ಒಳಮೀಸಲಾತಿ ಜಾರಿಗೆ ಆಗ್ರಹಿಸಿ ದೇವದುರ್ಗದ ಅಂಬೇಡ್ಕರ್ ವೃತ್ತದಲ್ಲಿ ವಿವಿಧ ದಲಿತ ಪರ ಸಂಘಟನೆಗಳು ಪ್ರತಿಭಟನೆ ನಡೆಸಿದವು. ಮುಖಂಡರಾದ ಶಿವರಾಯ ಅಕ್ಕರಕಿ, ಮಾನಪ್ಪ ಮೇಸ್ತ್ರಿ, ಬೂತೆಪ್ಪ ದೇವರಮನಿ, ಲಿಂಗಪ್ಪ, ರಮೇಶ, ಶಿವಪ್ಪ ಬಲ್ಲಿದವ್, ರಾಜಪ್ಪ ಗಬ್ಬೂರು, ಶಾಂತಕುಮಾರ ಹೊನ್ನಟಿಗಿ, ವಿಶ್ವನಾಥ ಬಲ್ಲಿದವ್, ಮೋಹನ ಬಲ್ಲಿದವ್ ಇದ್ದರು 
ಜಿಲ್ಲೆ

ದೇವದುರ್ಗ ಬಂದ್‌ಗೆ ಉತ್ತಮ ಸ್ಪಂದನೆ

ಪ್ರವೀಣ ಉದುಸಾ ದಲಬಂಜನ್

ದೇವದುರ್ಗ: ಸುಪ್ರೀಂಕೋರ್ಟ್ ಆದೇಶದಂತೆ ದಲಿತರಿಗೆ ಜನಸಂಖ್ಯೆ ಆಧಾರಿತ ಮೀಸಲು ಸೌಲಭ್ಯ ಕಲ್ಪಿಸಲು ಒಳಮೀಸಲಾತಿ ಜಾರಿಗೊಳಿಸುವಂತೆ ಒತ್ತಾಯಿಸಿ ಒಳಮೀಸಲಾತಿ ಐಕ್ಯ ಹೋರಾಟ ಸಮಿತಿ ಕರೆ ನೀಡಿದ್ದ ರಾಯಚೂರು ಬಂದ್‌ಗೆ ಗುರುವಾರ ಪಟ್ಟಣದಲ್ಲಿ ಉತ್ತಮ ಬೆಂಬಲ ದೊರೆಯಿತು.
ವಿವಿಧ ದಲಿತ ಸಂಘಟನೆಗಳ ಒಕ್ಕೂಟದ ಮುಖಂಡರು ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ಕಲ್ಮಲಾ ತಿಂಥಣಿ ಬ್ರಿಡ್ಜ್ ರಾಜ್ಯ ಹೆದ್ದಾರಿ ಸಂಚಾರ ತಡೆ ನಡೆಸಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಇದಕ್ಕೂ ಮುನ್ನ ಪಟ್ಟಣದ ವಿವಿಧ ಬಡಾವಣೆಯ ಮೂಲಕ ಬೃಹತ್ ಪ್ರತಿಭಟನೆ ರ‌್ಯಾಲಿ ನಡೆಸಿದರು.

ದಲಿತರಲ್ಲಿ ಜನಸಂಖ್ಯಾ ಆಧಾರಿತ ಒಳಮೀಸಲಾತಿ ಜಾರಿಗೊಳಿಸಲು ಸುಪ್ರೀಂಕೋರ್ಟ್‌ನ ಏಳು ಸದಸ್ಯರ ಒಳಗೊಂಡ ಪೀಠ ತೀರ್ಪು ನೀಡಿದೆ. ಒಳಮೀಸಲಾತಿಗಾಗಿ 15ವರ್ಷಗಳಿಂದ ನಿರಂತರವಾಗಿ ಹೋರಾಟ ನಡೆಸಲಾಗುತ್ತಿದೆ. ನ್ಯಾ.ಸದಾಶಿವ ಆಯೋಗ ಒಳಮೀಸಲಾತಿ ಜಾರಿಗೆ ಸರ್ಕಾರಕ್ಕೆ ವರದಿ ಸಲ್ಲಿಸಿದೆ. ಅದನ್ನು ಅಂಗೀಕರಿಸಿ ಕೇಂದ್ರ ಸರ್ಕಾರಕ್ಕೆ ಕಳಿಸದೆ ಕಾಂಗ್ರೆಸ್ ಸರ್ಕಾರ ಉಪಸಮಿತಿ ರಚನೆ ಮಾಡಿ ಕಾಲರಣ ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕೂಡಲೇ ರಾಜ್ಯ ಸರ್ಕಾರ ಸುಪ್ರೀಂಕೋರ್ಟ್ ಆದೇಶದಂತೆ ಒಳಮೀಸಲಾತಿ ಜಾರಿಗೊಳಿಸಬೇಕು ಎಂದು ಆಗ್ರಹಿಸಿದರು. ವಿವಿಧ ಸಂಘಟನೆಯ ಮುಖಂಡರಾದ ಶಿವರಾಯ ಅಕ್ಕರಕಿ, ಶಿವಪ್ಪ ಬಲ್ಲಿದವ್, ರಾಜಪ್ಪ ಸಿರವಾರಕರ್, ಶಾಂತಕುಮಾರ ಹೊನ್ನಟಗಿ, ವಿಶ್ವನಾಥ ಬಲ್ಲಿದವ್, ಮೋಹನ ಬಲ್ಲಿದವ್, ದೇವರಾಜ, ನಿಂಗಪ್ಪ ಇತರರಿದ್ದರು.