ಜಿಲ್ಲೆ

ಜಂಕ್ಷನ್‌ಗಳ ಅಭಿವೃದ್ಧಿಗೆ ವಿನ್ಯಾಸ ರೂಪಿಸಿ: ಬಿಬಿಎಂಪಿ ಮುಖ್ಯ ಆಯುಕ್ತರ ಸೂಚನೆ

ಆರ್.ತುಳಸಿಕುಮಾರ್

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿರುವ ಪ್ರಮುಖ ಜಂಕ್ಷನ್‌ಗಳ ಸಮಗ್ರ ಅಭಿವೃದ್ಧಿಗೆ ವಿನ್ಯಾಸ ರೂಪಿಸುವಂತೆ ಮುಖ್ಯ ಆಯುಕ್ತ ಮಹೇಶ್ವರ್ ರಾವ್ ಅವರು ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಪಾಲಿಕೆ ಕೇಂದ್ರ ಕಚೇರಿಯಲ್ಲಿ ಸೋಮವಾರ ನಡೆದ ಸಭೆಯಲ್ಲಿ ಮಾತನಾಡಿದ ಅವರು, ನಗರದಲ್ಲಿ ಈಗಾಗಲೇ ಹಲವಾರು ಜಂಕ್ಷನ್‌ಗಳ ಅಭಿವೃದ್ಧಿ ಕಾರ್ಯ ಕೈಗೆತ್ತಿಕೊಳ್ಳಲಾಗಿದೆ. ಸಂಚಾರ ವ್ಯವಸ್ಥೆ ಇನ್ನಷ್ಟು ಸುಗಮಗೊಳಿಸಲು ಇನ್ನಿತರ ಜಂಕ್ಷನ್‌ಗಳ ಅಭಿವೃದ್ಧಿಗೂ ಸಮಗ್ರ ಯೋಜನೆ ರೂಪಿಸಬೇಕು ಎಂದು ನಿದೇಶಿಸಿದರು.

ಭೂಸ್ವಾಧೀನ ಪ್ರಕ್ರಿಯೆಗೆ ವೇಗ ನೀಡಿ:

ನಗರದಲ್ಲಿ ರಸ್ತೆ, ಮೇಲ್ಸೇತುವೆ, ಕೆಳಸೇತುವೆ ಸೇರಿ ಇನ್ನಿತರ ಯೋಜನೆಗಳಿಗಾಗಿ ಟಿಡಿಆರ್ ನೀಡಿ ಭೂಸ್ವಾಧೀನ ಪಡಿಸಿಕೊಳ್ಳಬೇಕಿದೆ. ಇದಕ್ಕಾಗಿ ಆಯಾ ವಲಯಗಳಲ್ಲಿ ಅಗತ್ಯ ಕ್ರಮ ತೆಗೆದುಕೊಳ್ಳಬೇಕಿದೆ. ಎಲ್ಲೆಲ್ಲಿ ಭೂಸ್ವಾಧೀನದ ಅವಶ್ಯಕತೆಯಿದೆಯೋ ಅಂತಹವುಗಳನ್ನು ಪಟ್ಟಿ ಮಾಡಿಕೊಂಡು ಆಸ್ತಿ ಮಾಲೀಕರಿಗೆ ಟಿಡಿಆರ್ ಪರಿಹಾರ ವಿತರಿಸಿ ಆ ಜಾಗವನ್ನು ಪಾಲಿಕೆ ಸುಪರ್ದಿಗೆ ಪಡೆಯಬೇಕು ಎಂದು ಸೂಚನೆ ನೀಡಿದರು.

ನಗರದಲ್ಲಿ ಕಂಡುಬರುವ ರಸ್ತೆಗುಂಡಿಗಳನ್ನು ನಿರಂತರವಾಗಿ ಮುಚ್ಚುವ ಕಾರ್ಯ ಕೈಗೊಳ್ಳಬೇಕು. ರಸ್ತೆಗುಂಡಿ ಗಮನ ತಂತ್ರಾಂಶದಲ್ಲಿ ಬರುವ ದೂರುಗಳಿಗೆ ಸ್ಪಂದಿಸಿ ಬೇಗನೆ ಇತ್ಯರ್ಥಪಡಿಸಬೇಕು. ಆರ್ಟಿರಿಯಲ್ ಮತ್ತು ಸಬ್-ಆರ್ಟಿರಿಯಲ್ ರಸ್ತೆಗಳಲ್ಲಿ ರಸ್ತೆಗುಂಡಿಗಳನ್ನು ಮುಚ್ಚಲು ಆದ್ಯತೆ ನೀಡಬೇಕು ಎಂದು ಕಟ್ಟಪ್ಪಣೆ ಮಾಡಿದರು.

