| ಪರಶುರಾಮ ಕೆರಿ ಹಾವೇರಿ
ಅರೆಮಲೆನಾಡು, ವಿರಾಟ ನಗರಿ ಎಂದೇ ಖ್ಯಾತಿವೆತ್ತ ಹಾನಗಲ್ ಕ್ಷೇತ್ರಕ್ಕೆ ಸಿ.ಎಂ. ಉದಾಸಿ ಅವರ ಅಕಾಲಿಕ ಮರಣದಿಂದ ಉಪಚುನಾವಣೆ ಎದುರಾಗಿದೆ. ನಾಲ್ಕು ದಶಕಗಳ ನಂತರ ಇದೇ ಮೊದಲ ಬಾರಿಗೆ ಉದಾಸಿ ಹಾಗೂ ಮನೋಹರ ತಹಶೀಲ್ದಾರ ಇಲ್ಲದ ಚುನಾವಣೆಯನ್ನು ಕ್ಷೇತ್ರದ ಜನತೆ ನೋಡುವಂತಾಗಿದೆ. ಪ್ರಸ್ತುತ ಸನ್ನಿವೇಶದಲ್ಲಿ ಕಾಂಗ್ರೆಸ್, ಬಿಜೆಪಿಯಲ್ಲಿ ಒಳಹೊಡೆತದ್ದೇ ಚಿಂತೆ.
1978ರಲ್ಲಿ ಕಾಂಗ್ರೆಸ್ನಿಂದ ಮನೋಹರ ತಹಶೀಲ್ದಾರ ಶಾಸಕರಾಗಿ ಆಯ್ಕೆಯಾಗಿದ್ದರು. 1983ರಲ್ಲಿ ಸಿ.ಎಂ.ಉದಾಸಿ, ತಹಶೀಲ್ದಾರ ವಿರುದ್ಧ ಪಕ್ಷೇತರರಾಗಿ ಸ್ಪರ್ಧಿಸಿ ವಿಧಾನಸಭೆ ಪ್ರವೇಶಿಸಿದ್ದರು. ಅಂದಿನಿಂದ 2013ರವರೆಗೆ ಕ್ಷೇತ್ರದಲ್ಲಿ ಇವರಿಬ್ಬರೇ ಆಳ್ವಿಕೆ ನಡೆಸಿದ್ದಾರೆ. ಉದಾಸಿ 6 ಬಾರಿ, ತಹಶೀಲ್ದಾರ 4 ಬಾರಿ ಆಯ್ಕೆಯಾಗಿದ್ದರು. 2018ರಲ್ಲಿ ಮನೋಹರ ತಹಶೀಲ್ದಾರಗೆ ಕಾಂಗ್ರೆಸ್ ಟಿಕೆಟ್ ತಪ್ಪಿದ್ದರಿಂದ ಸಿ.ಎಂ.ಉದಾಸಿಗೆ ಪ್ರತಿಸ್ಪರ್ಧಿಯಾಗಿ ಶ್ರೀನಿವಾಸ ಮಾನೆ ಕಣಕ್ಕಿಳಿದಿದ್ದರು. ಉದಾಸಿ ಗೆದ್ದು, ಮಾನೆ ಸೋಲು ಕಂಡಿದ್ದರು.
