ಜಿಲ್ಲೆ

ಅಧಿವೇಶನ ಅಪೇಕ್ಷೆ ನಿರೀಕ್ಷೆ ಅಗ್ನಿಪರೀಕ್ಷೆ: ಉತ್ತರ ಕರ್ನಾಟಕ ಜನರ ಸಮಸ್ಯೆ, ಬಿಟ್ ಬಿಡದ ವಿಪಕ್ಷ, ಸರ್ಕಾರಕ್ಕೆ ಮತಾಂತರ ಕಾಯ್ದೆ ಸವಾಲು

Webdesk - Ravikanth

| ಶ್ರೀಕಾಂತ್ ಶೇಷಾದ್ರಿ ಬೆಳಗಾವಿ

ಉತ್ತರ ಕರ್ನಾಟಕ ಭಾಗದ ಸಮಸ್ಯೆ ಬಗ್ಗೆ ಚರ್ಚೆಯಾಗಿ ಪರಿಹಾರ ಸಿಗಬೇಕೆಂಬುದು ಜನರ ಅಪೇಕ್ಷೆ, ಕಮೀಷನ್ ದಂಧೆ ಪ್ರಕರಣದಲ್ಲಿ ಸರ್ಕಾರಕ್ಕೆ ತನಿಖಾ ಕುಣಿಕೆ ತೊಡಿಸುವುದು ಪ್ರತಿಪಕ್ಷದ ನಿರೀಕ್ಷೆ, ಮತಾಂತರ ನಿಷೇಧ ಕಾಯ್ದೆಗೆ ಅನುಮೋದನೆ ಪಡೆಯಲು ಸರ್ಕಾರ ಅಗ್ನಿಪರೀಕ್ಷೆಗೆ ಒಳಗಾಗುವ ವಿಧಾನಮಂಡಲ ಚಳಿಗಾಲದ ಅಧಿವೇಶನ ಸೋಮವಾರದಿಂದ ವಿದ್ಯುಕ್ತವಾಗಿ ಆರಂಭವಾಗುತ್ತಿದೆ. ಅತಿವೃಷ್ಟಿ, ಕರೊನಾ, ಲಾಕ್​ಡೌನ್ ಇತ್ಯಾದಿ ಕಾರಣಗಳಿಂದ ಕಳೆದ ಮೂರು ವರ್ಷದಿಂದ ಬೆಳಗಾವಿಯಲ್ಲಿ ಅಧಿವೇಶನ ನಡೆದಿರಲಿಲ್ಲ. ಈ ಬಾರಿ ಆತಂಕದ ನಡುವೆಯೂ ಅಗತ್ಯ ತಯಾರಿಯೊಂದಿಗೆ ಸರ್ಕಾರ ಸದನ ನಡೆಸಲು ಸಿದ್ಧತೆ ಮಾಡಿಕೊಂಡಿದೆ. ಬೆಂಗಳೂರಿನಲ್ಲಿ ಅಧಿವೇಶನ ನಡೆಯುವಾಗ ನಮ್ಮ ಭಾಗದ ವಿಚಾರ ಚರ್ಚೆಗೆ ಪ್ರಾಮುಖ್ಯತೆಯೇ ಸಿಗದು, ಒತ್ತಡಕ್ಕೆ ಸಿಲುಕಿ ಚೂರುಪಾರು ಸಮಯಾವಕಾಶ ಸಿಗುತ್ತದೆ. ಹೀಗಾಗಿ ಈ ಬಾರಿ ಹೆಚ್ಚಿನ ಅವಧಿ ಉತ್ತರ ಕರ್ನಾಟಕ ಭಾಗದ ನೀರಾವರಿ, ಕೃಷಿ, ಶೈಕ್ಷಣಿಕ- ಆರೋಗ್ಯ ಸಮಸ್ಯೆ, ಮೂಲಸೌಕರ್ಯ ಕೊರತೆ ಬಗ್ಗೆ ಚರ್ಚೆಯಾಗಬೇಕು ಮತ್ತು ಸರ್ಕಾರದಿಂದ ಸೂಕ್ತ ಪರಿಹಾರ ಸಿಗಬೇಕೆಂಬ ಅಪೇಕ್ಷೆಯಲ್ಲಿ ಈ ಭಾಗದ ಜನರಿದ್ದಾರೆ.

