ವಿಜಯಪುರದ ಚೇತನಾ ಕಾಲೇಜಿನಲ್ಲಿ ಭಾನುವಾರ ಜರುಗಲಿರುವ ಕನ್ನಡ ಪುಸ್ತಕ ಪರಿಷತ್ತು ಸಮ್ಮೇಳನ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಡಾ.ಪ್ರಕಾಶ ಖಾಡೆ ಅವರು ದೇಸಿ ಚಿಂತನೆಯ ಸಾಹಿತಿ.
ಬಾಗಲಕೋಟೆಯಲ್ಲಿ ಅಧ್ಯಾಪಕರಾಗಿರುವ ಡಾ.ಪ್ರಕಾಶ ಗಣಪತಿ ಖಾಡೆ ಅವರು ಜಮಖಂಡಿ ತಾಲೂಕಿನ ತೊದಲಬಾಗಿ ಗ್ರಾಮದಲ್ಲಿ 1965 ಜೂ.10ರಂದು ಜನಿಸಿದರು. ಪ್ರಾಥಮಿಕ ಶಿಕ್ಷಣವನ್ನು ಹುಟ್ಟೂರು ತೊದಲಬಾಗಿಯಲ್ಲಿ, ಪ್ರೌಢ ಶಿಕ್ಷಣವನ್ನು ಬಾದಾಮಿ ತಾಲೂಕಿನ ಕೆರೂರು, ಬಿಎ ಕನ್ನಡ ಪದವಿ ಶಿಕ್ಷಣವನ್ನು ಇಳಕಲ್ಲು, ಎಂಎ ಕನ್ನಡ ಪದವಿಯನ್ನು ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡದಲ್ಲಿ ಪೂರೈಸಿದರು.
ಮುಂದೆ ನವೋದಯ ಕಾವ್ಯದ ಮೇಲೆ ಜಾನಪದದ ಪ್ರಭಾವ ವಿಷಯದ ಮೇಲೆ ಪ್ರೊ.ಎ.ವಿ. ನಾವಡ ಅವರ ಮಾರ್ಗದರ್ಶನದಲ್ಲಿ ಸಂಶೋಧನಾ ಮಹಾ ಪ್ರಬಂಧ ಮಂಡಿಸಿ 2005 ರಲ್ಲಿ ಹಂಪಿಯ ಕನ್ನಡ ವಿಶ್ವವಿದ್ಯಾಲಯಕ್ಕೆ ಸಲ್ಲಿಸಿ ಡಾಕ್ಟರೇಟ್ ಪದವಿಗೆ ಭಾಜನರಾದರು. ಈ ವರೆಗೆ ಕಾವ್ಯ, ಕಥೆ, ನಾಟಕ, ಜೀವನ ಚರಿತ್ರೆ, ಸಂಶೋಧನೆ, ಸಂಪಾದನೆ, ಜಾನಪದ ಹಾಗೂ ವಿಮರ್ಶೆಗಳು ಸೇರಿದಂತೆ 51 ಕೃತಿಗಳನ್ನು ಪ್ರಕಟಿಸಿದ್ದಾರೆ. ಪ್ರೀತಿ ಬಟ್ಟಲು, ಕೃಷ್ಣಾ ತೀರದ ಜನಪದ ಒಗಟುಗಳು, ನೆಲಮೂಲ ಸಂಸ್ಕೃತಿ, ಜಾನಪದ ಲೋಕ, ಜನಪದ ಕೋಗಿಲೆ ಚಲವಾದಿ ಗೌರಮ್ಮ, ಮೌನ ಓದಿನ ಬೆಡಗು, ಜಾನಪದ ಹೆಬ್ಬಾಗಿಲು, ಸಾಹಿತ್ಯ ಸಂಗತಿ, ನವೋದಯ ಕಾವ್ಯದ ಮೇಲೆ ಜಾನಪದದ ಪ್ರಭಾವ, ಕಣ್ಣುಗಳಿಗೆ ಮೌನ ಅರ್ಥವಾಗುತ್ತದೆ. ಶಾಂತಿ ಬೀಜಗಳ ಜತನ, ಕೊರೊನಾ ಕಾಲದ ಕವಿತೆಗಳು, ಕಾವ್ಯ ನಾದದ ಧ್ಯಾನ, ಬಾಗಲಕೋಟೆ ಹೋಳಿ, ಬಾದಾಮಿ ಸ್ವಾತಂತ್ರ್ಯ ಹೋರಾಟ, ಹಲಸಂಗಿ ಸಾಹಿತ್ಯದ ದೇಸಿಯತೆ, ಚೆಲುವಿ ಚಂದ್ರಿ, ಬಾಳುಕುನ ಪುರಾಣ ಕಥಾ ಸಂಕಲನಗಳು ಮುಂತಾದವು ಇವರ ಪ್ರಕಟಿತ ಕೃತಿಗಳು.
