ಜಿಲ್ಲೆ

ರೋಟರಿ ಕ್ಲಬ್ ನಿಂದ ಡೆಸ್ಕ್ ದೇಣಿಗೆ, ಉಣಕಲ್ಲ ಹಿರೇಗೌಡರ ಕಾಲೇಜಿನಲ್ಲಿ ಸನ್ಮಾನ

Dharwada - Basavaraj Idli

ಹುಬ್ಬಳ್ಳಿ: ಇಲ್ಲಿಯ ಉಣಕಲ್ಲ ತರಳಬಾಳು ಜಗದ್ಗುರು ವಿದ್ಯಾಸಂಸ್ಥೆಯ ಆರ್.ಕೆ. ಕೊಕಾಟಿ ಪ್ರೌಢಶಾಲೆಯ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ರೋಟರಿ ಕ್ಲಬ್ ವತಿಯಿಂದ ಡೆಸ್ಕ್ ಗಳನ್ನು ದೇಣಿಗೆ ನೀಡಲಾಯಿತು.

ತರಳಬಾಳು ಕ್ಯಾಂಪಸ್ ಆವರಣದ ಐ.ಜಿ. ಹಿರೇಗೌಡರ ಪಿಯು ಕಾಲೇಜಿನಲ್ಲಿ ಮಂಗಳವಾರ ಏರ್ಪಡಿಸಿದ್ದ ಸಮಾರಂಭದಲ್ಲಿ ದೇಣಿಗೆ ನೀಡಿದ ಕ್ಲಬ್ ಪದಾಧಿಕಾರಿಗಳನ್ನು ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ರೋಟರಿ ಕ್ಲಬ್ ಅಧ್ಯಕ್ಷ ಕಿರಣಕುಮಾರ ಹೆಬಸೂರ, ಶಿಕ್ಷಣಕ್ಕಾಗಿ ಕ್ಲಬ್ ಸಾಕಷ್ಟು ನೆರವು ನೀಡುತ್ತ ಬಂದಿದೆ. ವಿದ್ಯಾರ್ಥಿಗಳು ಇದರ ಪ್ರಯೋಜನ ಪಡೆದು ಉತ್ತಮ ಸಾಧನೆ ಮಾಡಬೇಕು ಎಂದು ಹೇಳಿದರು.

ಕ್ಲಬ್ ಕಾರ್ಯದರ್ಶಿ ರಿಷಿ ತಿವಾರಿ ಮಾತನಾಡಿ, ಸಮಾಜ ಸೇವೆ ಮಾಡುವುದರಲ್ಲಿಯೇ ಖುಷಿ ಇದೆ. ದೇಣಿಗೆಯಿಂದ ಜನರಿಗೆ ಅನುಕೂಲವಾದರೆ ಅದೇ ಸಂತೃಪ್ತಿ ಎಂದರು.

ಕಾಲೇಜು ಸ್ಥಳಿಯ ಸಲಹಾ ಸಮಿತಿ ಅಧ್ಯಕ್ಷ ಶಿವಾನಂದ ಹೆಬಸೂರ ಮಾತನಾಡಿ, ಮಕ್ಕಳ ಅಭ್ಯಾಸಕ್ಕೆ ಅನುಕೂಲ ಮಾಡಿಕೊಟ್ಟಿರುವ ರೋಟರಿ ಕ್ಲಬ್ ಕಾರ್ಯ ಪ್ರಶಂಸೆಗೆ ಪಾತ್ರವಾಗಿದೆ ಎಂದರು.

ಕ್ಲಬ್ ನಿರ್ದೇಶಕ ಯೋಗೇಶ ಕರಂಡಿಕರ, ಸಲಹಾ ಸಮಿತಿ ಸದಸ್ಯ ಎಸ್.ಎಂ. ಸೋಮನಗೌಡ್ರು, ಕಾಲೇಜಿನ ಉಪಾಧ್ಯಕ್ಷ ಸೋಮನಗೌಡ ಪಾಟೀಲ್ ಇತರರು ಮಾತನಾಡಿದರು.

ಪ್ರಾಥಮಿಕ ಶಾಲೆ ಸ್ಥಳಿಯ ಸಲಹಾ ಸಮಿತಿ ಅಧ್ಯಕ್ಷ ಆರ್.ಎಸ್. ಹನ್ನಿ, ಜಿ.ಎಂ. ಪಾಟೀಲ್, ಬಸವರಾಜ ಕಲ್ಯಾಣ, ಆರ್.ವಿ. ಪಾಟೀಲ್, ಶಿವಣ್ಣ ಹಂಗರಕಿ, ಇತರರು ಉಪಸ್ಥಿತರಿದ್ದರು.

ಪ್ರೌಢಶಾಲೆಯ ಮುಖ್ಯಾಧ್ಯಾಪಕ ಶಿವಕುಮಾರಗೌಡ ಬಿ.ಜಿ. ಪ್ರಾಸ್ತಾವಿಕ ಮಾತನಾಡಿದರು. ವಿಜಯಶ್ರೀ ಕೆರೂರು ಕಾರ್ಯಕ್ರಮ ನಿರೂಪಿಸಿದರು. ಶರತ್ ಜಿ.ಟಿ. ಸ್ವಾಗತಿಸಿದರು. ಡಾ. ಶಾಂತಮ್ಮ ಬಿ. ವಂದಿಸಿದರು. ವಿದ್ಯಾರ್ಥಿನಿ ವರ್ಷ ಜಿ.ಆರ್. ಹಾಗೂ ಸಂಗಡಿಗರು ಪ್ರಾರ್ಥನೆ ಹಾಡಿದರು.