ಇನ್ನು ಸರ್ಕಾರವನ್ನು ಹಣಿಯಲು ಪ್ರತಿಪಕ್ಷ ಕಾಂಗ್ರೆಸ್ ದಂಡಿ ಕಡತಗಳೊಂದಿಗೆ ಬೆಳಗಾವಿಯತ್ತ ಧಾವಿಸಿದೆ. ಬಿಟ್ ಕಾಯಿನ್ ವಿಷಯದಲ್ಲಿ ಮುಚ್ಚಿಟ್ಟ ವಿಚಾರಗಳು, ಪ್ರಶ್ನೆಯಾಗಿಯೇ ಉಳಿದ ವಿಷಯವನ್ನು ಮತ್ತೆ ಕೆದಕಿ ಸರ್ಕಾರವನ್ನು ಇಕ್ಕಟ್ಟಿನಲ್ಲಿ ಸಿಲುಕಿಸಲೂ ಪ್ರತಿಪಕ್ಷ ತುದಿಗಾಲಲ್ಲಿ ನಿಂತಿದೆ. ಜತೆಗೆ ಕಮೀಷನ್ ದಂಧೆ ವಿಷಯದಲ್ಲಿ ಸದನ ಸಮಿತಿ ರಚನೆಯಾಗಬೇಕೆಂದು ಪಟ್ಟು ಹಿಡಿಯುವ ಬಗ್ಗೆ ಕೈ ನಾಯಕರು ಚರ್ಚೆ ನಡೆಸಿದ್ದು, ಶಾಸಕಾಂಗ ಪಕ್ಷದ ಸಭೆಯಲ್ಲಿ ಅಂತಿಮ ನಿರ್ಣಯವಾಗಲಿದೆ.

ಅಗ್ನಿಪರೀಕ್ಷೆ: ಮತಾಂತರ ನಿಷೇಧ ಕಾಯ್ದೆ ವಿಷಯ ಅಧಿವೇಶನದ ಕಾವು ಹೆಚ್ಚುವಂತೆ ಮಾಡಿದೆ. ಮತಾಂತರ ನಿಷೇಧ ಕಾಯ್ದೆ ಜಾರಿಗೆ ಆಡಳಿತ ಪಕ್ಷದ ಮೇಲೆ ಒಂದಷ್ಟು ಒತ್ತಡ ಇದೆ. ಇದೇ ವೇಳೆ ಪ್ರತಿಪಕ್ಷ ಕಾಂಗ್ರೆಸ್​ನ ಹಲವು ನಾಯಕರು ಈಗಾಗಲೆ ಪ್ರತಿರೋಧ ತೋರಿಸಿದ್ದು, ವಿಧಾನಮಂಡಲ ಕಲಾಪದಲ್ಲಿ ತಮ್ಮ ನಿಲುವೇನಾಗಿರುತ್ತದೆ ಎಂಬುದನ್ನು ಬಹಿರಂಗಪಡಿಸಿದ್ದಾರೆ. ಹೀಗಾಗಿ ಇದೇ ವಿಷಯ ಈ ಬಾರಿ ಅಧಿವೇಶನದ ಪ್ರಧಾನ ಅಂಶವಾಗುವ ಸಾಧ್ಯತೆಗಳಿವೆ.