ರಂಗೇರಿದ ಕಣ: ಚುನಾವಣೆ ಕಣ ರಂಗೇರಿದೆ. ಕಾಂಗ್ರೆಸ್ನಿಂದ ವಿಧಾನ ಪರಿಷತ್ ಸದಸ್ಯ ಶ್ರೀನಿವಾಸ ಮಾನೆ ಎರಡನೇ ಬಾರಿಗೆ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ. ಮನೋಹರ ತಹಶೀಲ್ದಾರ ಟಿಕೆಟ್ಗಾಗಿ ಪೈಪೋಟಿ ನಡೆಸಿದ್ದರು. ಅಂತಿಮವಾಗಿ ಟಿಕೆಟ್ ಪಡೆಯುವಲ್ಲಿ ಮಾನೆ ಮೇಲುಗೈ ಸಾಧಿಸಿದ್ದಾರೆ. ಮೇಲ್ನೋಟಕ್ಕೆ ಮನೋಹರ ತಹಶೀಲ್ದಾರ ಬಂಡಾಯ ತಣ್ಣಗಾಗಿದೆ. ಆದರೆ ರಾಜ್ಯಮಟ್ಟದ ನಾಯಕರು ಬಂದಾಗಷ್ಟೇ ತಹಶೀಲ್ದಾರ ಪ್ರಚಾರಕ್ಕೆ ಬರುತ್ತಿದ್ದಾರೆ ಎನ್ನುವುದು ಗಮನಾರ್ಹ. ಸಿ.ಎಂ.ಉದಾಸಿ ಕುಟುಂಬದವರಿಗೆ ಟಿಕೆಟ್ ಸಿಗುವ ಭರವಸೆ ಕ್ಷೇತ್ರದ ಕಾರ್ಯಕರ್ತರಿಗಿತ್ತು. ಅದೆಲ್ಲ ಮೀರಿ ಶಿವರಾಜ ಸಜ್ಜನರಗೆ ಬಿಜೆಪಿ ಟಿಕೆಟ್ ಸಿಕ್ಕಿರುವುದು ಅಚ್ಚರಿ ಮೂಡಿಸಿದೆ. ಟಿಕೆಟ್ ಘೊಷಣೆ ಸಮಯ ಕ್ಷೇತ್ರದಲ್ಲಿ ಎದ್ದಿದ್ದ ಅಸಮಾಧಾನವನ್ನು ಸ್ವತಃ ಸಂಸದ ಶಿವಕುಮಾರ ಉದಾಸಿ ಅವರೇ ಸಮಾಧಾನಗೊಳಿಸುವಲ್ಲಿ ಬಹುತೇಕ ಯಶಸ್ಸು ಕಂಡಿದ್ದಾರೆ.
ಜೆಡಿಎಸ್ ಆಟಕ್ಕುಂಟು ಲೆಕ್ಕಕ್ಕಿಲ್ಲ: ಅಲ್ಪಸಂಖ್ಯಾತ ಮತಗಳ ಮೇಲೆ ಕಣ್ಣಿಟ್ಟು ಜೆಡಿಎಸ್ ನಿಯಾಜ್ ಶೇಖ್ ಎಂಬುವವರನ್ನು ಕಣಕ್ಕಿಳಿಸಿದೆ. ಆದರೆ, ಜೆಡಿಎಸ್, ಬಿಜೆಪಿ ಜತೆ ಒಳಒಪ್ಪಂದ ಮಾಡಿಕೊಂಡಿದೆ ಎಂಬ ಕಾಂಗ್ರೆಸ್ ನಾಯಕರ ಬಲವಾದ ಪ್ರಚಾರದಿಂದ ಅಲ್ಪಸಂಖ್ಯಾತರ ಮತಗಳನ್ನು ಸೆಳೆಯುವಲ್ಲಿ ಜೆಡಿಎಸ್ ವಿಫಲವಾಗುತ್ತಿರುವ ಸನ್ನಿವೇಶ ಕಂಡುಬರುತ್ತಿವೆ.
ಯಾರೇ ಗೆದ್ದರೂ ಇತಿಹಾಸ: 43 ವರ್ಷಗಳ ಕಾಲ ಮನೋಹರ ತಹಶೀಲ್ದಾರ ಹಾಗೂ ಸಿ.ಎಂ.ಉದಾಸಿ ಬಿಟ್ಟರೆ ಕ್ಷೇತ್ರದಲ್ಲಿ ಯಾರೂ ಗೆದ್ದಿರಲಿಲ್ಲ. ಈ ಬಾರಿ ಇವರಿಬ್ಬರೂ ಅಖಾಡದಲ್ಲಿಲ್ಲ. ಹೀಗಾಗಿ, ಯಾರೇ ಗೆದ್ದರೂ ಹೊಸ ಅಧ್ಯಾಯ ಶುರುವಾಗಲಿದೆ. ಅಲ್ಲದೆ, ಕ್ಷೇತ್ರದ ಹೊರಗಿನವರು ಗೆದ್ದ ದಾಖಲೆಯೂ ನಿರ್ವಣವಾಗಲಿದೆ.
