ಜಿಲ್ಲೆ

ಹಿಂಗಾರು ಬೆಳೆಗೆ ಬೇರು ಕೊಳೆರೋಗ

ಲಕ್ಷ್ಮೇಶ್ವರ: ತಾಲೂಕಿನ ವಿವಿಧೆಡೆ ಹಿಂಗಾರಿನ ಜೋಳ, ಗೋಧಿ, ಕಡಲೆ, ಕುಸುಬೆ ಬೆಳೆಗಳು ಲದ್ದಿಹುಳು, ಹಸಿರು ಕೀಟ, ಸಿಡಿ (ಬೇರು ಕೊಳೆರೋಗ) ರೋಗದಿಂದಾಗಿ ಹಾಳಾಗುತ್ತಿದ್ದು, ರೈತರನ್ನು ಚಿಂತೆಗೀಡು ಮಾಡಿದೆ.

ಕೃಷಿ ಇಲಾಖೆಯ ಮಾಹಿತಿ ಪ್ರಕಾರ, ತಾಲೂಕಿನಾದ್ಯಂತ ಒಟ್ಟು 26,750 ಹೆಕ್ಟೇರ್ ಪ್ರದೇಶದಲ್ಲಿ ಹಿಂಗಾರು ಬೆಳೆ ಬಿತ್ತನೆ ಮಾಡಲಾಗಿದೆ. ಅದರಲ್ಲಿ 11,700 ಹೆಕ್ಟೇರ್​ನಲ್ಲಿ ಜೋಳ, 9750 ಹೆಕ್ಟೇರ್ ಕಡಲೆ, 1230 ಹೆಕ್ಟೇರ್ ಸೂರ್ಯಕಾಂತಿ, 2600 ಚಳಿ ಬೀಟಿ ಮತ್ತು 600 ಹೆಕ್ಟೇರ್ ಜಮೀನಿನಲ್ಲಿ ಗೋಧಿ ಬಿತ್ತನೆಯಾಗಿದೆ. ಅಕ್ಟೋಬರ್​ನಲ್ಲಿ ಬಿತ್ತನೆಯಾಗಿರುವ ಜೋಳಕ್ಕೆ ಆವರಿಸಿದ್ದ ಲದ್ದಿಹುಳು ಬಾಧೆ ನಿವಾರಣೆಗೆ ರೈತರು ಹರಸಾಹಸ ಪಟ್ಟಿದ್ದಾರೆ. ಈಗ ಕಡಲೆ ಮತ್ತು ಗೋಧಿ ಬೆಳೆಗಳು ಬೇರು ಕೊಳೆಯುವ ರೋಗಕ್ಕೆ ತುತ್ತಾಗುತ್ತಿವೆ.

ಲಕ್ಷ್ಮೇಶ್ವರ ಸೇರಿ ತಾಲೂಕಿನ ಗೊಜನೂರ, ಮಾಗಡಿ, ಯಳವತ್ತಿ, ಮಾಡಳ್ಳಿ, ಯತ್ತಿನಹಳ್ಳಿ, ರಾಮಗೇರಿ, ಬೂದಿಹಾಳ, ಕೊಕ್ಕರಗೊಂದಿ, ಸೂರಣಗಿ, ಬಡ್ನಿ, ದೊಡ್ಡೂರ, ಶಿಗ್ಲಿ, ಅಡರಕಟ್ಟಿ ಗ್ರಾಮ ವ್ಯಾಪ್ತಿಯಲ್ಲಿ ಕಡಲೆಯನ್ನು ಹೆಚ್ಚಾಗಿ ಬೆಳೆಯಲಾಗುತ್ತದೆ. ಮುಂಗಾರಿನಲ್ಲಿ ವಾಣಿಜ್ಯ ಬೆಳೆ ಹೆಸರು, ಶೇಂಗಾ, ಹತ್ತಿ ಕೈ ಕೊಟ್ಟಿದ್ದರರಿಂದ ಕಡಲೆ ಬಿತ್ತನೆಗೆ ರೈತರು ಹೆಚ್ಚು ಒಲವು ತೋರಿದ್ದಾರೆ.