ಟೆಂಡರ್ ಅಕ್ರಮ ತನಿಖಾ ವರದಿ ಸಲ್ಲಿಕೆ: ಗುತ್ತಿಗೆದಾರರು ಸರ್ಕಾರದ ವಿರುದ್ಧ ಪ್ರಧಾನಿಗೆ ದೂರಿತ್ತ ಹಿನ್ನೆಲೆಯಲ್ಲಿ ತನಿಖೆ ಮಾಡಿಸಿ ವರದಿ ಕೊಡುವಂತೆ ಮುಖ್ಯಕಾರ್ಯದರ್ಶಿಯವರಿಗೆ ಸಿಎಂ ಸೂಚಿಸಿದ್ದರು. ಅವರು ಈ ಜವಾಬ್ದಾರಿಯನ್ನು ಜಲಸಂಪನ್ಮೂಲ ಇಲಾಖೆ ಅಪರ ಮುಖ್ಯಕಾರ್ಯದರ್ಶಿಗೆ ಒಪ್ಪಿಸಿದ್ದರು. ಇದೀಗ ಅಪರ ಮುಖ್ಯಕಾರ್ಯದರ್ಶಿ ರಾಕೇಶ್ ಸಿಂಗ್ ಟೆಂಡರ್ ಕುರಿತು ಆರೋಪದ ಬಗ್ಗೆ ವರದಿ ಸಲ್ಲಿಸಿದ್ದು, ಅದು ಸಿಎಂ ಕೈ ಸೇರಿದೆ ಎಂದು ಉನ್ನತ ಮೂಲಗಳು ತಿಳಿಸಿವೆ. ಕಮೀಷನ್ ವಿಷಯದಲ್ಲಿ ಆರೋಪಗಳ ಬಗ್ಗೆ ಒಂದಷ್ಟು ಸ್ಪಷ್ಟನೆ ವರದಿಯಲ್ಲಿದೆ. ನಿರ್ದಿಷ್ಟವಾಗಿ ಯಾವುದೇ ಪ್ರಕರಣದ ಬಗ್ಗೆ ಉಲ್ಲೇಖಗಳಿಲ್ಲ. ಈ ವರದಿ ಆರೋಪಕ್ಕೆ ಸಮಜಾಯಿಷಿ ನೀಡಿದಂತಿದೆ. ಅಲ್ಲಗಳೆದೂ ಇಲ್ಲ, ಸಮರ್ಥನೆಯೂ ಮಾಡಿಕೊಂಡಿಲ್ಲ. ಹಾಗೆಯೆ ದೂರಿನಲ್ಲಿ ಪ್ರಸ್ತಾಪವಾಗಿದ್ದ 3-4 ವಿಷಯಗಳಲ್ಲಿ ತನಿಖೆ ನಡೆಸಿದ್ದರ ಕುರಿತು ಸಿಎಂಗೆ ವಿವರಣೆ ನೀಡಲಾಗಿದೆ. ಪ್ರಮುಖವಾಗಿ ಮುಂದೆ ಇಂತಹ ತಪು್ಪಗಳು ಮರುಕಳಿಸದಂತೆ ತಡೆಯಲು ಕೈಗೊಳ್ಳಬೇಕಾದ ಕ್ರಮಗಳು ಬಗ್ಗೆ, ಮುಂದೆ ಆಗುವ ಬದಲಾವಣೆ ಕುರಿತು ವರದಿಯಲ್ಲಿ ಉಲ್ಲೇಖವಿದೆ ಎಂದು ಮೂಲಗಳು ಮಾಹಿತಿ ನೀಡಿವೆ.

ರಮೇಶ್ ಜಾರಕಿಹೊಳಿ ಬರ್ತಾರಾ?

