ಜಿಲ್ಲೆ

ಸಮುದಾಯ ಅಭಿವೃದ್ಧಿಗೆ ಶಿಕ್ಷಣವೇ ಸಾಧನ

Raichur


ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಮಾನಪ್ಪ ಅಭಿಮತ ಅಲೆಮಾರಿ ಸಮುದಾಯದವರಿಗೆ ಅರಿವು ಕಾರ್ಯಕ್ರಮ

ದೇವದುರ್ಗ: ಯಾವುದೇ ಹಿಂದುಳಿದ ಸಮುದಾಯ ಅಭಿವೃದ್ಧಿ ಹೊಂದಿ ಸಮಾಜದ ಮುಖ್ಯವಾಹಿನಿಗೆ ಬರಲು ಶಿಕ್ಷಣವೇ ಪ್ರಮುಖ ಸಾಧನ ಎಂದು ತಾಲೂಕು ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಮಾನಪ್ಪ ಬಡಿಗೇರ್ ಹೇಳಿದರು.

ತಾಲೂಕಿನ ಸೋಮನಮರಡಿ ಗ್ರಾಪಂ ವ್ಯಾಪ್ತಿಯ ಗೊಲ್ಲರದೊಡ್ಡಿಯಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ ಅಲೆಮಾರಿ, ಅರೆಅಲೆಮಾರಿ ಸಮುದಾಯದವರಿಗೆ ವಿವಿಧ ಯೋಜನೆಗಳ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮವನ್ನು ಬುಧವಾರ ಉದ್ಘಾಟಿಸಿ ಮಾತನಾಡಿದರು.

ಅಲೆಮಾರಿ, ಅರೆ ಅಲೆಮಾರಿಗಳ ಅಭಿವೃದ್ಧಿಗೆ ಸರ್ಕಾರ ವಿದ್ಯಾರ್ಥಿವೇತನ, ವಸತಿ, ನಿವೇಶನ, ಸಹಾಯಧನ, ಸಾಲ, ಕಾಲನಿ ಅಭಿವೃದ್ಧಿಯಂಥ ಸೌಲಭ್ಯಗಳಿಗೆ ವಿಶೇಷ ಅನುದಾನ ನೀಡುತ್ತಿದೆ. ಯೋಜನೆಗಳ ಬಗ್ಗೆ ಸಮುದಾಯದ ಜನ ತಿಳಿವಳಿಕೆ ಹೊಂದಿ ಸರ್ಕಾರದ ಯೋಜನೆಗಳ ಸದುಪಯೋಗ ಪಡೆಯಬೇಕು. ಈ ಹಿನ್ನಲೆಯಲ್ಲಿ ಇಲಾಖೆ ಅಲೆಮಾರಿ ಜನಜಾಗೃತಿಗೆ ಇಂಥ ಕಾರ್ಯಕ್ರಮಗಳನ್ನು ಸಂಘಟಿಸಿದೆ. ಮುಂದಿನ ದಿನಗಳಲ್ಲಿ ಸೌಲಭ್ಯ ಒದಗಿಸಲು ಇಲಾಖೆ ಸಿದ್ಧ ಎಂದರು.

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿ ಮಾನಮ್ಮ ಮಾತನಾಡಿ, ಅಲೆಮಾರಿ ಸಮುದಾಯಗಳು ಮೂಢನಂಬಿಕೆ ಕಂದಾಚಾರಗಳು, ಬಾಲ್ಯವಿವಾಹದಂಥ ಅನಿಷ್ಠ ಪದ್ಧತಿಗಳಿಂದ ದೂರಾಗಬೇಕು. ಪೌಷ್ಟಿಕ ಆಹಾರ, ಸರ್ಕಾರದ ಸೌಲಭ್ಯಗಳ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಗಳಲ್ಲಿ ಭಾಗವಹಿಸಬೇಕು ಎಂದರು.

ಗ್ರಾಪಂ ಅಧ್ಯಕ್ಷೆ ಅನ್ನಪೂರ್ಣಾ ದುರಗಪ್ಪ, ಸದಸ್ಯೆ ಲಕ್ಷ್ಮೀ ಬಸವರಾಜ, ಪಿಡಿಒ ಮಲ್ಲಪ್ಪ, ಕಾರ್ಯದರ್ಶಿ ಮಂಜುನಾಥ, ಮಲ್ಲಣ್ಣ, ನಿಲಯ ಮೇಲ್ವಿಚಾರಕ ಅರ್ಜುನ, ಭೀಮಣ್ಣ, ಗೊಲ್ಲ ಸಮುದಾಯದ ಮುಖಂಡರಾದ ಧರ್ಮಣ್ಣ ಪೂಜಾರಿ, ಗಿರಿಯಪ್ಪ ಯಾದವ್, ಚಂದ್ರಾಮಪ್ಪ ಇದ್ದರು.