ಜಿಲ್ಲೆ

ವ್ಯಾಪಾರಿಗಳ ದರೋಡೆ ಮಾಡಿದ್ದ ಆರು ಜನರ ಬಂಧನ

ಹಾಸನ: ಸಗಟು ವ್ಯಾಪಾರಿಗಳ ಮೇಲೆ ಹಲ್ಲೆ ನಡೆಸಿ 65 ಸಾವಿರ ರೂ. ದೋಚಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರು ಯುವಕರನ್ನು ಬಂಧಿಸುವಲ್ಲಿ ಗಂಡಸಿ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.

ಕೆ.ಆರ್. ಪೇಟೆ ತಾಲೂಕಿನ ಗಂಗೇನಹಳ್ಳಿ ಗ್ರಾಮದ ರಾಜೇಶ್ (23), ಬಲಘಟ್ಟ ಗ್ರಾಮದ ಸಂಜಯ್ (22), ಹುನಗನಹಳ್ಳಿಯ ಶಿವದಾಸ್ (25), ಗೌತಮ್ (25), ಹೊಸಹೊಳಲಿನ ಆರ್.ವಿಜಯ್ (22), ಕೊಮ್ಮೇನಹಳ್ಳಿಯ ಕೆ.ಡಿ.ಸುದೀಪ (23) ಬಂಧಿತರು.

ಬಂಧಿತರಿಂದ 50 ಸಾವಿರ ರೂ. ನಗದು, ಕೃತ್ಯಕ್ಕೆ ಉಪಯೋಗಿಸಿದ್ದ 1.50 ಲಕ್ಷ ರೂ. ಮೌಲ್ಯದ ಎರಡು ಬೈಕ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್.ಶ್ರೀನಿವಾಸ್‌ಗೌಡ ಸುದ್ದಿಗೋಷ್ಠಿಯಲ್ಲಿ ಮಂಗಳವಾರ ಮಾಹಿತಿ ನೀಡಿದರು.

ಘಟನೆ ಹಿನ್ನೆಲೆ: ಅರಸೀಕೆರೆಯ ಅರುಣ್‌ಕುಮಾರ್ ಈರುಳ್ಳಿ, ಬೆಳ್ಳುಳ್ಳಿ ಖರೀದಿಗಾಗಿ ಸ್ನೇಹಿತರಾದ ಸಿದ್ದೇಗೌಡ ಹಾಗೂ ಗಂಗಾಧರ್ ಎಂಬುವರೊಂದಿಗೆ ಡಿ.28 ರಂದು ರಾಣೆಬೆನ್ನೂರಿಗೆ ತಮ್ಮ ಕ್ಯಾಂಟರ್‌ನಲ್ಲಿ ಹೊರಟಿದ್ದರು. ರಾತ್ರಿ 11.30ರ ಸುಮಾರಿನಲ್ಲಿ ವೆಂಕಟಾಪುರ ಕಾವಲ್ ಹತ್ತಿರದ ದೇವಸ್ಥಾನಕ್ಕೆ ಹೋಗಲು ವಾಹನ ನಿಲ್ಲಿಸಿ ತೆರಳಿದ್ದರು.

ಕ್ಯಾಂಟರ್‌ನಲ್ಲಿ ಮಲಗಿದ್ದ ಗಂಗಾಧರ್ ಹಾಗೂ ಸಿದ್ದೇಗೌಡರ ಮೇಲೆ ದಾಳಿ ನಡೆಸಿದ ಇಬ್ಬರು ಮಾರಣಾಂತಿಕ ಹಲ್ಲೆ ನಡೆಸಿದ್ದರು. ಅರುಣ್ ಕುಮಾರ್ ಬಳಿಯಿದ್ದ 25 ಸಾವಿರ ಹಾಗೂ ವಾಹನದ ಡ್ಯಾಷ್‌ಬೋರ್ಡ್‌ನಲ್ಲಿದ್ದ 40 ಸಾವಿರ ರೂ. ದೋಚಿ ಪರಾರಿಯಾಗಿದ್ದರು. ಘಟನೆಯಲ್ಲಿ ತೀವ್ರ ಗಾಯಗೊಂಡ ಗಂಗಾಧರ್, ಸಿದ್ದೇಗೌಡ ಹಾಗೂ ಅರುಣ್‌ಕುಮಾರ್ ಚನ್ನರಾಯಪಟ್ಟಣ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಸಂಬಂಧ ಗಂಡಸಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು ಎಂದರು.

