ಕಡೂರು: ಮಳೆ ನಡುವೆಯೂ ಪಟ್ಟಣದಲ್ಲಿ ರಾಜ್ಯಮಟ್ಟದ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಕಬಡ್ಡಿ ಪಂದ್ಯಾವಳಿಗಳನ್ನು ಯಶಸ್ವಿಯಾಗಿ ನಡೆಸಲಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಆರ್.ಸಿದ್ದರಾಜುನಾಯ್ಕ ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೊದಲೆರಡು ದಿನ ಮೈಸೂರು ವಿಭಾಗೀಯ ಮಟ್ಟ ಹಾಗೂ ರಾಜ್ಯಮಟ್ಟದ ಸ್ಪರ್ಧೆಗಳನ್ನು ನಡೆಸಲಾಯಿತು. 17ವರ್ಷದ ಬಾಲಕರ ವಿಭಾಗದಲ್ಲಿ ಕಡೂರಿನ ಕೇಂಬ್ರಿಡ್ಜ್ ಪಬ್ಲಿಕ್ ಶಾಲೆ, ಬಾಳೆಹೊನ್ನೂರು ಸರ್ಕಾರಿ ಪ್ರೌಢ ಶಾಲೆ, ಪುತ್ತೂರಿನ ವಿವೇಕಾನಂದ ಪ್ರೌಢಶಾಲೆ ಮತ್ತು ಮಂಗಳೂರಿನ ಇಂದಿರಾ ಗಾಂಧಿ ಆಂಗ್ಲ ಮಾಧ್ಯಮ ಶಾಲೆ ತಂಡದ ವಿದ್ಯಾರ್ಥಿಗಳು ಪ್ರಥಮ ಸ್ಥಾನ ಪಡೆದಿದ್ದಾರೆ.
ಆನೇಕಲ್ ತಾಲೂಕಿನ ಸೋಲೂರು ವಿನೋಭಾ ಭಾವೆ ಪ್ರೌಢಶಾಲೆ, ಪುಟ್ಟೇನಹಳ್ಳಿ ಸರ್ಕಾರಿ ಪ್ರೌಢಶಾಲೆ, ಚಿಂತಾಮಣಿಯ ರಾಮಕೃಷ್ಣ ಹೈಸ್ಕೂಲ್ ಹಾಗೂ ಚಿಕ್ಕಬಳ್ಳಾಪುರದ ಅಂಜನಾದ್ರಿ ಹೈಸ್ಕೂಲ್ ತಂಡದ ಆಟಗಾರರು ದ್ವಿತೀಯ ಸ್ಥಾನ ಪಡೆದಿದ್ದಾರೆ. ಹುಡಗಿಯ ಕರಿಬಸವೇಶ್ವರ ಪ್ರೌಢಶಾಲೆ, ಹೊಡೇಕಲ್ಲು, ತುಮಕೂರು ಮತ್ತು ಗೊವೇರಹಳ್ಳಿ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳ ತಂಡ ತೃತೀಯ ಸ್ಥಾನ ಪಡೆದಿದ್ದಾರೆ. ಇವರು ಮಹಾರಾಷ್ಟ್ರದಲ್ಲಿ ನಡೆಯುವ ರಾಷ್ಟ್ರಮಟ್ಟದ ಕಬಡ್ಡಿ ಸ್ಪರ್ಧೆಯಲ್ಲಿ ರಾಜ್ಯವನ್ನು ಪ್ರತಿನಿಧಿಸಲಿದ್ದಾರೆ ಎಂದು ತಿಳಿಸಿದರು.
14 ವರ್ಷ ವಯೋಮಾನದ ಒಳಗಿನ ಬಾಲಕರ ವಿಭಾಗದಲ್ಲಿ ಕಡೂರಿನ ಪುರ ಕೇಂಬ್ರಿಡ್ಜ್ ಪಬ್ಲಿಕ್ ಸ್ಕೂಲ್, ಅಂಬಳೆ ಮತ್ತು ಆವತಿಯ ಡಾ.ಬಿ.ಆರ್.ಅಂಬೇಡ್ಕರ್ ವಸತಿ ಶಾಲೆ ಮತ್ತು ಬೀಕನಹಳ್ಳಿಯ ಮೊರಾರ್ಜಿ ವಸತಿ ಶಾಲೆ ತಂಡ ಪ್ರಥಮ ಸ್ಥಾನ ಪಡೆದಿದ್ದಾರೆ. ಬಳಗಾರನಹಳ್ಳಿಯ ಬ್ಲೂಮ್ಸ್ ಇಂಟರ್‌ನ್ಯಾಷನಲ್ ಸ್ಕೂಲ್, ಸೀಗೆಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಕೈವಾರದ ಕೀರ್ತನ ಇಂಟರ್‌ನ್ಯಾಷನಲ್ ಸ್ಕೂಲ್, ಕಡವನಮಾರಿಯ ನವೋದಯ ಹೈಸ್ಕೂಲ್ ಮತ್ತು ಕೃಷ್ಣರಾಜಪುರದ ಭರತರತ್ನ ಇಂಗ್ಲಿಷ್ ಸ್ಕೂಲ್ ತಂಡಗಳು ದ್ವಿತೀಯ ಸ್ಥಾನ ಪಡೆದಿವೆ. ಬಾಗಲಕೋಟೆ ಮುಧೋಳದ ಆಕ್ಸಫರ್ಡ್ ಆಂಗ್ಲ ಮಾಧ್ಯಮ ಶಾಲೆ, ಕಂಕನವಾಡಿಯ ವಿಟಲ್‌ರಾಯ್ ಕನ್ನಡ ಮಾಧ್ಯಮ ಶಾಲೆ ವಿದ್ಯಾರ್ಥಿಗಳು ತೃತೀಯ ಸ್ಥಾನ ಪಡೆದಿದ್ದಾರೆ.