ಮುಂಗಾರಿನಲ್ಲಿ ಹೆಚ್ಚು ಮಳೆಯಾಗಿ ಬೆಳೆಹಾನಿ ಅನುಭವಿಸಿದ್ದೇವೆ. ಈಗ ಪ್ರತಿ ಎಕರೆಗೆ ಬೀಜ, ಗೊಬ್ಬರ, ಕ್ರಿಮಿನಾಶಕ ಸೇರಿ 10 ಸಾವಿರ ರೂ. ಖರ್ಚು ಮಾಡಿದ್ದೇವೆ. ಈಗ ಕಡಲೆಗೆ ಕಿಟಬಾಧೆ, ಸಿಡಿ ರೋಗ ಆವರಿಸಿದ್ದು ಬೆಳೆ ಉಳಿಸಿಕೊಳ್ಳಲು ಮತ್ತೆ ಖರ್ಚು ಮಾಡುವುದು ಅನಿವಾರ್ಯವಾಗಿದೆ. | ಬಸವರಾಜ ಮಟ್ಟಿ, ಚನ್ನಪ್ಪ ಅಣ್ಣಿಗೇರಿ, ಕಡಲೆ ಬೆಳೆಗಾರರು, ಲಕ್ಷ್ಮೇಶ್ವರ

ರೈತರಿಗೆ ಸಲಹೆ: ಕಡಲೆ ಬೆಳೆಗೆ ಆವರಿಸಿರುವ ಕೀಟಬಾಧೆ ತಡೆಗೆ ರೈತರು 5 ಗ್ರಾಂ ಇಮಾಮ್ಯಾಕ್ಟಿವ್ ಬೆಂಜೋವೇಟ್ ಕ್ರಿಮಿನಾಶಕವನ್ನು 10 ಲೀಟರ್ ನೀರಿಗೆ ಬೆರೆಸಿ ಸಿಂಪಡಣೆ ಮಾಡಬೇಕು. ಬಿತ್ತನೆ ಪೂರ್ವದಲ್ಲಿ ರೈಜೋಬಿಯಂ ಮತ್ತು ಟ್ರೈಕೋಡರ್ವ ಜೈವಿಕ ಶಿಲೀಂದ್ರದಿಂದ ಬೀಜೋಪಚಾರ ಮಾಡಬೇಕು. ಈ ಲೇಪನಗಳು ರಕ್ಷಣಾ ಕವಚದಂತೆ ಕೆಲಸ ಮಾಡಿ ಬೀಜಗಳ ಮೊಳಕೆಯೊಡೆಯವ ಪ್ರಮಾಣ ಮತ್ತು ಬೆಳವಣಿಗೆಯನ್ನು ಉತ್ತೇಜಿಸುತ್ತವೆ. ರೋಗ ನಿರೋಧಕ ಶಕ್ತಿ ಹೆಚ್ಚಿಸಿ ಬೇಕಾದ ಪೋಷಕಾಂಶಗಳನ್ನು ಕಲ್ಪಿಸುತ್ತದೆ. ರೈತರು ಬಿತ್ತನೆ ಪೂರ್ವದಲ್ಲಿ ಬೀಜೋಪಚಾರ ಮಾಡುವುದರಿಂದ ಬೇರು ಕೊಳೆ (ಸಿಡಿ) ರೋಗಬಾಧೆ ತಡೆಗಟ್ಟಬಹುದು. ಅಲ್ಲದೆ, ಮುಖ್ಯವಾಗಿ ಬೇಸಿಗೆ ವೇಳೆ ಹದವರ್ತಿ ಉಳುಮೆ ಮಾಡಬೇಕು, ಮಣ್ಣನ್ನು ಪರೀಕ್ಷೆಗೊಳಪಡಿಸಿ ಅಗತ್ಯ ಪೋಷಕಾಂಶ ಕಲ್ಪಿಸಬೇಕು ಮತ್ತು ಬೆಳೆ ಬದಲಾವಣೆ ಕ್ರಮ ಕೈಗೊಳ್ಳಬೇಕು ಎಂದು ಧಾರವಾಡ ಕೃಷಿ ವಿವಿ ಸಸ್ಯರೋಗ ಶಾಸ್ತ್ರ ವಿಭಾಗದ ಡಾ. ಎಂ.ಆರ್. ರವಿಕುಮಾರ ಸಲಹೆ ನೀಡಿದ್ದಾರೆ.