ಜಿಲ್ಲೆ

ದೇಶದ್ರೋಹಿಗಳಿಗೆ ತಕ್ಕ ಶಿಕ್ಷೆಯಾಗಲಿ,ಅಖಿಲ ಭಾರತ ವಿದ್ಯಾರ್ಥಿ ಪರಿಷತ್‌ನ ತಾಲೂಕು ಸಮಿತಿ ಕಾರ್ಯಕರ್ತರ ಪ್ರತಿಭಟನೆ

Bengaluru Rural

ನೆಲಮಂಗಲ: ಬೆಂಗಳೂರಿನ ಸಮಾವೇಶವೊಂದರಲ್ಲಿ ಪಾಕಿಸ್ತಾನದ ಪರವಾಗಿ ಘೋಷಣೆ ಕೂಗಿದ ಯುವತಿ ಅಮೂಲ್ಯ ಲಿಯೋನಾಳ ವರ್ತನೆ ಖಂಡಿಸಿ ತಾಲೂಕು ಅಖಿಲ ಭಾರತ ವಿದ್ಯಾರ್ಥಿ ಪರಿಷತ್‌ನ ತಾಲೂಕು ಸಮಿತಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ತಾಲೂಕು ಎಬಿವಿಪಿ ಸಂಘಟನೆ ಕಾರ್ಯಕರ್ತರು ಶುಕ್ರವಾರ ಬೆಳಗ್ಗೆ ತಾಲೂಕು ಕಚೇರಿ ಮುಂಭಾಗದಲ್ಲಿ ಸಮಾವೇಶಗೊಂಡು ಯುವತಿ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಪಾಕಿಸಾನದ ಪರ ಜೈಕಾರ ಕೂಗಿ ದೇಶದ್ರೋಹ ಎಸಗಿರುವ ಯುವತಿಯನ್ನು ದೇಶದಿಂದ ಗಡಿಪಾರು ಮಾಡಬೇಕು ಹಾಗೂ ಅವಳ ವಿರುದ್ಧ ಕಠಿಣ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಬೆಂಗಳೂರು ಗ್ರಾಮಾಂತರ ಜಿಲ್ಲಾ ಪ್ರಮುಖ್ ಭರತ್‌ಸೌಂದರ್ಯ ಮಾತನಾಡಿ, ಇಡೀ ರಾಷ್ಟ್ರ ಶಾಂತಿಯಿಂದ ಇರುವಾಗ ಯುವತಿ ದೇಶ ವಿರೋಧಿ ಹೇಳಿಕೆ ನೀಡಿರುವುದು ಅನೇಕ ವಿದ್ಯಾರ್ಥಿ ಸಂಘಟನೆ ಹಾಗೂ ದೇಶಭಕ್ತರು ಬೀದಿಗಿಳಿದು ಪ್ರತಿಭಟನೆ ಮಾಡಬೇಕಾದ ಸನ್ನಿವೇಶ ಉದ್ಭವಿಸಿದೆ ಎಂದರು.

ಕಾರ್ಯಕ್ರಮದ ಆಯೋಜಕರನ್ನು ಹಾಗೂ ಯುವತಿ ಹಿಂದಿರುವ ದೇಶದ್ರೋಹಿ ಸಂಘಟನೆಗಳ ವಿರುದ್ಧ ಸೂಕ್ತವಾದ ಕ್ರಮಕೈಗೊಳ್ಳಬೇಕು. ಇದು ದೇಶವಿರೋಧಿಗಳಿಗೆ ಪಾಠವಾಗಬೇಕು ಎಂದರು.