ಕನ್ನಡ ಸಾಹಿತ್ಯ ಪರಿಷತ್ತಿನ ಮುದ್ದಣ ಕಾವ್ಯ ಪ್ರಶಸ್ತಿ, ಬೇಂದ್ರೆ ಸಾಹಿತ್ಯ ಪ್ರಶಸ್ತಿ, ಹುಬ್ಬಳ್ಳಿಯ ಬೊಮ್ಮಾಯಿ ಪ್ರತಿಷ್ಠಾನ ಪ್ರಶಸ್ತಿ, ಆಜೂರ ಪ್ರತಿಷ್ಠಾನ ಪ್ರಶಸ್ತಿ, ಮುಂಬಯಿಯ ಮೊಗವೀರ ಕಥಾ ಪ್ರಶಸ್ತಿ, ಬೆಳಗಾವಿಯ ಮುಚಳಂಬಿ ಕಥಾ ಪ್ರಶಸ್ತಿ, ಹರಿಹರದ ಹರಿಹರಶ್ರೀ ಪ್ರಶಸ್ತಿ, ಬೀಳಗಿ, ಸಮೀರವಾಡಿ, ಅರಕೇರಿ ಕನ್ನಡ ಸಾಹಿತ್ಯ ಪರಿಷತ್ತು ದತ್ತಿ ಪ್ರಶಸ್ತಿ, ವಿಜಯಪುರದ ಕನ್ನಡ ಪುಸ್ತಕ ಪರಿಷತ್ತಿನ ಸಮಗ್ರ ಸಾಹಿತ್ಯ ಪ್ರಶಸ್ತಿ ಹಾಗೂ ಸಂಕ್ರಮಣ ಸಾಹಿತ್ಯ ಪ್ರಶಸ್ತಿಗಳಿಗೆ ಪಾತ್ರರಾಗಿದ್ದಾರೆ.
ಇವರ ಲೇಖನಗಳು ಬೆಳಗಾವಿಯ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯ, ವಿಜಯಪುರದ ಮಹಿಳಾ ವಿಶ್ವ ವಿದ್ಯಾಲಯ ಹಾಗೂ ಬಳ್ಳಾರಿಯ ವಿಜಯನಗರದ ಶ್ರೀಕೃಷ್ಣದೇವರಾಯ ವಿಶ್ವ ವಿದ್ಯಾಲಯಗಳ ಪದವಿ ತರಗತಿ ವಿದ್ಯಾರ್ಥಿಗಳಿಗೆ ಪಠ್ಯಗಳಾಗಿವೆ. ಕರೋನಾ ಕಾಲ ಘಟ್ಟದ ಲಾಕ್ ಡೌನ್ ವೇಳೆಯಲ್ಲಿ ಪ್ರತಿ ದಿವಸ ಮನೆಯಲ್ಲಿದ್ದುಕೊಂಡೆ ದೇಸಿ:ಕನ್ನಡದ ಅನನ್ಯತೆ ಹೆಸರಿನಲ್ಲಿ ಸಾಮಾಜಿಕ ಜಾಲತಾಣದಲ್ಲಿ ಐವತ್ತಕ್ಕೂ ಹೆಚ್ಚು ಉಪನ್ಯಾಸಗಳನ್ನು ನೀಡಿದ್ದಾರೆ. ಬೆಳಕಾಯಿತು ಬಾಗಲಕೋಟೆ’ ಹೆಸರಿನಲ್ಲಿ ಫೇಸ್‌ಬುಕ್ ಲೈವ್‌ನಲ್ಲಿ ನಾಡಿನ ವಿದ್ವಾಂಸರಿಂದ ಅವಿಭಜಿತ ವಿಜಯಪುರ, ಬಾಗಲಕೋಟೆ ಜಿಲ್ಲೆಯ ಸಾಧಕರನ್ನು ಕುರಿತು ಸರಣಿ ಉಪನ್ಯಾಸಗಳನ್ನು ಏರ್ಪಡಿಸಿಕೊಂಡು ಬಂದಿದ್ದಾರೆ. 140 ಕ್ಕೂ ಹೆಚ್ಚು ಉಪನ್ಯಾಸಗಳು ಪ್ರಸಾರವಾಗಿವೆ. ಇವರ ಕೂಡಿ ಕಟ್ಟಿದ ಕನ್ನಡ, ಒಲುಮೆ ಹಾಡಿಗೆ ಗೀತೆಗಳು, ಯುಟ್ಯೂಬ್ ಮೂಲಕ ಜಗದೆಲ್ಲೆಡೆ ಜನಪ್ರಿಯವಾಗಿವೆ. 2023 ಜೂನದಲ್ಲಿ ಜರುಗಿದ್ದ ರಾಜ್ಯ ಮಟ್ಟದ ಮೇಘಮೈತ್ರಿ ಕನ್ನಡ ಸಾಹಿತ್ಯ ಸಮ್ಮೇಳನ, 2024 ಡಿಸೆಂಬರ್ 1 ರಂದು ವಿಜಯಪುರದಲ್ಲಿ ಜರುಗುತ್ತಿರುವ ಕನ್ನಡ ಪುಸ್ತಕ ಪರಿಷತ್ತು ಸಮ್ಮೇಳನದ ಸಮ್ಮೇಳನಾಧ್ಯಕ್ಷರಾಗಿದ್ದಾರೆ.