ಸ್ವಂತ ಜಿಲ್ಲೆಯಲ್ಲಿ ನಡೆಯುತ್ತಿರುವ ವಿಧಾನಮಂಡಲ ಅಧಿವೇಶನದಲ್ಲಿ ಶಾಸಕ ರಮೇಶ್ ಜಾರಕಿಹೊಳಿ ಪಾಲ್ಗೊಳ್ಳುತ್ತಾರೆಯೇ ಎಂಬ ಕುತೂಹಲವಿದೆ. ಬಿ.ಎಸ್. ಯಡಿಯೂರಪ್ಪ ಸರ್ಕಾರದಲ್ಲಿ ಸಚಿವರಾಗಿದ್ದ ರಮೇಶ್ ಅಶ್ಲಿಲ ಸಿಡಿ ವಿಚಾರವಾಗಿ ಸಚಿವ ಸ್ಥಾನಕ್ಕೆ ರಾಜಿನಾಮೆ ಸಲ್ಲಿಸಿದ್ದರು. ಮಾರ್ಚ್ 3ರಂದು ಅವರು ರಾಜೀನಾಮೆ ಸಲ್ಲಿಸಿದ್ದು ಅಂದೇ ರಾಜ್ಯಪಾಲರು ಅಂಗೀಕಾರ ಮಾಡಿದ್ದರು. ಅದಾದ ಬಳಿಕ ರಮೇಶ್ ವಿಧಾನಸೌಧದತ್ತ ಸುಳಿದಿರಲಿಲ್ಲ. ಕಳೆದ 9 ತಿಂಗಳಿನಿಂದಲೂ ಅಜ್ಞಾತವಾಗಿದ್ದ ಅವರು ಪರಿಷತ್ ಚುನಾವಣೆ ವೇಳೆ ತಮ್ಮ ಸಹೋದರನನ್ನು ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಸಿ ಪ್ರಚಾರದಲ್ಲಿ ತೊಡಗಿಕೊಂಡು ಜನರ ಮುಂದೆ ಕಾಣಿಸಿಕೊಂಡಿದ್ದರು.

ಜನರಲ್ ರಾವತ್, ನಟ ಪುನೀತ್ ಸ್ಮರಣೆ

ಸಂಪ್ರದಾಯದಂತೆ ಕಲಾಪದ ಮೊದಲ ದಿನ ಇತ್ತೀಚೆಗೆ ನಿಧನರಾದ ಗಣ್ಯರಿಗೆ ಮೇಲ್ಮನೆ ಹಾಗೂ ಕೆಳಮನೆ ಸಂತಾಪ ಸೂಚಿಸಲಿವೆ. ಇತ್ತೀಚೆಗೆ ನಿಧನರಾದ ಜನರಲ್ ಬಿಪಿನ್ ರಾವತ್ ಮತ್ತು ತಂಡ, ನಟ ಪುನೀತ್ ರಾಜ್​ಕುಮಾರ್ ಅವರಿಗೆ ವಿಶೇಷ ನುಡಿನಮನ ಸಲ್ಲಿಕೆಯಾಗಲಿದೆ. ಸಭಾಪತಿ ಮತ್ತು ಸಭಾಧ್ಯಕರು ಮಂಡಿಸುವ ಸಂತಾಪ ನಿರ್ಣಯದ ಮೇಲೆ ಚರ್ಚೆಯಾಗಲಿದ್ದು, ಬಹಳಷ್ಟು ಶಾಸಕರು ಈ ವಿಷಯದಲ್ಲಿ ಮಾತನಾಡಲು ಬಯಸಿದ್ದಾರೆ.

