ದೇವದುರ್ಗ ತಾಲೂಕಿಗೆ ಸೇರಲು ಪಲಕನಮರಡಿ ಗ್ರಾಪಂನಲ್ಲಿ ಸಭೆ ನಡೆಯಿತು. ಗ್ರಾಪಂ ಅಧ್ಯಕ್ಷ ಅಮರೇಶ ನಾಯಕ, ಪಿಡಿಒ ಅಯ್ಯಪ್ಪ, ಸದಸ್ಯರಾದ ಸಿದ್ದನಗೌಡ ಪಾಟೀಲ್, ವೀರನಗೌಡ, ಅಯ್ಯಮ್ಮ, ದೌಲಾಬೀ ಇತರರಿದ್ದರು. 
ಜಿಲ್ಲೆ

ಅಖಂಡ ದೇವದುರ್ಗದತ್ತ ಜನಾಸಕ್ತಿ

ಅಮರೇಶ ಚಿಲ್ಕರಾಗಿ

ದೇವದುರ್ಗ: ಅಖಂಡ ದೇವದುರ್ಗ ವಿಭಜನೆಗೊಂಡು ಅರಕೇರಾ ನೂತನ ತಾಲೂಕು ಘೋಷಿಸಿದ ನಂತರ ಜನರ ಭಿನ್ನಾಭಿಪ್ರಾಯ ಮುಂದುವರಿದಿವೆ. ಇದರ ನಡುವೆ ಒಂದೊಂದೆ ಗ್ರಾಪಂಗಳು ಅರಕೇರಾ ಬಿಟ್ಟು ದೇವದುರ್ಗ ಸೇರಲು ನಿರ್ಣಯಿಸುತ್ತಿದ್ದು, ದೇವದುರ್ಗದ ಮೇಲೆ ಜನಾಸಕ್ತಿ ದಿನೇ ದಿನೆ ಹೆಚ್ಚಾಗುತ್ತಿದೆ.

2022ರಲ್ಲಿ ಬಿಜೆಪಿ ಅಧಿಕಾರ ದಲ್ಲಿದ್ದಾಗ ಅರಕೇರಾದಲ್ಲಿ ‘ಜಿಲ್ಲಾಧಿಕಾರಿ ನಡೆ ಹಳ್ಳಿಕಡೆ’ ಕಾರ್ಯಕ್ರಮ ನಡೆದಿತ್ತು. ಅಂದಿನ ಕಂದಾಯ ಸಚಿವ ಆರ್.ಅಶೋಕ ಅರಕೇರಾವನ್ನು ನೂತನ ತಾಲೂಕಾಗಿ ಘೋಷಿಸಿದ್ದರು. ನಂತರ ನೂತನ ತಾಲೂಕಿಗೆ 17 ಹಾಗೂ ದೇವದುರ್ಗಕ್ಕೆ 15 ಗ್ರಾಪಂ ಸೇರಿಸಲಾಗಿತ್ತು. ಸರ್ಕಾರ ಬದಲಾದ ನಂತರ ಹೊಸ ತಾಲೂಕು ನಿರೀಕ್ಷಿತ ಮಟ್ಟದಲ್ಲಿ ಅಭಿವೃದ್ಧಿಯಾಗಲಿಲ್ಲ. ಹೆಸರಿಗೆ ಮಾತ್ರ ತಾಲೂಕು. ಆದರೆ, ಜನರು ವ್ಯಾಪಾರ-ವಹಿವಾಟು, ವಿವಿಧ ಕೆಲಸಗಳಿಗಾಗಿ ದೇವದುರ್ಗವನ್ನೆ ಅವಲಂಬಿಸಿದ್ದರು.

ದಿನಗಳೆದಂತೆ ನೂತನ ತಾಲೂಕು ರಚನೆಗೆ ಜನಾಭಿಪ್ರಾಯ ಪಡೆದಿಲ್ಲ ಎನ್ನುವ ಆಕ್ರೋಶ ಮಡುಗಟ್ಟಿತ್ತು. ಇದರಿಂದ ಸಿಡಿದೆದ್ದ ಆರು ಗ್ರಾಪಂಗಳು ಅರಕೇರಾ ತಾಲೂಕಿನಿಂದ ಹೊರಬಂದು ದೇವದುರ್ಗದಲ್ಲೆ ಮುಂದುವರಿಯಲು ನಿರ್ಣಯ ಕೈಗೊಂಡಿವೆ. ಇದರ ಭಾಗವಾಗಿ ಹೊಸೂರು, ಸಿದ್ದಾಪುರ ಗ್ರಾಪಂ ವ್ಯಾಪ್ತಿಯ ಸಾವಿರಾರು ಜನರು ಜಾಲಹಳ್ಳಿಯಲ್ಲಿ ಬೃಹತ್ ಪ್ರತಿಭಟನೆ ರ‌್ಯಾಲಿ ನಡೆಸಿದ್ದರು. ಇನ್ನು ಗಾಣಧಾಳ ಗ್ರಾಪಂ ವ್ಯಾಪ್ತಿಯ ವಿವಿಧ ಹಳ್ಳಿಗಳು ದೇವದುರ್ಗ ತಾಲೂಕಲ್ಲೇ ಮುಂದುವರಿಯಲು ನಿರ್ಣಯಿಸಿದ್ದಾರೆ. ಕೊತ್ತದೊಡ್ಡಿ ಗ್ರಾಪಂ ಜನರು ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿ ಅಖಂಡ ದೇವದುರ್ಗದಲ್ಲಿ ಉಳಿಸಲು ಮನವಿ ಮಾಡಿದ್ದರು. ಜತೆಗೆ ಸೋಮನಮರಡಿ ಗ್ರಾಪಂ ಅರಕೇರಾ ತಾಲೂಕಿಗೆ ಸೇರದಿರಲು ಸರ್ಕಾರಕ್ಕೆ ವರದಿ ಸಲ್ಲಿಸಲಾಗಿತ್ತು. ಈ ವಿಚಾರವಾಗಿಯೇ ಈಗ ಪಲಕನಮರಡಿ ಗ್ರಾಪಂಯಲ್ಲಿ ಶನಿವಾರ ತುರ್ತು ಸಭೆ ನಡೆಸಲಾಗಿದೆ.