ಶ್ರೀಯುತ ಖಾಡೆ ಅವರು ಸಾಹಿತ್ಯದ ಎಲ್ಲಾ ಪ್ರಕಾರಗಳಲ್ಲಿ ಕೃಷಿ ಮಾಡಿದವರು. ಅಷ್ಟೇ ಅಲ್ಲ ಸಾಹಿತ್ಯದ ಪರಿಚಾರಿಕೆ ಹಾಗೂ ಸಂಘಟನೆಯಲ್ಲಿ ಬಹಳ ಆಳವಾಗಿ ತೊಡಗಿಸಿಕೊಂಡವರು. ಉತ್ತರ ಕರ್ನಾಟಕದ ಪ್ರಮುಖ ಸಾಹಿತಿಗಳಲಿ ಒಬ್ಬರಾಗಿರುವ ಖಾಡೆ ಅವರ ಸಾಹಿತ್ಯದ ಜೀವಾಳ ದೇಸಿತನವಾಗಿದೆ. ಕಳೆದ ನಾಲ್ಕು ದಶಕಗಳಿಂದ ಸಾಹಿತ್ಯದ ಕೃಷಿ ಮಾಡುತ್ತಾ ಪ್ರತಿ ಸಲವೂ ಹೊಸತನವನ್ನು ಕೊಡುವ ಹುಮ್ಮಸ್ಸಿನ ಬರಹಗಾರ ರಾಗಿದ್ದಾರೆ. ಪ್ರತಿ ಸಾಹಿತ್ಯದ ಹೊಸತನ ಹುಡುಕುವ ಸೂಕ್ಷ್ಮತೆ ಅವರ ಬರಹಗಳಲ್ಲಿ ಕಾಣುತ್ತೇವೆ. ಇತ್ತೀಚೆಗೆ ಲೋಕರ್ಪಣೆಗೊಂಡ ಅವರ ಬಾಳುಕನ ಪುರಾಣ ಎಂಬ ಕಥಾ ಸಂಕಲನ ಸೃಷ್ಟಿಸಿದ ಗ್ರಾಮ ಬದುಕಿನಲ್ಲಿ ಜರಗುವ ವಿಶಿಷ್ಟ ವ್ಯಂಗ್ಯ ವಿಡಂಬನೆ ಅವರ ಕಥೆಗಳಲ್ಲಿವೆ ಎಂಬುದು ಬಹಳ ಜನ ಸಾಹಿತಿಗಳ ಅಭಿಪ್ರಾಯವಾಗಿದೆ. ಅವಳಿ ಜಿಲ್ಲೆಯ ಪ್ರತಿನಿಧಿಯಂತಿರುವ ಡಾ. ಪ್ರಕಾಶ ಖಾಡೆ ಅವರು ಪುಸ್ತಕ ಪರಿಷತ್ತು ಸಮ್ಮೇಳನ ಸರ್ವಾಧ್ಯಕ್ಷರಾಗಿದ್ದು ಸಂತಸದ ವಿಚಾರವಾಗಿದೆ.
ಲೇಖಕರು: ಚಿದಂಬರ ಬಂಡಗರ, ಸಾಹಿತಿ