ಪಿ.ಮಂಜುನಾಥರೆಡ್ಡಿ ಬಾಗೇಪಲ್ಲಿ
ರಸ್ತೆ ಸರಿಪಡಿಸಿಕೊಡುವಂತೆ ಎರಡು ದಶಕಗಳಿಂದ ಜಿಲ್ಲಾ ಉಸ್ತುವಾರಿ ಸಚಿವರು, ಸಂಸದರು, ಶಾಸಕರು ಹಾಗೂ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದರೂ ಪ್ರಯೋಜನವಾಗದ ಹಿನ್ನೆಲೆಯಲ್ಲಿ ಬೇಸತ್ತ ದೇವಿಕುಂಟೆ ಗ್ರಾಮಸ್ಥರು ಲೋಕೋಪಯೋಗಿ ಸಚಿವರ ಮೊರೆ ಹೋಗಿದ್ದಾರೆ.
ಮಳೆ ಬಂದರೆ ರಸ್ತೆ ಕೆಸರುಮಯವಾಗುತ್ತಿದೆ, ಬೇಸಿಗೆಯಲ್ಲಿ ಧೂಳು ಆವರಿಸುತ್ತದೆ. ರಸ್ತೆ ಗುಂಡಿಮಯವಾಗಿ ಸುಗಮ ಸಂಚಾರಕ್ಕೆ ಅಡಚಣೆಯಾಗಿ ಈ ಭಾಗದ ಜನರು ನಿತ್ಯ ನರಕಯಾತನೆ ಅನುಭವಿಸುತ್ತಿದ್ದಾರೆ. ಬಾಗೇಪಲ್ಲಿ ತಾಲೂಕು ಗೂಳೂರು ಹೋಬಳಿ ಕೇಂದ್ರದಿಂದ ಮಾರಗಾನುಕುಂಟೆ ಮಾರ್ಗದ ಮೂಲಕ 10 ಕಿಮೀ ಕ್ರಮಿಸಿದರೆ ಗುಡ್ಡಗಾಡು ಪ್ರದೇಶದಲ್ಲಿ ದೇವಿಕುಂಟೆ ಗ್ರಾಮ ಇದೆ. ಈ ಮಾರ್ಗದಲ್ಲಿ ಜೋಗಿರೆಡ್ಡಿಪಲ್ಲಿ, ಪಿಚ್ಚಲವಾರಪಲ್ಲಿ ಸೇರಿ ಹಲವು ಗ್ರಾಮಗಳಿವೆ. ಹದಗೆಟ್ಟ ರಸ್ತೆ ಮೂಲಕವೇ ಶಾಲಾ ಕಾಲೇಜು, ಕೃಷಿ ಉತ್ಪನ್ನ ಮಾರುಕಟ್ಟೆ, ನ್ಯಾಯಬೆಲೆ ಅಂಗಡಿ, ಹಾಲಿನ ಡೇರಿ ಸೇರಿ ಇತರ ಕೆಲಸ ಕಾರ್ಯಗಳಿಗೆ ಸಂಚರಿಸಬೇಕು. ತಾಲೂಕು, ಹೋಬಳಿ ಮತ್ತು ಗ್ರಾಮ ಪಂಚಾಯಿತಿ ಕೇಂದ್ರಕ್ಕೆ ಸಂಪರ್ಕ ಕಲ್ಪಿಸುವ ಏಕೈಕ ರಸ್ತೆ ಇದಾಗಿದೆ. 20 ವರ್ಷಗಳ ಹಿಂದೆ ಲೋಕೋಪಯೋಗಿ ಇಲಾಖೆ ಈ ರಸ್ತೆಯನ್ನು ನಿರ್ಮಿಸಿದ್ದು, ಇದುವರೆಗೂ ನಿರ್ವಹಣೆಯಾಗಲೀ, ದುರಸ್ತಿ ಕಂಡಿಲ್ಲ ಎನ್ನುವುದು ಗ್ರಾಮಸ್ಥರ ದೂರು.
