ಇಂಡಿ ತಾಲೂಕಿನ ಮಸಳಿ ಗ್ರಾಮದಲ್ಲಿ ಜಲ ಜೀವನ್ ಮಿಷನ್ ಕಳಪೆ ಕಾಮಗಾರಿಯಿಂದಾಗಿ ಕುಡಿಯುವ ನೀರು ಸಿಗದೇ ಪರದಾಡುತ್ತಿರುವ ಜನ. 
ಜಿಲ್ಲೆ

ಕುಡಿಯುವ ನೀರಿಗಾಗಿ ತೀವ್ರ ಹಾಹಾಕಾರ, ಮಸಳಿ ಗ್ರಾಮದಲ್ಲಿ ಮತದಾನ ಬಹಿಷ್ಕಾರಕ್ಕೆ ನಿರ್ಧಾರ !

ವಿಜಯಪುರ: ಬಿಸಿಲಿನ ತಾಪಮಾನ ದಿನೇ ದಿನೇ ಹೆಚ್ಚುತ್ತಿದೆ, ಜನ-ಜಾನುವಾರು ಬಸವಳಿದಿವೆ, ಕುಡಿಯುವ ನೀರಿಗಾಗಿ ಹಾಹಾಕಾರ ಶುರುವಾಗಿದೆ, ಆದರೂ, ಅಧಿಕಾರಿ ವರ್ಗ ಸ್ಪಂದಿಸದ ಹಿನ್ನೆಲೆ ಸಾರ್ವಜನಿಕರು ಮತದಾನ ಬಹಿಷ್ಕಾರದ ನಿರ್ಧಾರ ಪ್ರಕಟಿಸಿದ್ದಾರೆ.

ಇಂಡಿ ತಾಲೂಕಿನ ಹಿರೇಮಸಳಿ ಗ್ರಾಮದಲ್ಲಿ ಕಳೆದೊಂದು ತಿಂಗಳಿನಿಂದ ಕುಡಿಯುವ ನೀರಿನ ಸಮಸ್ಯೆ ತಾರಕಕ್ಕೇರಿದೆ. ಸಮಸ್ಯೆ ಹೇಳಿಕೊಳ್ಳೋಣವೆಂದರೆ ಗ್ರಾಮಕ್ಕೆ ಪಿಡಿಒ ಬರುತ್ತಲೇ ಇಲ್ಲ, ಇರುವ ಪಿಡಿಒ ರಜೆ ಮೇಲಿರುವ ಕಾರಣ ಹೊಸಬರನ್ನು ನೇಮಕ ಮಾಡಲಾಗುತ್ತಿದೆ ಎಂದು ತಾಲೂಕು ಮಟ್ಟದ ಅಧಿಕಾರಿಗಳು ಹೇಳುತ್ತಲೇ ಒಂದು ತಿಂಗಳು ಗತಿಸಿದೆ. ಈವರೆಗೂ ಸಮಸ್ಯೆ ಮಾತ್ರ ಬಗೆ ಹರಿಯದ ಹಿನ್ನೆಲೆ ತಾಳ್ಮೆ ಕಳೆದುಕೊಂಡಿರುವ ಗ್ರಾಮಸ್ಥರು ಮತದಾನ ಬಹಿಷ್ಕರಿಸುವ ನಿರ್ಧಾರ ಕೈಗೊಂಡಿದ್ದಾರೆ.

