ಮೊಳಕಾಲ್ಮೂರು: ಸುಳ್ಳು ದಾಖಲೆ ಸಲ್ಲಿಸಿ ಸರ್ಕಾರದ ಸೌಲಭ್ಯಗಳನ್ನು ಪಡೆಯುತ್ತಿರುವ, ಕಾರ್ಮಿಕ ಇಲಾಖೆಯಿಂದ ಕಾರ್ಮಿಕರಲ್ಲದವರು ಹೊಂದಿರುವ ಕಾರ್ಡ್‌ಗಳನ್ನು ಪತ್ತೆ ಹಚ್ಚಿ ಕಾನೂನು ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿ ಸಿಪಿಐ ಕಾರ್ಯಕರ್ತರು ಪಟ್ಟಣದಲ್ಲಿ ಗುರುವಾರ ಪ್ರತಿಭಟನೆ ನಡೆಸಿದರು.
ತಾಲೂಕು ಆಡಳಿತ ಸೌಧದ ಬಳಿ ಪ್ರತಿಭಟನೆ ನಡೆಸಿದ ಕಾರ್ಯಕರ್ತರು, ಕೆಲವರು ಸುಳ್ಳು ಮಾಹಿತಿ ನೀಡಿ ಕಾರ್ಮಿಕ ಕಾರ್ಡ್‌ಗಳನ್ನು ಪಡೆದು ಕಾರ್ಮಿಕರಿಗೆ ಮೀಸಲು ಆಗಿರುವ ಸೌಲಭ್ಯಗಳನ್ನು ಪಡೆಯುತ್ತಿದ್ದಾರೆ. ಇದರಿಂದ ಶ್ರಮಿಕ ವರ್ಗದವರಿಗೆ ಅನ್ಯಾಯವಾಗುತ್ತಿದೆ ಎಂದು ಅಳಲು ತೋಡಿಕೊಂಡರು.
ಕಾರ್ಮಿಕ ವರ್ಗದ ಸಬಲೀಕರಣಕ್ಕಾಗಿ ಮೀಸಲಿರುವ ವಿದ್ಯಾರ್ಥಿಗಳ ಸ್ಕಾಲರ್‌ಶಿಫ್, ಮದುವೆ, ಹೆರಿಗೆ ಭತ್ಯೆ, ಶವ ಸಂಸ್ಕಾರಕ್ಕೆ ಸಹಾಯಧನ ಸೇರಿ ವಿವಿಧ ಸೌಲಭ್ಯ ವಿತರಣೆಗೆ ಕಾರ್ಮಿಕ ಮಂಡಳಿ ಕಲ್ಯಾಣ ನಿಧಿಯಲ್ಲಿ ನೂರಾರು ಕೋಟಿ ಹಣ ಇದೆ. ಆದರೆ, ಕಳೆದ ವರ್ಷದಿಂದ ಹಣ ಬಿಡುಗಡೆ ಮಾಡುತ್ತಿಲ್ಲ. ಈ ಕ್ರಮ ಸರಿಯಲ್ಲ ಎಂದರು.
ಸರ್ಕಾರದ ನಿರ್ಲಕ್ಷೃದಿಂದ ಬಡವರು ಬೀದಿ ಪಾಲಾಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಕುರಿತು ಅನೇಕ ಬಾರಿ ಜಿಲ್ಲಾಡಳಿತ ಹಾಗೂ ಸರ್ಕಾರದ ಗಮನ ಸೆಳೆದರೂ ಪ್ರಯೋಜನವಾಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ತಾಲೂಕಿನಲ್ಲಿ ಬರ ತಾಂಡವಾಡುತ್ತಿದೆ. ಉದ್ಯೋಗ ಸಿಗುತ್ತಿಲ್ಲ. ಕುಟುಂಬದ ನಿರ್ವಹಣೆ ಕಷ್ಟಕರವಾಗಿದೆ. ಶಾಲೆಗೆ ಹೋಗುವ ಮಕ್ಕಳನ್ನು ಬಿಟ್ಟು ವಲಸೆ ಹೋಗುವಂತಿಲ್ಲ. ಅವರ ಭವಿಷ್ಯ ಸಂಕಷ್ಟಕ್ಕೆ ಸಿಲುಕಿದೆ. ಹಸಿವಿನಲ್ಲಿ ಜೀವಿಸುವಂತೆ ಆಗಿದೆ. ಸರ್ಕಾರ ನಮ್ಮ ಕಷ್ಟ ಅರಿತು ತಕ್ಷಣ ಕಲ್ಯಾಣ ನಿಧಿ ಹಣ ಬಿಡುಗಡೆಗೆ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ವಿದ್ಯಾರ್ಥಿಗಳ ಪ್ರೋತ್ಸಾಹಧನ ಬಿಡುಗಡೆ ಮಾಡಬೇಕು. ಮದುವೆ, ಹೆರಿಗೆ ಭತ್ಯೆ, ಮರಣ ಇತ್ಯಾದಿ ಸಹಾಯಧನದ ರೂಪದಲ್ಲಿ ಕೊಡುವ ಹಣವನ್ನು ಅರ್ಹರ ಖಾತೆಗೆ ಜಮಾ ಮಾಡಬೇಕು. ಬಾಕಿ ಕಿಟ್‌ಗಳನ್ನು ವಿತರಣೆಗೆ ಕ್ರಮಕೈಗೊಳ್ಳಬೇಕು. ನಿವೇಶನ ನೀಡಬೇಕು. ಮನೆ ಕಟ್ಟಿಕೊಳ್ಳಲು 5 ಲಕ್ಷ ರೂ. ಸಹಾಯಧನ ಜತೆಗೆ ಮರಳು ವ್ಯವಸ್ಥೆ ಮಾಡಬೇಕು ಎಂದು ಒತ್ತಾಯಿಸಿದರು.
ಸಂಘಟನೆ ತಾಲೂಕು ಕಾರ್ಯದರ್ಶಿ ಮಹಮದ್ ಜಾಫರ್, ಕಟ್ಟಡ ಕಾರ್ಮಿಕರ ಸಂಘದ ತಾಲೂಕಾಧ್ಯಕ್ಷ ಡಿ.ಪೆನ್ನಯ್ಯ, ಮುಖಂಡರಾದ ಮಾರಣ್ಣ, ಗಂಗಾಧರ, ಶಾಂತಮ್ಮ, ಮೂಕಮ್ಮ, ಗಂಗಾವತಿ, ಜಗನ್ನಾಥ, ಶಶಿಕಲಾ, ಕೆ.ಅಂಬಿಕಾ, ಟಿ.ಮಂಜುಳಾ, ಕೆ.ನಾಗವೇಣಿ, ಪೆದ್ದಮ್ಮ, ವಸಂತಮ್ಮ, ಬಸಮ್ಮ, ಸಣ್ಣಮಾರಣ್ಣ, ಲಕ್ಷ್ಮೀದೇವಿ, ಓಂಕಾರಮ್ಮ, ಶಿವರುದ್ರಮ್ಮ, ಮಲ್ಲಮ್ಮ, ಶಿವಮ್ಮ, ವನಜಾಕ್ಷಿ, ನಿಂಗಮ್ಮ ಇತರರಿದ್ದರು.