ಸಚಿವರ ಮೊರೆ: ವಿಧಾನಸಭಾ ಚುನಾವಣಾ ಸಂದರ್ಭದಲ್ಲಿ ರಸ್ತೆ ಡಾಂಬರು ಕಾಮಗಾರಿಗೆ ಜನಪ್ರತಿನಿಧಿಗಳು ಗುದ್ದಲಿಪೂಜೆ ನೇರವೇರಿಸಿ ್ಲೆಕ್ಸ್ ಅಳವಡಿಸಿ ತೋರಿಕೆ ಮೆರೆದಿದ್ದು ಬಿಟ್ಟರೆ, ಇದುವರೆಗೂ ಕಾಮಗಾರಿ ಪ್ರಾರಂಭಿಸಿಲ್ಲ. ಹದಗೆಟ್ಟ ರಸ್ತೆಗೆ ಡಾಂಬರು ಹಾಕಿಕೊಟ್ಟು ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಡುವಂತೆ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರಿಗೆ ಸಮಸ್ಯೆಗೆ ಪರಿಹಾರ ಕಲ್ಪಿಸುವಂತೆ ಗ್ರಾಮಸ್ಥರೆಲ್ಲ ಸೇರಿ ಮನವಿ ಸಲ್ಲಿಸಿದ್ದೇವೆ ಎಂದು ದೇವಿಕುಂಟೆಯ ಪವನ್ ಕುಮಾರ್ ತಿಳಿಸಿದರು.
ಗ್ರಾಮಕ್ಕೆ ಬಾರದ ಆಂಬುಲೆನ್ಸ್: ವಿದ್ಯುತ್ ಅವಡ, ರಸ್ತೆ ಅಪಘಾತ, ಹೆರಿಗೆ, ಹಾವು ಕಡಿತ ಸೇರಿ ಇತರ ತುರ್ತು ಸಂದರ್ಭಗಳಲ್ಲಿ ಚಿಕಿತ್ಸೆ ಪಡೆಯಲು ಗ್ರಾಮಸ್ಥರು ಆಂಬುಲೆನ್ಸ್ಗೆ ಕರೆ ಮಾಡಿದರೆ, ಗುಡ್ಡಗಾಡು ಪ್ರದೇಶದಲ್ಲಿರುವ ಮತ್ತು ಹದಗೆಟ್ಟಿರುವ ರಸ್ತೆಯಲ್ಲಿ ದೇವಿಕುಂಟೆ ಗ್ರಾಮಕ್ಕೆ ಸಮಯಕ್ಕೆ ಬರಲು ಆಗುವುದಿಲ್ಲ. ಜತೆಗೆ ರಾತ್ರಿ ಹೊತ್ತಿನಲ್ಲಿ ಗ್ರಾಮಕ್ಕೆ ಬರಲು ಹಿಂದೇಟು ಹಾಕುತ್ತಾರೆ. ಇದರಿಂದ ಅನಾಹುತ ಸಂಭವಿಸುತ್ತಿವೆ ಎನ್ನುವುದು ಗ್ರಾಮಸ್ಥರ ಬೇಸರಕ್ಕೆ ಕಾರಣವಾಗಿದೆ.
ತಾಲೂಕಿನ ದೇವಿಕುಂಟೆ, ಜೋಗಿರೆಡಿಪಲ್ಲಿ, ಪಿಚ್ಚಲವಾರಪಲ್ಲಿ ಗ್ರಾಮಗಳ ರಸ್ತೆಗೆ ಡಾಂಬರು ಹಾಕಿಕೊಡುವಂತೆ ಕಳೆದ 5 ವರ್ಷಗಳಿಂದ ಸ್ಥಳಿಯ ಶಾಸಕರು, ಜಿಲ್ಲಾ ಉಸ್ತುವಾರಿ ಸಚಿವರು, ಸಂಸದರಿಗೆ ಮನವಿ ಸಲ್ಲಿಸಲಾಗಿದೆ. ಇದುವರೆಗೂ ಯಾರೂ ಸಕಾರಾತ್ಮಕವಾಗಿ ಸ್ಪಂದಿಸಿಲ್ಲ. ಲೋಕಸಭಾ ಚುನಾವಣೆ ಮತದಾನ ಬಹಿಷ್ಕರಿಸಿದಾಗ ಜಿಲ್ಲಾಧಿಕಾರಿಗಳು ಮನವೊಲಿಸಿ ರಸ್ತೆ ದುರಸ್ತಿಗೆ ಅನುದಾನ ನೀಡುವ ಭರವಸೆ ನೀಡಿದ್ದರು. ಆದರೂ ಇದುವರೆಗೂ ದೇವಿಕುಂಟೆ ಗ್ರಾಮದ ರಸ್ತೆ ಅಭಿವೃದ್ಧಿಯಾಗಲಿಲ್ಲ. > ಡಿ.ಸಿ.ಶ್ರೀನಿವಾಸ್ ದೇವಿಕುಂಟೆ