ಮಾಂಜರಿ: ಕ್ರೀಡಾ ಚಟುವಟಿಕೆಗಳಲ್ಲಿ ಭಾಗವಹಿಸುವುದರಿಂದ ಕೆಲಸದಲ್ಲಿ ಲವಲವಿಕೆ ಮತ್ತು ಉತ್ತಮ ಆರೋಗ್ಯ ಪಡೆಯಲು ಸಾಧ್ಯ ಎಂದು ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷ ಡಾ.ಪ್ರಭಾಕರ ಕೋರೆ ಹುಟ್ಟು ಹಬ್ಬ ಆಚರಣೆ ಸಮಿತಿ ಅಧ್ಯಕ್ಷ ಹಾಗೂ ಕೆಎಲ್‌ಇ ಶಿಕ್ಷಣ ಸಂಸ್ಥೆಯ ನಿರ್ದೇಶಕ ಬಿ.ಆರ್.ಪಾಟೀಲ ಹೇಳಿದರು.
ಸಮೀಪದ ಅಂಕಲಿ ಗ್ರಾಮದಲ್ಲಿರುವ ಕೆಎಲ್‌ಇ ಶಿಕ್ಷಣ ಸಂಸ್ಥೆಯ ಶಾರದಾದೇವಿ ಕೋರೆ ಮಹಾವಿದ್ಯಾಲಯದ ಕ್ರೀಡಾಂಗಣದಲ್ಲಿ ಡಾ.ಪ್ರಭಾಕರ ಕೋರೆ ಅವರ 76ನೇ ಹುಟ್ಟುಹಬ್ಬದ ಅಂಗವಾಗಿ ಚಿದಾನಂದ ಕೋರೆ ಸಹಕಾರಿ ಸಕ್ಕರೆ ಕಾರ್ಖಾನೆ ಚಿಕ್ಕೋಡಿ, ಡಾ.ಪ್ರಭಾಕರ್ ಕೋರೆ ಕೋ ಆಪ್ ಕ್ರೆಡಿಟ್ ಸೊಸೈಟಿ ಅಂಕಲಿ, ಶಿವಶಕ್ತಿ ಶುಗರ್ ಲಿಮಿಟೆಡ್ ಬಾವನಸೌಂದತ್ತಿ, ಹಾರ್ಸ್ ಡಿಸ್ಟಿಲರಿ ಯಡ್ರಾವ್ ಹಾಗೂ ಕೆಎಲ್‌ಇ ಶಿಕ್ಷಣ ಸಂಸ್ಥೆಯ ಅಂಗ ಸಂಸ್ಥೆಗಳ ಆಶ್ರಯದಲ್ಲಿ ಆಯೋಜಿಸಿರುವ ಎರಡು ದಿನಗಳ ಕ್ರೀಡಾಕೂಟವನ್ನು ಶುಕ್ರವಾರ ಉದ್ಘಾಟಿಸಿ ಮಾತನಾಡಿದರು.
ದೇಶೀಯ ಕ್ರೀಡೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಪ್ರೋತ್ಸಾಹಿಸಿ ಬೆಳೆಸಲು ಕೆಎಎಲ್‌ಇ ಶಿಕ್ಷಣ ಸಂಸ್ಥೆ ಆದ್ಯತೆ ನೀಡುತ್ತಿದೆ. ವಿದ್ಯಾರ್ಥಿ ಮತ್ತು ನೌಕರರ ಕ್ರೀಡಾ ಚಟುವಟಿಕೆಗಳಿಗೆ ಆದ್ಯತೆ ನೀಡಲಾಗಿದೆ. ಅವಕಾಶವನ್ನು ವಿದ್ಯಾರ್ಥಿ ಮತ್ತು ನೌಕರರು ಸದುಪಯೋಗಪಡಿಸಿಕೊಳ್ಳಬೇಕು ಎಂದರು.
ಚಿದಾನಂದ ಕೋರೆ ಸಹಕಾರಿ ಸಕ್ಕರೆ ಕಾರ್ಖಾನೆ ನಿರ್ದೇಶಕ ಭರತೇಶ್ ಬನವನೆ ಮಾತನಾಡಿ, ಒತ್ತಡದ ಕೆಲಸಗಳ ಮಧ್ಯೆಯೂ ಉಲ್ಲಾಸದಿಂದ ಇರಲು ವಿದ್ಯಾರ್ಥಿ ಮತ್ತು ನೌಕರರಿಗೆ ಕ್ರೀಡೆ, ಸಾಂಸ್ಕೃತಿಕ ಕಾರ್ಯಕ್ರಮಗಳು ಸಹಾಯಕವಾಗುತ್ತವೆ. ಅದಕ್ಕಾಗಿ ಪ್ರತಿವಷರ್ರ್ ಕೆಎಲ್‌ಇ ಶಿಕ್ಷಣ ಸಂಸ್ಥೆಯ ಕಾರ್ಯಾಧ್ಯಕ್ಷ ಡಾ.ಪ್ರಭಾಕರ್ ಕೋರೆ ಹುಟ್ಟುಹಬ್ಬದ ಅಂಗವಾಗಿ ಕ್ರೀಡಾಕೂಟ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಸಂಘಟಿಸಲಾಗುತ್ತದೆ ಎಂದರು.
ಮಲ್ಲಪ್ಪ ಮಹಿಶಾಳೆ, ಸಿದ್ಧಗೌಡ ಮಗದುಮ, ಸುರೇಶ ಪಾಟೀಲ, ಪಿಂಟು ಹಿರೇಕುರುಬರ್, ಅನಿಲ ಪಾಟೀಲ, ಅಶೋಕ ಚೌಗುಲಾ ಹಾಗೂ ಡಾ.ಪ್ರಭಾಕರ ಕೋರೆ ಹುಟ್ಟುಹಬ್ಬ ಸಮಿತಿ ಸದಸ್ಯರು, ಕೆಎಲ್‌ಇ ಶಿಕ್ಷಣ ಸಂಸ್ಥೆಯ ಬೋಧಕ ಸಿಬ್ಬಂದಿ ಹಾಗೂ ಗ್ರಾಮಸ್ಥರು ಇದ್ದರು. ಸಂಸ್ಥೆಯ ಅಜೀವ ಸದಸ್ಯ ಬಿ.ಎಸ್.ಅಂಬಿ ಸ್ವಾಗತಿಸಿ, ವಂದಿಸಿದರು.