ಫುಟ್‌ಪಾತ್ ಅಭಿವೃದ್ಧಿಗೆ ಗಮನ ನೀಡಿ:

ನಗರದ ಹಲವೆಡೆ ಫುಟ್‌ಪಾತ್ ದುರವಸ್ಥೆ ಬಗ್ಗೆ ದೂರುಗಳು ಬರುತ್ತಿವೆ. ಅಂತಹವುಗಳನ್ನು ಗುರುತಿಸಿ ಸುಸ್ಥಿತಿಯಲ್ಲಿಡಬೇಕು. ಈ ಹಿನ್ನೆಲೆಯಲ್ಲಿ ಪಾಲಿಕೆಯ ಎಂಟೂ ವಲಯಗಳಲ್ಲಿ ತಲಾ 20 ಕಿ.ಮೀ. (ರಸ್ತೆಯ ಎರಡೂ ಬದಿ) ನಿರಂತರವಾಗಿರುವ ಪಾದಚಾರಿ ಮಾರ್ಗ ಗುರುತಿಸಿ ಅಲ್ಲಿ ಯಾವುದೇ ರೀತಿಯ ಒತ್ತುವರಿ ಆಗಿದ್ದಲ್ಲಿ ತೆರವುಗೊಳಿಸಿ ಅಭಿವೃದ್ಧಿಪಡಿಸಬೇಕು ಎಂದು ಮುಖ್ಯ ಆಯುಕ್ತರು ಅಧಿಕಾರಿಗಳಿಗೆ ಸೂಚಿಸಿದರು.

ಸಭೆಯಲ್ಲಿ ವಿಶೇಷ ಆಯುಕ್ತರಾದ ಮುನೀಶ್ ಮೌದ್ಗಿಲ್, ಸುರಳ್ಕರ್ ವಿಕಾಸ್ ಕಿಶೋರ್, ಡಾ. ಕೆ. ಹರೀಶ್ ಕುಮಾರ್, ವಲಯ ಆಯುಕ್ತರು ಉಪ ಆಯುಕ್ತರು, ಮುಖ್ಯ ಅಭಿಯಂತರರು ಹಾಜರಿದ್ದರು.

ಆಸ್ತಿ ತೆರಿಗೆ ಸಂಗ್ರಹಕ್ಕೆ ಆದ್ಯತೆ ನೀಡಿರಿ:

ಪ್ರಸಕ್ತ ಆರ್ಥಿಕ ವರ್ಷದಲ್ಲಿ ಆಸ್ತಿ ತೆರಿಗೆ ಅಡಿಯಲ್ಲಿ 6,256 ಕೋಟಿ ರೂ. ಸಂಗ್ರಹಿಸುವ ಗುರಿ ಹೊಂದಲಾಗಿದೆ. ಈವರೆಗೆ 2,966 ಕೋಟಿ ರೂ. ತೆರಿಗೆ ಸಂಗ್ರಹಿಸಿದ್ದು, ಎಲ್ಲ ವಲಯಗಳಲ್ಲಿ ಆಸ್ತಿ ತೆರಿಗೆ ಸಂಗ್ರಹಿಸಲು ಹೆಚ್ಚಿನ ಗಮನ ನೀಡಬೇಕು. ಹೊಸ ಇ-ಖಾತಾಗಳ ಮೇಲೆ ಹೆಚ್ಚು ಒತ್ತು ನೀಡಿ, ಅದರ ಮೇಲೆ ನಿಗಾ ಇರಿಸಿದ್ದಲ್ಲಿ ಅಧಿಕ ಆದಾಯ ಸಂಗ್ರಹಿಸಬಹುದಾಗಿದೆ ಎಂದು ಮಹೇಶ್ವರ್ ರಾವ್ ಸಲಹೆ ನೀಡಿದರು.