ಜಿಲ್ಲೆ

ದೇಶಪಾಂಡೆ ಸ್ಟಾರ್ಟಪ್ಸ್ ಡೈಲಾಗ್ ಫೆ. 8ರಂದು

Dharwada - Basavaraj Idli

ಹುಬ್ಬಳ್ಳಿ: ಉದ್ಯಮಶೀಲತೆ ಬಲಪಡಿಸುವುದು ಹಾಗೂ ಭಾರತದಲ್ಲಿ ಭವಿಷ್ಯದ ಸ್ಟಾರ್ಟಪ್ಸ್ ಗೆ ಅತ್ಯುತ್ತಮ ವಾತಾವರಣ ನಿರ್ಮಾಣ ಮಾಡುವ ಉದ್ದೇಶದಿಂದ ಫೆ. 8ರಂದು ನಗರದ ಗೋಕುಲ ರಸ್ತೆಯಲ್ಲಿರುವ ದೇಶಪಾಂಡೆ ಸ್ಟಾರ್ಟಪ್ಸ್ ವತಿಯಿಂದ ಸ್ಟಾರ್ಟಪ್ ಡೈಲಾಗ್ (ಸ್ಟಾರ್ಟಪ್ ಸಂವಾದ) ಏರ್ಪಡಿಸಲಾಗಿದೆ.

ಬಿಲ್ಡಿಂಗ್ ಎ ಫೌಂಡರ್- ಫರ್ಸ್ಟ ಎಕೋಸಿಸ್ಟ್ಂ ಫಾರ್ ಭಾರತ' ಈ ವಿಷಯ ಕುರಿತು ಈ ವರ್ಷದ ಅಭಿವೃದ್ಧಿ ಸಂವಾದವನ್ನು ನಡೆಸಲಾಗುತ್ತಿದೆ. ಉದ್ಯಮಿಗಳು, ಹೂಡಿಕೆದಾರರು, ಖಾಸಗಿ ಕಂಪನಿಗಳು, ನೀತಿ ನಿರ್ಧಾರ ಕೈಗೊಳ್ಳುವ ಪ್ರಮುಖರು, ಶೈಕ್ಷಣಿಕ ತಜ್ಞರು ಸೇರಿದಂತೆ ಔದ್ಯಮಿಕ ಬೆಳವಣಿಗೆಯ ಭಾಗವಾದ ಎಲ್ಲರನ್ನೂ ಒಂದೇ ವೇದಿಕೆಗೆ ತರಲಾಗುತ್ತಿದೆ.

ನಗರ ಹಾಗೂ ಗ್ರಾಮೀಣ ಮಾರುಕಟ್ಟೆಗಳನ್ನು ಆಧರಿಸಿ ಸ್ಟಾರ್ಟಪ್ ಗಳು ಬರಬೇಕೆಂಬ ಉದ್ದೇಶದಿಂದ ಹಲವು ವಿಶೇಷ ಕಾರ್ಯಕ್ರಮಗಳನ್ನು ಈ ಬಾರಿ ಜೋಡಿಸಿಕೊಳ್ಳಲಾಗಿದೆ.
ಉದ್ಯಮ ವಲಯದ ಪರಿಣಿತರು, ನವೋದ್ಯಮಿಗಳ ಮಧ್ಯೆ ಅರ್ಥಪೂರ್ಣ ಮಾತುಕತೆ ನಡೆಯಬೇಕು. ಆ ಮೂಲಕ ಉದ್ಯಮಶೀಲತೆ ಬೆಳೆಸುವ ಪ್ರಮುಖ ಉದ್ದೇಶ ಹೊಂದಲಾಗಿದೆ. ಪರಸ್ಪರ ಜ್ಞಾನ ವಿನಿಮಯ, ಕಾರ್ಯರೂಪಕ್ಕೆ ತರಬಹುದಾದ ಸಂರಚನೆ, ಮಾರ್ಗದರ್ಶನವನ್ನು ನೀಡುವ ಕಾರ್ಯಕ್ರಮಗಳು ನಡೆಯಲಿದೆ.

ಹುಬ್ಬಳ್ಳಿ ಹಡಲ್:
ವಿಶೇಷವಾಗಿ ಈ ಬಾರಿ ಹುಬ್ಬಳ್ಳಿ ಹಡಲ್ ಎಂಬ ಕಾರ್ಯಕ್ರಮದ ಮೂಲಕ ದಿಗ್ಗಜರು ಹಾಗೂ ಉದ್ಯಮಕ್ಕೆ ಕಾಲಿಡುವ ಹೊಸಬರ ಮಧ್ಯೆ ಗಹನ ಚರ್ಚೆಗೆ ಅವಕಾಶ ಮಾಡಿಕೊಡಲಾಗುತ್ತಿದೆ. ಇದು ಹೊಸ ತರಹದ ಪ್ಯಾನಲ್ ಆಗಿದ್ದು, 25 ಜನ ಇಲ್ಲಿರುತ್ತಾರೆ. ಎರಡು ಸರ್ಕಲ್ ಗಳನ್ನು ಮಾಡಿ ಒಳಗಡೆ ವಿಷಯ ತಜ್ಞರು (ಸ್ಪೀಕರ್ಸ್), ಹೊರಗಡೆ ಪ್ರೇಕ್ಷಕರು ಇರುತ್ತಾರೆ.

ಒಳಗಡೆ ಇರುವ 10 ಜನರಲ್ಲಿ ಐವರು ಲೆಜೆಂಡ್ಸ್ ಆಗಿದ್ದರೆ, ಉಳಿದ ಐವರನ್ನು ಪ್ರೇಕ್ಷಕರಿಂದ (ನವೋದ್ಯಮಿಗಳು) ಆಯ್ಕೆ ಮಾಡಲಾಗಿರುತ್ತದೆ. ಹೊರಗಿನ ಸರ್ಕಲ್ ನಲ್ಲಿ 15 ಜನ ಪ್ರೇಕ್ಷಕರು ಇರುತ್ತಾರೆ. ಹೊಸ ಕಂಪನಿ ಕಟ್ಟುವವರಿಗೆ ಈ ಕಾರ್ಯಕ್ರಮ ಬಹಳಷ್ಟು ಅನುಕೂಲವಾಗಲಿದೆ ಎಂದು ಸಂಸ್ಥೆಯ ವರದ್ ಕುಲಕರ್ಣಿ ತಿಳಿಸಿದ್ದಾರೆ.

ಉದ್ಯಮದ ಸವಾಲುಗಳು ಹಾಗೂ ಅವಕಾಶಗಳು, ಪರಿಹಾರಗಳು, ರಚನಾತ್ಮಕ ಪಾಲುದಾರಿಕೆ, ಜ್ಞಾನ ವಿನಿಮಯಕ್ಕೆ ಉತ್ತೇಜನ ನೀಡುವುದು, ದಿಗ್ಗಜರ ಪ್ರಧಾನ ಭಾಷಣ, ಪ್ಯಾನಲ್ ಡಿಸ್ಕಷನ್, ಕಾರ್ಯಾಗಾರಗಳು, ನೆಟ್ವರ್ಕಿಂಗ್, ಚಾಯ್ ಪೇ ಚರ್ಚಾ ಹೀಗೆ ತರಹೇವಾರಿ ಕಾರ್ಯಕ್ರಮಗಳು ಈ ವರ್ಷದ ಅಭಿವೃದ್ಧಿ ಸಂವಾದದ ವಿಶೇಷತೆಗಳಾಗಿವೆ.