ನಾರಾಯಣಪುರ ಜಲಾಶಯದಿಂದ ಕೃಷ್ಣಾನದಿಗೆ 14 ಕ್ರಸ್ಟ್ ಗೇಟ್‌ಗಳ ಮೂಲಕ ನದಿಗೆ ನೀರು ಹರಿಸಲಾಯಿತು. 
ಜಿಲ್ಲೆ

ಕೃಷ್ಣಾ ನದಿಗೆ 52 ಸಾವಿರ ಕ್ಯೂಸೆಕ್ ನೀರು ಬಿಡುಗಡೆ

ಶಾಮಸುಂದರ್ ಕೊಪ್ಪಳಕರ್

ದೇವದುರ್ಗ: ನಾರಾಯಣಪುರದ ಬಸವ ಸಾಗರ ಜಲಾಶಯದಿಂದ ಕೃಷ್ಣಾನದಿಗೆ ಶುಕ್ರವಾರ ರಾತ್ರಿ 52,704 ಕ್ಯೂಸೆಕ್ ನೀರು ಹರಿಬಿಡಲಾಯಿತು. ಕೃಷ್ಣಾ ಮೇಲ್ದಂಡೆಯಲ್ಲಿ ಉತ್ತಮ ಮಳೆಯಾಗುತ್ತಿರುವ ಕಾರಣ ಡ್ಯಾಂನಿಂದ ಮುಂಜಾಗ್ರತೆ ಕ್ರಮವಾಗಿ ನದಿಗೆ ನೀರು ಹರಿಸಲಾಗುತ್ತಿದೆ.

ಯಾದಗಿರಿ ಜಿಲ್ಲೆ ಹಾಗೂ ಕೃಷ್ಣಾನದಿ ಮೇಲ್ದಂಡೆಯಲ್ಲಿ ಎರಡ್ಮೂರು ದಿನಗಳಿಂದ ಉತ್ತಮ ಮಳೆಯಾಗಿದ್ದು ಅಪಾರ ಪ್ರಮಾಣದ ನೀರು ಬರುತ್ತಿದೆ. ಸದ್ಯ ಜಲಾಶಯದಲ್ಲಿ 45 ಸಾವಿರ ಕ್ಯೂಸೆಕ್ ನೀರು ಒಳಹರಿವು ಇದ್ದು, ಮುಂಜಾಗ್ರತವಾಗಿ 14 ಕ್ರಸ್ಟ್ ಗೇಟ್‌ಗಳ ಮೂಲಕ 52 ಸಾವಿರ ಕ್ಯೂಸೆಕ್ ನೀರು ಹೊರಬಿಡಲಾಗಿದೆ. 33 ಟಿಎಂಸಿ ಅಡಿ ಸಾಮರ್ಥ್ಯದ ಜಲಾಶಯದಲ್ಲಿ ಸದ್ಯ 28.45ಟಿಎಂಸಿ ಅಡಿ(ಶೇ.85.41) ನೀರಿನ ಸಂಗ್ರಹವಿದೆ. ಶುಕ್ರವಾರ ರಾತ್ರಿ 52 ಸಾವಿರ ಕ್ಯೂಸೆಕ್ ನದಿಗೆ ಹರಿಸಿದ್ದರಿಂದ ನದಿದಂಡೆ ಗ್ರಾಮಗಳಲ್ಲಿ ತಾಲೂಕು ಆಡಳಿತ ಮುಂಜಾಗ್ರತೆ ಕ್ರಮಕೈಗೊಂಡಿದೆ.

ಗ್ರಾಪಂಯಿಂದ ನದಿದಂಡೆ ಸುಮಾರು 25ಕ್ಕೂ ಹೆಚ್ಚು ಹಳ್ಳಿಗಳಲ್ಲಿ ಡಂಗೂರು ಸಾರಿದ್ದು ನದಿಗೆ ಇಳಿಯದಂತೆ ಎಚ್ಚರಿಕೆ ನೀಡಲಾಗಿದೆ. ಅಲ್ಲದೆ ನದಿಗೆ ಪಂಪ್‌ಸೆಟ್ ಅಳವಡಿಸಿದ ರೈತರಿಗೆ ತೆರವಿಗೆ ಸೂಚನೆ ನೀಡಲಾಗಿದೆ. ಕಂದಾಯ ಇಲಾಖೆ ಅಧಿಕಾರಿಗಳು ಜನರಿಗೆ ಅರಿವು ಮೂಡಿಸುತ್ತಿದ್ದಾರೆ ಎಂದು ತಹಸೀಲ್ದಾರ್ ಚನ್ನಮಲ್ಲಪ್ಪ ಘಂಟಿ ತಿಳಿಸಿದ್ದಾರೆ.