ಉತ್ತರ ಕರ್ನಾಟಕದ ಜನರ ಇಚ್ಛೆಯಂತೆ ಅಧಿವೇಶನದಲ್ಲಿ ಚರ್ಚೆಗಳಾಬೇಕು. ಸಮಗ್ರ ಅಭಿವೃದ್ಧಿಗೆ ಸಂಬಂಧಿಸಿದ ಕೆಲವು ವಿಚಾರಗಳು ನಿರ್ಧಾರ ಆಗಬೇಕೆಂಬುದು ನನ್ನ ಸಂದೇಶ.| ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿ
ಡಾ.ನಂಜುಂಡಪ್ಪ ವರದಿ ಪ್ರಕಾರ ಪ್ರಾದೇಶಿಕ ನಿವಾರಣೆಗಾಗಿ ಸರ್ಕಾರ ಕೋಟ್ಯಂತರ ರೂ.ಗಳನ್ನು ಸರ್ಕಾರಿ ಶಾಲಾ-ಕಾಲೇಜುಗಳ ಸುಧಾರಣೆಗಾಗಿ ಬಿಡುಗಡೆ ಮಾಡಬೇಕಿದೆ. ಜತೆಗೆ ಸುವರ್ಣ ವಿಧಾನಸೌಧವನ್ನು ಸಕ್ರಿಯವಾಗಿಡಲು ಉತ್ತರ ಕರ್ನಾಟಕಕ್ಕೆ ಅನೇಕ ಕಚೇರಿಗಳನ್ನು ಸ್ಥಳಾಂತರ ಮಾಡಬೇಕು ಎನ್ನುವ ಬೇಡಿಕೆ ನನೆಗುದಿಗೆ ಬಿದ್ದಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಉತ್ತರ ಕರ್ನಾಟಕದವರೇ ಆಗಿದ್ದಾರೆ. ಪ್ರಮುಖ ಆಯುಕ್ತರ ಮಟ್ಟದ ಕಚೇರಿಗಳನ್ನು ಸುವರ್ಣ ವಿಧಾನಸೌಧಕ್ಕೆ ಸ್ಥಳಾಂತರಿಸಬೇಕು.| ಡಾ.ಪ್ರಭಾಕರ ಕೋರೆ ರಾಜ್ಯಸಭಾ ಮಾಜಿ ಸದಸ್ಯರು
ಉ.ಕ. ಸಮಸ್ಯೆ ಚರ್ಚೆಗೆ 2 ದಿನ ಮೀಸಲು

ಬೆಳಗಾವಿ: ಸುವರ್ಣ ವಿಧಾನಸೌಧದಲ್ಲಿ ಸೋಮವಾರ ಆರಂಭವಾಗಲಿರುವ ವಿಧಾನಸಭೆ ಚಳಿಗಾಲದ ಅಧಿವೇಶನದಲ್ಲಿ ಉತ್ತರ ಕರ್ನಾಟಕದ ನಿರ್ದಿಷ್ಟ ವಿಷಯಗಳ ಚರ್ಚೆಗೆ 2 ದಿನ ಮೀಸಲಿಡುವ ಸಾಧ್ಯತೆ ಅನ್ವೇಷಿಸಲಾಗುತ್ತಿದೆ ಎಂದು ವಿಧಾನಸಭಾಧ್ಯಕ್ಷರು ಹೇಳಿದ್ದಾರೆ. ಕಲಾಪ ಆರಂಭವಾಗುವ ಮುನ್ನ ಬೆಳಗ್ಗೆ 10.30ಕ್ಕೆ ನಿಗದಿಯಾಗಿರುವ ಕಲಾಪ ಸಲಹಾ ಸಮಿತಿ ಸಭೆಯಲ್ಲಿ ಈ ವಿಷಯ ರ್ಚಚಿಸಲಾಗುವುದು. ಅಧಿವೇಶನ ಆರಂಭದ ದಿನವೇ ಸರ್ಕಾರದಿಂದ ಮಸೂದೆಗಳ ಮಂಡನೆ ನಿರೀಕ್ಷಿಸಿರುವೆ ಎಂದರು. ಕಲಾಪವನ್ನು ಸುಗಮವಾಗಿ ನಡೆಸಲು ಎಲ್ಲ ವ್ಯವಸ್ಥೆಗಳನ್ನು ಮಾಡಿದ್ದಾರೆ. ಕಾರ್ಯಕಲಾಪಗಳು ಅರ್ಥಪೂರ್ಣವಾಗಿರುತ್ತವೆ. ಅದರ ಫಲಶ್ರುತಿ ಜನರ ಹಿತಾಸಕ್ತಿಗೆ ಅನುಗುಣವಾಗಿರುತ್ತವೆ. ಸಮಸ್ತ ಕರ್ನಾಟಕದ ಜನರ ಸಮಸ್ಯೆಗಳ ಚರ್ಚೆ, ಸಭಾಧ್ಯಕ್ಷ, ಪ್ರತಿಪಕ್ಷಗಳು ಕೇಳುವ ಪ್ರಶ್ನೆಗಳಿಗೆ ಆಡಳಿತ ಪಕ್ಷ ಸ್ಪಂದಿಸಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.