ಜೆಜೆಎಂ ಕಳಪೆ ಕಾಮಗಾರಿ

ಮನೆ ಮನೆಗೆ ಕುಡಿಯುವ ನೀರು ಕಲ್ಪಿಸಲು ಕೇಂದ್ರ ಸರ್ಕಾರ ಮಹತ್ವಾಕಾಂಕ್ಷಿ ಜಲ ಜೀವನ್ ಮಿಷನ್ ಕಾಮಗಾರಿ ಅನುಷ್ಟಾನಗೊಳಿಸಿದೆ. ಆದರೆ, ಕಳಪೆ ಕಾಮಗಾರಿ ಮತ್ತು ವಿಳಂಬ ನೀತಿಯಿಂದಾಗಿ ಹಲವು ಅವಾಂತರಗಳು ಸೃಷ್ಠಿಯಾಗುತ್ತಿದೆ. ಎಲ್ಲೆಂದರಲ್ಲಿ ಅಗೆದು ಸಂಚಾರಕ್ಕೆ ವ್ಯತ್ಯಯವನ್ನುಂಟು ಮಾಡಿದ್ದಾರೆ. ಅಲ್ಲದೇ, ಕುಡಿಯುವ ನೀರಿನ ಪೈಪ್‌ಗಳನ್ನು ಒಡೆಯಲಾಗಿದ್ದು, ಹೊಸ ಪೈಪ್‌ಜೋಡಣೆ ಮಾಡದ ಪರಿಣಾಮ ಸಕಾಲಕ್ಕೆ ನೀರು ಲಭ್ಯವಾಗುತ್ತಿಲ್ಲ. ಕಳಪೆ ಕಾಮಗಾರಿಯನ್ನು ಸ್ಥಗಿತಗೊಳಿಸಲು ಹೇಳಿದರೂ ಅಧಿಕಾರಿಗಳು ಲಂಚಬಾಕ ಸಂಸ್ಕೃತಿಯಿಂದಾಗಿಯೋ ಅಥವಾ ರಾಜಕೀಯ ಒತ್ತಡಕ್ಕೆ ಮಣಿದ ಕಾರಣದಿಂದಲೋ ಯಥಾವತ್ತಾಗಿ ಕಾಮಗಾರಿ ಮುಂದುವರಿಸಿದ್ದಾರೆ.

ಜನರ ಗೋಳು ಕೇಳುವರಿಲ್ಲ

ಗ್ರಾಮದಲ್ಲಿ ಕುಡಿಯುವ ನೀರಿನ ಟ್ಯಾಂಕ್ ಕಟ್ಟಡ ಕೂಡ ಗುಣಮಟ್ಟದ್ದಾಗಿಲ್ಲ. ಗುತ್ತಿಗೆದಾರನ ನಿರ್ಲಕ್ಷೃದಿಂದಾಗಿ ಇರುವ ಕುಡಿಯುವ ನೀರಿನ ವ್ಯವಸ್ಥೆಗೂ ಧಕ್ಕೆಯಾಗುತ್ತಿದೆ. ಬಿರುಬಿಸಿಲಿನಿಂದಾಗಿ ಕುಡಿಯುವ ನೀರಿಗಾಗಿ ಮೈಲಿಗಟ್ಟಲೇ ಸಂಚರಿಸಬೇಕಾದ ಸ್ಥಿತಿ ಇದೆ. ವೃದ್ಧರು, ಮಕ್ಕಳು, ಮಹಿಳೆಯರು ಗರಿಷ್ಠ 45 ಡಿಗ್ರಿ ತಾಪಮಾನದ ನಡೆಯುವೆಯೂ ಜೀವದ ಹಂಗು ತೊರೆದು ನೀರಿಗಾಗಿ ಅಲೆಯುವಂತಾಗಿದೆ. ಗ್ರಾಮ ಪಂಚಾಯಿತಿ ಆಡಳಿತ ಸಂಪೂರ್ಣ ಹದಗೆಟ್ಟಿದ್ದು, ಯಾರೊಬ್ಬರೂ ಪಂಚಾಯಿತಿಯಲ್ಲಿ ಇರುವುದಿಲ್ಲ. ಸದಾ ಬೀಗ ಜಡಿದಿರುವುದು ಕಂಡು ಬರುತ್ತಿದೆ. ಹೀಗಾಗಿ ಜನರ ಆಕ್ರೋಶದ ಕಟ್ಟೆ ಒಡೆದಿದೆ.
ಇಷ್ಟೆಲ್ಲಾ ಸಮಸ್ಯೆಗಳನ್ನು ಇಟ್ಟುಕೊಂಡು ಪ್ರಜಾತಂತ್ರ ವ್ಯವಸ್ಥೆಯ ಭಾಗವಾಗಿರುವ ಮತದಾನ ಪ್ರಕ್ರಿಯೆಯಲ್ಲಿ ಭಾಗವಹಿಸುವುದರಲ್ಲಿ ಏನಾದರೂ ಅರ್ಥವಿದೆಯಾ ಎಂದು ಗ್ರಾಮಸ್ಥರು ಪ್ರಶ್ನಿಸುತ್ತಿದ್ದಾರೆ.