ದೇವದುರ್ಗ: ಮುಂಗಾರು ಆರಂಭವಾಗಿ ಒಂದೂವರೆ ತಿಂಗಳು ಕಳೆದರೂ ಸಮರ್ಪಕ ಮಳೆಯಾಗದ ಕಾರಣ ತಾಲೂಕಿನ ವಿವಿಧ ಗ್ರಾಮಗಳ ರೈತಾಪಿ ಜನರು ದೇವರ ಮೊರೆ ಹೋಗಿದ್ದಾರೆ. ಜಾಗಟಗಲ್, ಸುಲ್ತಾನಪುರ, ಇಂಗಳದಾಳ, ಬೂದಿನಾಳ ಸೇರಿ ವಿವಿಧ ಗ್ರಾಮಗಳಲ್ಲಿ ಪೂಜೆ, ಭಜನೆ ಕಾರ್ಯಕ್ರಮ ಕೈಗೊಂಡಿದ್ದಾರೆ.
ಸುಲ್ತಾನಪುರದ ಶಂಭು ಸೋಮನಾಥ ಶಿವಾಚಾರ್ಯರ ಸೂಚನೆಯಂತೆ ಇಂಗಳದಾಳ ಹಾಗೂ ಜಾಗಟಗಲ್ ಗ್ರಾಮದಲ್ಲಿ ಭಕ್ತರು ಭಿನ್ನವಾದ ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ. ಜಾಗಟಗಲ್ ರಾಚಯ್ಯತಾತನ ಶರಣರ ಗದ್ದುಗೆಯಲ್ಲಿ ಏಳು ದಿನಗಳ ಕಾಲ ದಿನದ 24 ಗಂಟೆಯಂತೆ ಸಪ್ತ ಭಜನೆ ಕೈಗೊಳ್ಳಲಾಗಿದೆ. ಸೋಮವಾರ ಬೆಳಗ್ಗೆ 6ಕ್ಕೆ ಮಡಿಬಟ್ಟೆಯಲ್ಲಿ ಭಜನೆ ಕೈಗೊಂಡಿದ್ದು ಜು.22ರವರೆಗೆ ಜರುಗಲಿದೆ. ದಿನದ 24 ಗಂಟೆ ದೇವರ ಮೊರೆಹೋಗುತ್ತಿದ್ದು ಭಜನೆ ಮಾಡಲು ಎರಡು ತಂಡರಚನೆ ಮಾಡಲಾಗಿದೆ. ಹನುಮಯ್ಯ ಸ್ವಾಮಿ, ಸುನಿಲ್‌ಕುಮಾರ ಗಡ್ಡಿಮಠ ತಂಡ ತಲಾ ಎರಡುಗಂಟೆಯಂತೆ ನಿರಂತರ ಭಜನೆ ಮಾಡಲಿದೆ. ಬೆಟ್ಟಪ್ಪಯ್ಯ ತಾತ, ರಾಚಪಯ್ಯ ತಾತ, ವಿರೂಪಾಕ್ಷಪ್ಪ ತಾತ, ಸಾಂಬಯ್ಯಪ್ಪ ತಾತ ಮಾರ್ಗದರ್ಶನದಲ್ಲಿ ಸಪ್ತಭಜನೆ ಜರುಲಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.
ಇಂಗಳದಾಳದಲ್ಲಿ ಮಕ್ಕಳು ಒಳಗೊಂಡಂತೆ ಭಕ್ತರು ಜಲಾಭಿಷೇಕ ಪ್ರಾರ್ಥನೆ ಕೈಗೊಂಡಿದ್ದಾರೆ. ಸುಮಾರು 30 ಭಕ್ತರು ಗ್ರಾಮದ ಏಳು ದೇವರಿಗೆ ಜಲಾಭಿಷೇಕ ಕೈಗೊಂಡಿದ್ದಾರೆ. ಬೆಳಗ್ಗೆ ಮಡಿಬಟ್ಟೆಯಲ್ಲಿ ಊರಿನ ಸೇದಾಬಾವಿ ನೀರನ್ನು ವಿರುಪಯ್ಯ ತಾತ, ಆಂಜನೇಯ, ಎಮ್ಮಡಗಿ ತಾತ, ಮಾರೆಮ್ಮ ದೇವಿ ಸೇರಿ ಏಳು ದೇವಸ್ಥಾನದ ದೇವರಿಗೆ ಜಲಾಭಿಷೇಕ ಮಾಡುತ್ತಿದ್ದಾರೆ.