ತುಮಕೂರು: ಗ್ರಾಮಾಂತರ ವಿಧಾನಸಭಾ ವ್ಯಾಪ್ತಿಯ ಹರಳೂರು ಕೆರೆ 13 ವರ್ಷದ ನಂತರ ಕೋಡಿ ಬಿದ್ದಿದ್ದು ಶಾಸಕ ಡಿ.ಸಿ.ಗೌರಿಶಂಕರ್ ಬಾಗಿನ ಅರ್ಪಿಸಿದರು.
ಹರಳೂರಿನ ಶ್ರೀ ಚನ್ನಬಸವ ಸ್ವಾಮೀಜಿ ಸಾನ್ನಿಧ್ಯದಲ್ಲಿ ಶುಕ್ರವಾರ ಕೆರೆಗೆ ಗಂಗಾಪೂಜೆ ನೆರವೇರಿಸಿದ ಶಾಸಕ ಗೌರಿಶಂಕರ್ ಅವರು ಶ್ರೀಗಳ ಪಾದಪೂಜೆ ನೆರವೇರಿಸಿದರು. ಗಂಗಾ ಪೂಜೆಯಲ್ಲಿ ನೆರೆದಿದ್ದ ಹೆಣ್ಣು ಮಕ್ಕಳಿಗೆ ಹರಿಶಿಣ, ಕುಂಕುಮ, ಸೀರೆ,ಬಳೆ, ಬಾಗಿನ ನೀಡುವ ಮೂಲಕ ವಿಶೇಷ ಗೌರವ ಸಮರ್ಪಿಸಿದರು.
ಗಂಗಾಪೂಜೆ ಕಾರ್ಯಕ್ರಮದ ಬಳಿಕ ಹರಳೂರು ಗ್ರಾಪಂ ವ್ಯಾಪ್ತಿಯ ಹಲವು ಗ್ರಾಮಗಳ ಅಭಿವೃದ್ಧಿ ಕಾರ್ಯಗಳ ಶಂಕುಸ್ಥಾಪನೆ ಹಾಗೂ ಉದ್ಘಾಟನೆ ನೆರವೇರಿಸಿ ಮಾತನಾಡಿದ ಗೌರಿಶಂಕರ್, ಗ್ರಾಮಾಂತರ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಸಂಕಲ್ಪ ಮಾಡಿದ್ದು ಶಾಸಕರ ಪ್ರದೇಶಾಭಿವೃದ್ಧಿ ಅನುದಾನ ಹಾಗೂ ವೈಯಕ್ತಿಕವಾಗಿ ಅನುದಾನ ನೀಡಿ ಕಾಮಗಾರಿ ಪೂರ್ಣಗೊಳಿಸುತ್ತಿದ್ದೇನೆ ಎಂದರು.
ಐನಾಪುರ, ನೇರಳಾಪುರ, ಪಾಳ್ಯಗ್ರಾಮ, ನಾಯಕನಪಾಳ್ಯ ಕೊಟ್ಟಿಗೆ ಗೊಲ್ಲಹಳ್ಳಿ, ಅಣ್ಣಯ್ಯನಪಾಳ್ಯ, ಗುಣಿ ಗೊಲ್ಲಳ್ಳಿ ಗ್ರಾಮದಲ್ಲಿ ಮನೆಮನೆಗೆ ಕುಡಿಯುವ ನೀರಿನ ನಲ್ಲಿ ಹಾಕುವ ಕಾಮಗಾರಿ, ನಾಯಕನ ಪಾಳ್ಯ ಗ್ರಾಮದಲ್ಲಿ ಮನೆಮನೆಗೆ ಕುಡಿಯುವ ನೀರು ಒದಗಿಸಲು ನಲ್ಲಿ ಸಂಪರ್ಕಿಸುವ ಕಾಮಗಾರಿಗೆ ಚಾಲನೆ ನೀಡಲಾಗಿದೆ. ಆ ಮೂಲಕ ಪ್ರತಿಯೊಂದು ಮನೆಗಳು ನಲ್ಲಿ ನೀರು ಒದಗಿಸಲು ಕ್ರಮವಹಿಸಲಾಗುವುದು ಎಂದು ಭರವಸೆಯಿತ್ತರು.
ನೇರಳಾಪುರ ಗ್ರಾಮದ ಸರ್ಕಾರಿ ಪದವಿ ಪೂರ್ವ ಕಾಲೇಜಿಗೆ ಭೇಟಿ ನೀಡಿ,ವಿದ್ಯಾರ್ಥಿಗಳ ಸಮಸ್ಯೆಯನ್ನು ಆಲಿಸಿ, ಕ್ರೀಡಾ ಸಾಮಗ್ರಿಗಳನ್ನು ನೀಡುವುದಾಗಿ ಇದೇ ಸಂದರ್ಭದಲ್ಲಿ ಭರವಸೆ ನೀಡಿದರು. ಗ್ರಾಪಂ ಸದಸ್ಯರಾದ ಪವಿತ್ರ, ಮೇನ , ಸುರೇಶ್, ಶಾರದಾ, ಹೇಮಂತ್, ಶ್ರೀನಿವಾಸ್, ಜೆಡಿಎಸ್ ಮುಖಂಡರಾದ ತೋಂಟಾರಾಧ್ಯ, ಗಂಗಾಂಭಿಕೆ, ಶಂಕರಮೂರ್ತಿ, ಹರಳೂರು ಸುರೇಶ್, ಶಾಂತಮ್ಮ, ಪ್ರಕಾಶ್, ರೇಣುಕಪ್ಪ ಮತ್ತಿತರರು ಉಪಸ್ಥಿತರಿದ್ದರು.