ಅಲ್ಲಲ್ಲಿ ಅಲೆಯುವ ಸ್ಥಿತಿ

ಜನಾಭಿಪ್ರಾಯ ಪಡೆಯದೆ ಅರಕೇರಾ ತಾಲೂಕು ಘೋಷಿಸಿದ್ದರಿಂದ ಹಲವು ಹಳ್ಳಿಗಳು ವಿರೋಧ ವ್ಯಕ್ತಪಡಿಸಿವೆ. ಅರಕೇರಾ ಹೋಬಳಿ ಜನರು ಹೊಸ ತಾಲೂಕು ರಚನೆಯಾದರೆ ಅಭಿವೃದ್ಧಿಯಾಗಲಿದೆ ಎನ್ನುವ ಕನಸು ಕಂಡಿದ್ದರು. ಆದರೆ, ಸರ್ಕಾರದ ನಡೆಗೆ ವಿರೋಧ ವ್ಯಕ್ತವಾಗಿದೆ. ಅರಕೇರಾ ಇನ್ನೂ ಗ್ರೇಡ್-2 ಗ್ರಾಪಂಯಾಗಿ ಮುಂದುವರಿದಿದೆ. ಅಲ್ಲದೆ ಎಲ್ಲ ಇಲಾಖೆಗಳು ಆರಂಭಿಸಿಲ್ಲ. ಮೊದಲು ಒಂದೇ ಸೂರಿನಡಿ ದೇವದುರ್ಗದಲ್ಲಿ ಎಲ್ಲ ಸೌಲಭ್ಯಗಳು ಸಿಗುತ್ತಿದ್ದವು. ನೋಂದಣಿ ಕೆಲಸಕ್ಕೆ ಸಿರವಾರ, ಲಿಂಗಸುಗೂರು, ಕೋರ್ಟ್ ಕೆಲಸಕ್ಕೆ ಮಾನ್ವಿಗೆ ಅಲೆವ ಸ್ಥಿತಿಯಿದೆ. ಹೀಗಾಗಿ ಜನರು ಭ್ರಮನಿರಸರಾಗಿ ದೇವದುರ್ಗ ಸೇರಲು ಆಸಕ್ತಿ ತೋರಿದ್ದಾರೆ.

ಶನಿವಾರ ತುರ್ತು ಸಾಮಾನ್ಯ ಸಭೆ ಕರೆದು ದೇವದುರ್ಗ ತಾಲೂಕು ಸೇರಲು ನಿರ್ಣಯ ಕೈಗೊಳ್ಳಲಾಗಿದೆ. ಈ ಬಗ್ಗೆ ಮೇಲಧಿಕಾರಿಗಳಿಗೆ ವರದಿ ಸಲ್ಲಿಸಲಾಗಿದೆ. ಒಂದಿಬ್ಬರು ಸಭೆ ನಂತರ ವಿರೋಧ ಮಾಡಿದ್ದಾರೆ. ಕೋರಂ ಪ್ರಕಾರ ನಿರ್ಣಯ ಪಾಸ್ ಆಗಲಿದೆ. ಮೇಲಧಿಕಾರಿಗಳು ಮುಂದಿನ ಕ್ರಮಕೈಗೊಳ್ಳಬಹುದು. | ಅಯ್ಯಪ್ಪ ಪಿಡಿಒ, ಪಲಕನಮರಡಿ ಗ್ರಾಪಂ ಅಖಂಡ ದೇವದುರ್ಗ ಜನರ ಭಾವನಾತ್ಮಕ ವಿಷಯವಾಗಿದೆ. ಜನರ ಭಾವನೆಗೆ ವಿರೋಧವಾಗಿ ಅರಕೇರಾ ರಚನೆಯಾಗಿದೆ. ಅರಕೇರಾಕ್ಕೆ ಯಾವುದೇ ಸೌಲಭ್ಯ ಕಲ್ಪಿಸಿ, ಅಭಿವೃದ್ಧಿ ಮಾಡಿಲ್ಲ. ಆರು ಗ್ರಾಪಂ, ನೂರಾರು ಹಳ್ಳಿಗಳು ದೇವದುರ್ಗ ದಲ್ಲಿ ಉಳಿಯಲು ಮುಂದಾಗಿವೆ. ಮುಂದಿನ ದಿನ ಇದರ ಸಂಖ್ಯೆಯೂ ಹೆಚ್ಚಾಗಲಿದೆ. ಅಖಂಡ ದೇವದುರ್ಗ ತಾಲೂಕು ಉಳಿಸಲು ಸರ್ಕಾರ ಮುಂದಾಗಬೇಕು. | ಶಿವರಾಜ ನಾಯಕ ಕೊತ್ತದೊಡ್ಡಿ ಸಂಚಾಲಕ, ಅಖಂಡ ದೇವದುರ್ಗ ಹೋರಾಟ ಸಮಿತಿ