ವಿಜಯವಾಣಿ ಸುದ್ದಿಜಾಲ ಹೆಬ್ರಿ ಹೆಬ್ರಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಲ್ಲಿ ಪ್ರಥಮ ವರ್ಷದ ಪದವಿ ವಿದ್ಯಾರ್ಥಿಗಳಿಗೆ ಅಭಿವಿನ್ಯಾಸ ಕಾರ್ಯಕ್ರಮ ನಡೆಯಿತು. ಸಂಪನ್ಮೂಲ ವ್ಯಕ್ತಿ ಪ್ರಕಾಶ್ ಪೂಜಾರಿ ಮಾತಿಬೆಟ್ಟು ಉದ್ಘಾಟಿಸಿ ಮಾತನಾಡಿ, ಕಾಲೇಜಿನ ಹೊಸ ವಾತಾವರಣಕ್ಕೆ ನಮ್ಮನ್ನು ನಾವು ಒಗ್ಗಿಸಿಕೊಳ್ಳುವ ಕೆಲಸ ಮಾಡಬೇಕು. ವಿದ್ಯಾರ್ಥಿಗಳು ಯಾವುದೇ ವ್ಯಸನಗಳಿಗೆ ತುತ್ತಾಗದೆ ಉತ್ತಮ ಬದುಕನ್ನು ರೂಪಿಸಿಕೊಳ್ಳಲು ಒಳ್ಳೆಯ ಗೆಳೆಯರ ಸಹವಾಸ ಮಾಡಬೇಕು ಎಂದರು. ಪ್ರಾಂಶುಪಾಲ ಡಾ.ವಿದ್ಯಾಧರ ಹೆಗ್ಡೆ ಎಸ್. ಅಧ್ಯಕ್ಷತೆ ವಹಿಸಿ ಮಾತನಾಡಿ, ವಿದ್ಯಾರ್ಥಿಗಳಿಗೆ ನಿರ್ದಿಷ್ಟವಾದ ಗುರಿ ಇರಬೇಕು. ಅದನ್ನು ಸಾಧಿಸುವ ಇಚ್ಛಾಶಕ್ತಿ ಇರಬೇಕು. ಆಗ ನಿಮ್ಮ ಭವಿಷ್ಯ ಉಜ್ವಲವಾಗುತ್ತದೆ ಎಂದರು. ವಾಣಿಜ್ಯ ವಿಭಾಗದ ಮುಖ್ಯಸ್ಥ ಡಾ.ಗಣೇಶ್ ಎಸ್., ದೈಹಿಕ ಶಿಕ್ಷಣ ನಿರ್ದೇಶಕ ಡಾ.ಮನೋಜ್ ಕುಮಾರ್ ಉಪಸ್ಥಿತರಿದ್ದರು. ಕನ್ನಡ ವಿಭಾಗದ ಮುಖ್ಯಸ್ಥ ಡಾ.ಪ್ರವೀಣ್ ಕುಮಾರ್ ಎಸ್.ಸ್ವಾಗತಿಸಿದರು. ಇಂಗ್ಲೀಷ್ ವಿಭಾಗದ ಮುಖ್ಯಸ್ಥ ಪ್ರವೀಣ್ ಶೆಟ್ಟಿ ನಿರೂಪಿಸಿ, ವಂದಿಸಿದರು.