ಮುಳಬಾಗಿಲು: ಕೃಷಿ ಸಂಸತಿ ಭಾರತೀಯ ಪರಂಪರೆಯಲ್ಲಿ ಉತ್ತುಂಗ ಸ್ಥಾನದಲ್ಲಿತ್ತು. ಆದರೆ ಪರಕೀಯರ ಅಕ್ರಮಣದಿಂದ ಮನುಷ್ಯರಷ್ಟೇ ಅಲ್ಲ ನಮ್ಮ ನೆಲ, ಜಲ ಸೇರಿ ಪ್ರಕೃತಿ ವಿಕೃತಿಯಾಗುತ್ತಿದೆ. ವ್ಯವಸಾಯ ಅವಸಾನದತ್ತ ಸಾಗಿದೆ ಎಂದು ಪಿಚ್ಚಗುಂಡ್ಲಹಳ್ಳಿ ಶ್ರೀ ಆದಿಪರಾಶಕ್ತಿ ಪೀಠಾಧಿಪತಿ ತಿಮ್ಮಪ್ಪಸ್ವಾಮಿ ವಿಷಾದಿಸಿದರು.
ತಾಲೂಕಿನ ಅವನಿ ಹೋಬಳಿ ಪಿಚ್ಚಗುಂಡ್ಲಹಳ್ಳಿಯ ಬಂಡೆಯ ಮೇಲೆ ಭಾರತೀಯ ಕಿಸಾನ್ ಸಂಘ ಸಹಯೋಗದಲ್ಲಿ ಪಿಚ್ಚಗುಂಡ್ಲಹಳ್ಳಿ ಶ್ರೀ ಆದಿಪರಾಶಕ್ತಿ ಪೀಠ ಟ್ರಸ್ಟ್ನಿಂದ ಆಯೋಜಿಸಿದ್ದ ಭೂಮಿ (ಮಣ್ಣು) ಪೂಜೆ, ಭತ್ತದ ರಾಶಿ ಪೂಜೆ ಕಾರ್ಯಕ್ರಮದಲ್ಲಿ ಆರ್ಶಿವಚನ ನೀಡಿದ ಅವರು, ನಮ್ಮ ಪೂರ್ವಿಕರ ಕೃಷಿ ಪದ್ಧತಿ, ಪರಂಪರೆಗಳು ವಿದೇಶಿಗರ ಅಕ್ರಮಣದಿಂದ ಕಣ್ಮರೆಯಾಗುತ್ತಿರುವ ಕಾರಣ ಈ ನೆಲದ ಧಾರ್ಮಿಕ ತಳಹದಿಗೂ ಧಕ್ಕೆಯಾಗಿ, ಭ್ರಾತೃತ್ವ ಭಾವನೆಗಳು ಮರೆಯಾಗುತ್ತಿವೆ ಎಂದು ಬೇಸರ ವ್ಯಕ್ತಪಡಿಸಿದರು.
ಭಾರತೀಯ ಕಿಸಾನ್ ಸಂಘದ ದಕ್ಷಿಣ ಪ್ರಾಂತ ಉಪಾಧ್ಯಕ್ಷ ಎ.ಅಪ್ಪಾಜಿಗೌಡ ಮಾತನಾಡಿ, ಸ್ಪರ್ಧಾತ್ಮಕ ಯುಗದ ಪೈಪೋಟಿಯಲ್ಲಿ ಮುಂದಿನ ದುಷ್ಪರಿಣಾಮಗಳ ಬಗ್ಗೆ ಚಿಂತಿಸದೆ ಕೃಷಿಯನ್ನು ವೈಜ್ಞಾನಿಕವಾಗಿಸುವ ಬರದಲ್ಲಿ ಭೂಮಿಗೆ ಹೆಚ್ಚಿಗೆ ರಾಸಾಯನಿಕ ಗೊಬ್ಬರ ಹಾಕಿ ಸಮೃದ್ಧ ನೆಲವನ್ನು ಬರಡು ಮಾಡುತ್ತಿದ್ದೇವೆ. ಅಲ್ಲದೆ ಹೆಚ್ಚುಹೆಚ್ಚು ಕೀಟನಾಶಕ ಬಳಸುವುದರಿಂದ ಭೂಮಿ, ನೀರು ಕಲುಷಿತವಾಗಿ ಜನರು ವಿಷಯುಕ್ತ ಆಹಾರ ಸೇವಿಸುವಂತಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು.
100 ಕ್ವಿಂಟಾಲ್ ಭತ್ತ ಬೆಳೆದ ಹೊಸಕೆರೆ ಗ್ರಾಮದ ರೈತ ಎಚ್.ವಿ.ನಾರಾಯಣಸ್ವಾಮಿ, ಕೀಲುಹೊಳಲಿ ರೈತ ಕೃಷ್ಣಪ್ಪ ಅವರನ್ನು ಸನ್ಮಾನಿಸಲಾಯಿತು. ಮಹಿಳಾ ಕೃಷಿ ಕಾರ್ಮಿಕರಿಗೆ ಬಾಗಿನ ನೀಡಲಾಯಿತು.
ಬಿಕೆಎಸ್ ಜಿಲ್ಲಾ ಕೋಶಾಧ್ಯಕ್ಷ ವಕೀಲ ವಿ.ಜಯಪ್ಪ, ಅವನಿ ಹೋಬಳಿ ತೋಟಗಾರಿಕೆ ಅಧಿಕಾರಿ ಮುರುಗೇಶ್, ರೈತರಾದ ಸತೀಶ್ ಕುಮಾರ್, ಹನುಮಪ್ಪ, ವೆಂಕಟೇಶಪ್ಪ, ಕೃಷ್ಣ್ಣಪ್ಪ, ವೆಂಕಟೇಶ್, ನಾರಾಯಣಪ್ಪ, ನಂಜುಂಡಪ್ಪ, ಮಂಜಮ್ಮ ಇದ್ದರು.