ಲಿಂಗಾಯತ ಒಬಿಸಿ: ಕ್ಷೇತ್ರದಲ್ಲಿ ಕಳೆದ ನಾಲ್ಕು ದಶಕದಿಂದ ಲಿಂಗಾಯತ ವರ್ಸಸ್ ಅದರ್ಸ್ ಎಂಬ ಲೆಕ್ಕಾಚಾರದಲ್ಲಿ ಚುನಾವಣೆಯ ಫಲಿತಾಂಶ ಬಂದಿದೆ. ಲಿಂಗಾಯತ ಸಮುದಾಯಕ್ಕೆ ಸಿ.ಎಂ.ಉದಾಸಿ ನಾಯಕರಾಗಿದ್ದರೆ, ಒಬಿಸಿ ವರ್ಗಕ್ಕೆ ಮನೋಹರ ತಹಶೀಲ್ದಾರ ನಾಯಕರಾಗಿದ್ದರು. ಈ ಲೆಕ್ಕಾಚಾರದ ಗೆರೆ ದಾಟದ ಕಾಂಗ್ರೆಸ್ ಒಬಿಸಿ ಸಮುದಾಯದ ಶ್ರೀನಿವಾಸ ಮಾನೆಗೆ ಮಣೆ ಹಾಕಿದ್ದು, ಬಿಜೆಪಿಯೂ ಲಿಂಗಾಯತ ಸಮುದಾಯದ ಶಿವರಾಜ ಸಜ್ಜನರ ಅವರನ್ನು ಕಣಕ್ಕಿಳಿಸಿದೆ.
ಮತದಾರರ ಮನದಾಳ ಗುಪ್ತಗಾಮಿನಿ: ಕ್ಷೇತ್ರದಲ್ಲಿ ಒಳಸುಳಿಯ ಕಾಟವೂ ಹೆಚ್ಚಿದೆ. ಹಣ, ಪಕ್ಷಕ್ಕಿಂತ ಅಭ್ಯರ್ಥಿಗಳನ್ನು ಅಳೆದು ತೂಗಿ ಈವರೆಗೆ ಮತ ನೀಡುತ್ತ ಬಂದಿದ್ದಾರೆ ಇಲ್ಲಿನ ಜನರು. ಹಿಂದಿನ ಹತ್ತು ಚುನಾವಣೆಯಲ್ಲಿ 2 ಬಾರಿ ಮಾತ್ರ ಸಿ.ಎಂ.ಉದಾಸಿ ಸತತವಾಗಿ ಆಯ್ಕೆಯಾಗಿದ್ದನ್ನು ಬಿಟ್ಟರೆ ಯಾರಿಗೂ ಇಲ್ಲಿ ಹ್ಯಾಟ್ರಿಕ್ ಅವಕಾಶವನ್ನು ಮತದಾರರು ನೀಡಿಲ್ಲ.
ಸಿಎಂ ಬೊಮ್ಮಾಯಿ, ಶಿವಕುಮಾರ್ಗೆ ಪ್ರತಿಷ್ಠೆ: ಸಿಎಂ ಬಸವರಾಜ ಬೊಮ್ಮಾಯಿ, ಸಂಸದ ಶಿವಕುಮಾರ ಉದಾಸಿ ಅವರಿಗೆ ಸಜ್ಜನರ ಅವರನ್ನು ಗೆಲ್ಲಿಸಲೇಬೇಕಾದ ಅನಿವಾರ್ಯತೆ ಇದೆ. ಬೊಮ್ಮಾಯಿ ಸಿಎಂ ಆದ ಬಳಿಕ ತವರು ಜಿಲ್ಲೆಯಲ್ಲಿ ಮೊದಲ ಉಪಚುನಾವಣೆ ನಡೆಯುತ್ತಿದೆ. ಇಲ್ಲಿ ಸಾಮರ್ಥ್ಯ ಪ್ರದರ್ಶನವಾಗಲಿದೆ. ಶಿವಕುಮಾರ ಉದಾಸಿ 3 ಬಾರಿ ಸಂಸದರಾಗಿದ್ದು, ಕ್ಷೇತ್ರದಲ್ಲಿ ಹಿಡಿತ ಸಾಬೀತು ಪಡಿಸಬೇಕಿದೆ.