ದೇವದುರ್ಗ ತಾಲೂಕು ನಾಗಡದಿನ್ನಿಯಲ್ಲಿ ಶ್ರೀನಿವಾಸ್ ರಾಮಾನುಜನ್ ಜನ್ಮದಿನ ನಿಮಿತ್ತ ಗಣಿತ ದಿನ ಆಚರಿಸಲಾಯಿತು.  
ಜಿಲ್ಲೆ

ಲೆಕ್ಕಾಚಾರವಿಲ್ಲದ ಬದುಕು ಶೂನ್ಯ- ಮುಖ್ಯಶಿಕ್ಷಕಿ ಪದ್ಮಜಾ ಅಭಿಮತ

Raichur

ದೇವದುರ್ಗ: ಪ್ರತಿಯೊಬ್ಬ ವ್ಯಕ್ತಿಯ ದಿನನಿತ್ಯದ ಜೀವನದಲ್ಲಿ ಗಣಿತ ಒಂದಿಲ್ಲೊಂದು ರೀತಿಯಲ್ಲಿ ಹಾಸುಹೊಕ್ಕಾಗಿದೆ. ಲೆಕ್ಕಚಾರವಿಲ್ಲದ ಬದುಕು ಬದುಕೇ ಎನಿಸಿಕೊಳ್ಳಲಾರದು ಎಂದು ನಾಗಡದಿನ್ನಿ ಪ್ರೌಢಶಾಲೆ ಮುಖ್ಯಶಿಕ್ಷಕಿ ಎಸ್.ಡಿ.ಪದ್ಮಜಾ ಹೇಳಿದರು.

ತಾಲೂಕಿನ ನಾಗಡದಿನ್ನಿ ಸರ್ಕಾರಿ ಪ್ರೌಢಶಾಲೆಯಲ್ಲಿ ಗಣಿತ ಶಾಸ್ತ್ರಜ್ಞ ಶ್ರೀನಿವಾಸ್ ರಾಮಾನುಜನ್ ಜನ್ಮದಿನದ ಅಂಗವಾಗಿ ಸೋಮವಾರ ಹಮ್ಮಿಕೊಂಡಿದ್ದ ರಾಷ್ಟ್ರೀಯ ಗಣಿತ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿ, ವ್ಯಕ್ತಿ ಹುಟ್ಟಿನಿಂದ ಅಂತ್ಯದವರೆಗೆ ಪ್ರತಿಕ್ಷಣದಲ್ಲೂ ಗಣಿತದಡಿ ಬದುಕುತ್ತಾನೆ. ಪಠ್ಯದಲ್ಲಿ ಬರುವ ಲೆಕ್ಕಗಳ ಜತೆಗೆ ನಿತ್ಯ ಜೀವನದ ಪ್ರತಿ ಹೆಜ್ಜೆಯಲ್ಲೂ ಬೆರೆತಿರುವ ಗಣಿತ ಮಹತ್ವವಾಗಿದೆ ಎಂದರು.

ಶಿಕ್ಷಕ ಸುಧಾಕರ್ ಪಾಟೀಲ್ ಮಾತನಾಡಿ, ಗಣಿತ ಕಬ್ಬಿಣದ ಕಡಲೆ ಅಲ್ಲ. ಅದನ್ನು ಪ್ರತಿನಿತ್ಯ ಅಭ್ಯಸಿಸಿದರೆ ಸುಲಭವಾಗಿ ಕಲಿಯಬಹುದು. ವಿದ್ಯಾರ್ಥಿಗಳ ಮನಸ್ಸಿನಲ್ಲಿರುವ ಗಣಿತಕ್ಕೆ ಸಂಬಂಧಿಸಿದ ಭಯವನ್ನು ತೆಗೆದುಹಾಕುವ ಗುರಿ ಈ ದಿನ ಮಹತ್ವದ್ದಾಗಿದೆ ಎಂದು ಹೇಳಿದರು. ಮುಖಂಡರಾದ ಬಸಪ್ಪಗೌಡ, ನಿರ್ಮಲಾ ಪಾಟೀಲ್, ಮುಕ್ತ, ಗಾಳೆಪ್ಪ, ಚನ್ನಯ್ಯ ತಾತ, ಶ್ರೀನಿವಾಸ್ ಎಳ್ವಾರ್, ಸಂಗಪ್ಪ ಕೋಟೆಕಲ್ ಇತರರಿದ್ದರು.