ ಸೀಲ್‌ಡೌನ್ ಮಾಡಲು ತೆರಳಿದ್ದ ಪುರಸಭೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಜತೆ ವ್ಯಾಪಾರಿಗಳು ವಾಗ್ವಾದ ನಡೆಸಿದರು. ಪಟ್ಟಣದಲ್ಲಿ ಸುಮಾರು 2ಸಾವಿರ ಮಳಿಗೆಗಳಿದ್ದು, ಬಹುತೇಕ ಸೀಲ್‌ಡೌನ್ ಮಾಡಲು ಪುರಸಭೆ ಮುಂದಾಗಿದೆ. ಸೀಲ್‌ಡೌನ್ ಮಾಡುವುದಾದರೆ ಎಲ್ಲ ಅಂಗಡಿಗಳಿಗೆ ಮಾಡಿ. ಕೆಲವು ಬಿಟ್ಟು, ಬಡವರು ಸಣ್ಣ-ಪುಟ್ಟ ಅಂಗಡಿಗಳಿಗೆ ಸೀಲ್‌ಡೌನ್ ಮಾಡುತ್ತಿದ್ದಾರೆ ಎಂದು ವ್ಯಾಪಾರಿಗಳು ಆಕ್ರೋಶ ವ್ಯಕ್ತಪಡಿಸಿದರು. ಪ್ರತಿಕ್ರಿಯಿಸಿದ ಅಧಿಕಾರಿಗಳು ಮೇಲಧಿಕಾರಿಗಳ ಆದೇಶ ಪಾಲಿಸುವುದಾಗಿ ತಿಳಿಸಿದರು. ಇದರಿಂದ ಮಾತಿನ ಚಕಮಕಿ ನಡೆಯಿತು.
ಮೇ 4ರವರೆಗೆ ವ್ಯಾಪಾರಿ ಮಳಿಗೆ ತೆರೆಯದಂತೆ ಮಾಲೀಕರಿಗೆ ಸೂಚನೆ ನೀಡಿದರೂ ನಿಯಮ ಉಲ್ಲಂಘಿಸಿದ್ದಾರೆ. ಹೀಗಾಗಿ ಅವಶ್ಯ ವಸ್ತುಗಳ ಮಾರಾಟ ಮಳಿಗೆ ಹೊರತುಪಡಿಸಿ ಉಳಿದ ಮಳಿಗೆಗಳಿಗೆ ಸೀಲ್‌ಡೌನ್ ಮಾಡಿದ್ದೇವೆ. ನಿಯಮ ಮೀರಿದರೆ ಮಾಲೀಕರ ವಿರುದ್ಧ ಪ್ರಕರಣ ದಾಖಲಿಸುತ್ತೇವೆ.| ಶರಣಪ್ಪ ಪುರಸಭೆ ಮುಖ್ಯಾಧಿಕಾರಿ