ವಿಶೇಷ ತಂಡ ರಚನೆ : ಆರೋಪಿಗಳ ಪತ್ತೆಗೆ ಅರಸೀಕೆರೆ ಡಿವೈಎಸ್ಪಿ ನಾಗೇಶ್ ನೇತೃತ್ವದಲ್ಲಿ ರಚನೆಯಾದ ತಂಡ ಆರೋಪಿಗಳ ಪತ್ತೆ ಹೆಚ್ಚುವಲ್ಲಿ ಯಶಸ್ವಿಯಾಗಿದೆ. ಪೊಲೀಸರು ತಮ್ಮನ್ನು ಹುಡುಕುತ್ತಿರುವ ವಿಚಾರ ತಿಳಿದು ಅವರು ಬೆಂಗಳೂರಿಗೆ ತೆರಳುವ ಯೋಜನೆಯಲ್ಲಿದ್ದರು. ಫೆ. 23 ರಂದು ಚನ್ನರಾಯಪಟ್ಟಣದ ಬಸ್ ನಿಲ್ದಾಣದಲ್ಲಿ ಅನುಮಾನಾಸ್ಪದವಾಗಿ ನಿಂತಿದ್ದ ಯುವಕರನ್ನು ಪೊಲೀಸರು ವಿಚಾರಣೆಗೆ ಒಳಪಡಿಸಿದಾಗ ಸತ್ಯ ಹೊರ ಬಂದಿದೆ.

ಪ್ರಮುಖ ಆರೋಪಿ ರಾಜೇಶ್‌ಗೆ ಅರುಣ್‌ಕುಮಾರ್ ಸ್ನೇಹಿತನಾಗಿದ್ದ. ಈರುಳ್ಳಿ, ಬೆಳ್ಳುಳ್ಳಿ ಖರೀದಿಗೆ ಹಣದೊಂದಿಗೆ ರಾಣೆಬೆನ್ನೂರಿಗೆ ಹೋಗುತ್ತಿರುವ ವಿಚಾರ ತಿಳಿದ ಆತ ತನ್ನ ಒಡನಾಡಿಗಳೊಂದಿಗೆ ಸೇರಿ ಕೃತ್ಯ ಎಸಗಿದ್ದ ಎಂದು ತಿಳಿಸಿದರು.

ವಿಶೇಷ ತಂಡದಲ್ಲಿದ್ದ ಡಿವೈಎಸ್ಪಿ ನಾಗೇಶ್, ಸಿಪಿಐ ಕೆ.ಎಂ.ವಸಂತ್, ಗ್ರಾಮಾಂತರ ಠಾಣೆ ಪಿಎಸ್‌ಐ ಅರುಣ್‌ಕುಮಾರ್, ಪೇದೆಗಳಾದ ಹೀರಾಸಿಂಗ್, ನಂಜುಂಡೇಗೌಡ, ಲೋಕೇಶ್, ರವಿ, ನಾಗೇಂದ್ರ, ಹೇಮಂತ್, ಹರೀಶ್, ಪುಟ್ಟಸ್ವಾಮಿ, ಮೋಹನ್‌ಕುಮಾರ್ ಮತ್ತು ಜೀಪ್ ಚಾಲಕ ವಸಂತ್‌ಕುಮಾರ್ ಅವರ ಕಾರ್ಯವನ್ನು ಎಸ್ಪಿ ಶ್ಲಾಘಿಸಿದ್ದಾರೆ.