ಬಾಗಲಕೋಟೆ ತಾಲೂಕಿನ ನೀಲಾನಗರ ಹೊರವಲಯದ ಜಮೀನಿನಲ್ಲಿ ಕಿಡಗೇಡಿಗಳು ಕಟಾವಿಗೆ ಬಂದಿದ್ದ ಟೊಮ್ಯಾಟೊ ಬೆಳೆಯನ್ನು ಬೇರು ಸಮೇತ ಕಿತ್ತುಹಾಕಿರುವುದು. 
ಜಿಲ್ಲೆ

ವೈಯಕ್ತಿಕ ದ್ವೇಷಕ್ಕೆ ಟೊಮ್ಯಾಟೊ ಬೆಳೆ ನಾಶ

Vijayapura - Desk - Chinnayya Chinnayyanamath

ಬಾಗಲಕೋಟೆ: ತಾಲೂಕಿನ ನೀಲಾನಗರದಲ್ಲಿ ಪ್ರೇಮಾ ದೊಡ್ಡಮನಿ ಎನ್ನುವ ರೈತ ಮಹಿಳೆ ತನ್ನ ಜಮೀನಿನಲ್ಲಿ ಮಲ್ಚಿಂಗ್, ಕೋಲು, ತಂತಿ ಕಟ್ಟಿ ಲಕ್ಷಾಂತರ ರೂ. ಖರ್ಚುಮಾಡಿ ಬೆಳೆದಿದ್ದ 3.18 ಎಕರೆ ಟೊಮ್ಯಾಟೊ ಗಿಡಗಳಲ್ಲಿ ಒಂದು ಎಕರೆಯಷ್ಟು ಗಿಡಗಳನ್ನು ಕಿಡಿಗೇಡಿಗಳು ವೈಯಕ್ತಿಕ ದ್ವೇಷಕ್ಕಾಗಿ ಬುಡ ಸಮೇತ ಕಿತ್ತು ಹಾಕಿದ್ದಾರೆ ಎಂದು ಆರೋಪಿಸಿ, 9 ಜನರ ವಿರುದ್ಧ ಬಾಗಲಕೋಟೆ ಗ್ರಾಮೀಣ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಟೊಮ್ಯಾಟೊ ಬೆಳೆಯಲು ಅಂದಾಜು 3 ಲಕ್ಷ ರೂ.ನಷ್ಟು ಖರ್ಚುಮಾಡಿದ್ದು, ಫಸಲು ಉತ್ತಮವಾಗಿ ಬಂದಿತ್ತು. ಟೊಮ್ಯಾಟೊಗೆ ಬಂಪರ್ ಬೆಲೆ ಬಂದಿದ್ದರಿಂದ ಹಗಲು-ರಾತ್ರಿ ಕಾಯುತ್ತಿದ್ದೆವು. ಆದರೆ ಜಮೀನು ಸಂಬಂಧವಿರುವ ವಿವಾದದ ಹಿನ್ನೆಲೆ ಎದುರಾಳಿಗಳು ಬಂದು ಹಲ್ಲೆ ನಡೆಸಿದ್ದೂ ಅಲ್ಲದೆ, ಒಂದು ಎಕರೆಯಷ್ಟು ಬೆಳೆಯನ್ನು ಸಂಪೂರ್ಣ ಕಿತ್ತುಹಾಕಿದ್ದು, ಇದರಿಂದ 2 ಲಕ್ಷ ರೂ. ಮೌಲ್ಯದ ಬೆಳೆ ನಷ್ಟವಾಗಿದೆ. ಕಿಡಿಗೇಡಿಗಳು ಟೊಮ್ಯಾಟೊ ಬೆಳೆಯನ್ನು ಬೇರು ಸಮೇತ ಕಿತ್ತಿರುವ ಗಿಡಗಳು ತಂತಿಯಲ್ಲಿ ನೇತಾಡುತ್ತಿದ್ದು, ಒಣಗಿಹೋಗುತ್ತಿದೆ ಎಂದು ಆರೋಪಿಸಿ ರೈತ ಮಹಿಳೆ ಪ್ರೇಮಾ ದೊಡ್ಡಮನಿ ಕಣ್ಣೀರು ಹಾಕಿದ್ದಾರೆ.

ಭೂವಿವಾದ ನಮ್ಮ ಪರವಾಗಿ ತೀರ್ಪು ಬಂದಿದ್ದು, ಜೊತೆಗೆ ಟೊಮ್ಯಾಟೊ ಬೆಳೆಯಿಂದ ಲಕ್ಷಾಂತರ ರೂ. ಲಾಭ ಆಗುತ್ತದೆ ಎಂದು ಬೇಕೆಂದೇ ಬೆಳೆದು ನಿಂತಿದ್ದ ಟೊಮ್ಯಾಟೊ ಗಿಡಗಳನ್ನು ಕಿಡಿಗೇಡಿಗಳು ಕಿತ್ತುಹಾಕಿದ್ದಾರೆ ಎಂದು ಆಲಾಪಿಸಿದ್ದಾರೆ. ಟೊಮ್ಯಾಟೊ ಉತ್ತಮವಾಗಿ ಬೆಳೆದಿದ್ದು, ಒಂದೇ ಸಲ ಕಟಾವ್ ಮಾಡಲಾಗಿತ್ತು. ಎರಡ್ಮೂರು ದಿನದಲ್ಲಿ ಪೂರ್ಣ ಕಟಾವು ಮಾಡಲಿದ್ದೆವು. ಉತ್ತಮ ಬೆಲೆಯೂ ಇದ್ದುದರಿಂದ ಎಂಟತ್ತು ಲಕ್ಷ ರೂ. ಆದಾಯದ ನಿರೀಕ್ಷೆಯಿತ್ತು. ಆದರೆ ಎರಡು ದಿನಗಳ ಹಿಂದೆ ವಿರೋಧಿಗಳ ಗುಂಪು ಹಲ್ಲೆ ನಡೆಸಿ, ಬೆಳೆ ಕಿತ್ತು ದೌರ್ಜನ್ಯ ಎಸಗಿದ್ದಾರೆಂದು ಮಹಿಳೆ ದೂರಿದ್ದಾರೆ.

ಸಮಸ್ಯೆ ಇದ್ದರೆ ಹಿರಿಯರ ಬಳಿ ಚರ್ಚಿಸಿ ಬಗೆಹರಿಸಿಕೊಳ್ಳಬೇಕು ಅಥವಾ ಕಾನೂನು ಮೂಲಕ ಪರಿಹರಿಸಿಕೊಳ್ಳಬೇಕು. ಅದು ಬಿಟ್ಟು ಬೆಳೆ ಹಾಳು ಮಾಡಿದರೆ ಹೇಗೆ. ನನ್ನ ಹಾಗೂ ನನ್ನ ಸಹೋದರನ ಕಾಲೇಜು ಶುಲ್ಕ ಭರಿಸಲು ಹಣ ಬೇಕಿತ್ತು. ಇದನ್ನೇ ನಂಬಿದ್ದೆವು. ತಪ್ಪಿತಸ್ಥರಿಗೆ ತಕ್ಕ ಶಿಕ್ಷೆ ಆಗಬೇಕು.
ಶ್ರುತಿ ದೊಡ್ಡಮನಿ, ಪೇಮಾರವರ ಪುತ್ರಿ