ನೆಲಮಂಗಲ: ದೇಶದಲ್ಲಿರುವ ಪ್ರತಿಯೊಬ್ಬ ಪ್ರಜೆಗಳ ಸುರಕ್ಷತೆ, ಭದ್ರತೆಗೆ ಕೇಂದ್ರ ಸರ್ಕಾರದ ಪೌರತ್ವ ತಿದ್ದುಪಡಿ ಕಾಯ್ದೆಯಿಂದ ಸಹಕಾರಿಯಾಗಲಿದೆ ಎಂದು ಹಿಂದು ಜಾಗರಣ ವೇದಿಕೆ ಕಾರ್ಯದರ್ಶಿ ಉಲ್ಲಾಸ್ ಅಭಿಪ್ರಾಯಪಟ್ಟರು.
ಪಟ್ಟಣದ ತಾಲೂಕು ಕಚೇರಿಯಲ್ಲಿ ರಾಷ್ಟ್ರ ಹಿತರಕ್ಷಣಾ ಸಮಿತಿ ಹಾಗೂ ವಿವಿಧ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಕೇಂದ್ರ ಸರ್ಕಾರದ ಪೌರತ್ವ ತಿದ್ದುಪಡಿ ಕಾಯ್ದೆ ಬೆಂಬಲಿಸಿ ಶುಕ್ರವಾರ ಆಯೋಜಿಸಿದ್ದ ಜನಜಾಗೃತಿ ಜಾಥಾ ಮತ್ತು ಬಹಿರಂಗಸಭೆಯಲ್ಲಿ ಮಾತನಾಡಿದರು.
ದೇಶ ವಿಭಜನೆ ನಂತರ ಸ್ವಯಂ ಘೋಷಿತ ಇಸ್ಲಾಂ ದೇಶಗಳಲ್ಲಿ ಧಾರ್ಮಿಕ ಕಿರುಕುಳ, ದೌರ್ಜನ್ಯವೆಸಗಿದ ಕಾರಣದಿಂದ ಭಾರತವನ್ನು ಆಶ್ರಯಿಸಿ ಬಂದಿದ್ದ ಮುಸ್ಲಿಮರು ಸೇರಿ ಹಿಂದು, ಕ್ರೈಸ್ತ, ಬೌದ್ಧ, ಜೈನ, ಪಾರ್ಸಿಗಳು ದೇಶದಲ್ಲಿ ನೆಲೆಸಿದ್ದು, 60 ವರ್ಷಗಳಿಂದಲೂ ಪೌರತ್ವ ನೀಡುವಂತೆ ದೇಶವನ್ನಾಳಿದ ಸರ್ಕಾರಗಳನ್ನು ಕೇಳಿಕೊಂಡು ಬಂದಿದ್ದರೂ ಪ್ರಯೋಜನವಾಗಿಲ್ಲ. ಎಲ್ಲರಿಗೂ ಪೌರತ್ವ ನೀಡುವ ಉದ್ದೇಶದಿಂದ ಪೌರತ್ವ ಕಾಯ್ದೆ ತಿದ್ದುಪಡಿ ತರಲಾಗಿದೆ ಎಂದು ತಿಳಿಸಿದರು.
ಜಮ್ಮುಕಾಶ್ಮೀರ ರಾಜ್ಯಗಳಲ್ಲಿ ಅಕ್ರಮವಾಗಿ ನುಸುಳಿರುವ ಬಾಂಗ್ಲಾ ದೇಶಿಯರನ್ನು ಹೊರಹಾಕಲು ಎನ್‌ಆರ್‌ಸಿ ಕಾಯ್ದೆ ಜಾರಿಗೆ ತರುವ ಪಯತ್ನ ಕೇಂದ್ರ ಸರ್ಕಾರ ಮಾಡುತ್ತಿದೆ. ಇಂತಹ ಸನ್ನಿವೇಶದಲ್ಲಿ ಕೆಲ ರಾಜಕೀಯ ಪಕ್ಷಗಳು ದೇಶದಲ್ಲಿ ಅಲ್ಪಸಂಖ್ಯಾತರೆಂದು ಕರೆಸಿಕೊಳ್ಳುತ್ತಿರುವ ಮುಸ್ಲಿಂ, ಕ್ರೈಸ್ತರ ಪೌರತ್ವ ಕಸಿದುಕೊಳ್ಳಲಾಗುತ್ತಿದೆ ಎಂಬ ಸುಳ್ಳುಸುದ್ದಿ ಹರಡಿಸಿ ದೇಶವನ್ನು ಅರಾಜಕತೆ ಅಭದ್ರತೆಗೆ ಎಡೆಮಾಡಿಕೊಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕೇಂದ್ರ ಸರ್ಕಾರ ಅಭದ್ರಗೊಳಿಸುವ ಷಡ್ಯಂತ್ರದ ವಿರುದ್ಧ ಹೋರಾಟ ಮಾಡಬೇಕಿದೆ. ದೇಶದ ಕಾನೂನು ಮತ್ತು ಶಾಂತಿ ಸುವ್ಯವಸ್ಥೆಗೆ ಭಂಗ ತರುತ್ತಿರುವ ಅಕ್ರಮ ವಲಸಿಗರನ್ನು ದೇಶ ಬಿಟ್ಟು ಹೊಸಬೇಕಾಗಿದೆ ಎಂದು ಬಿಜೆಪಿ ರಾಜ್ಯ ವಕ್ತಾರ ಪ್ರಕಾಶ್ ತಿಳಿಸಿದರು.
ಜನಜಾಗೃತಿ ಜಾಥಾ: ಬಹಿರಂಗ ಸಭೆಗೂ ಮುನ್ನ ಪಟ್ಟಣ ವೀವರ್ಸ್ ಕಾಲನಿ ಚೌಡೇಶ್ವರಿ ದೇವಾಲಯದಿಂದ ತಾಲೂಕು ಕಚೇರಿವರೆಗಿನ ಮುಖ್ಯರಸ್ಯೆಯಲ್ಲಿ ನೂರಾರು ಸಂಖ್ಯೆಯ ಬಿಜೆಪಿ ಕಾರ್ಯಕರ್ತರು, ವಿವಿಧ ಸಂಘ ಸಂಸ್ಥೆಗಳ ಸದಸ್ಯರು ಭಾರತ ಧ್ವಜವನ್ನು ಹಿಡಿದು ಮುಖ್ಯರಸ್ತೆಯಲ್ಲಿ ಜನಜಾಗೃತಿಜಾಥಾ ನಡೆಸಿದರು.
ಮಾಜಿ ಶಾಸಕ ಎಂ.ವಿ.ನಾಗರಾಜು, ನೆ.ಯೋ.ಪ್ರಾಧಿಕಾರದ ಅಧ್ಯಕ್ಷ ಎಸ್.ಮಲ್ಲಯ್ಯ, ಜಿಪಂ ಸದಸ್ಯ ನಂಜುಂಡಯ್ಯ, ಪುರಸಭೆ ಸದಸ್ಯ ಎನ್.ಗಣೇಶ್, ಎನ್.ಎಸ್.ಪೂರ್ಣಿಮಾ, ಬಿಜೆಪಿ ಎಸ್ಸಿ ಮೋರ್ಚಾ ಜಿಲ್ಲಾಧ್ಯಕ್ಷ ಹೊಂಬಯ್ಯ, ಜಿಲ್ಲಾ ಪ್ರದಾನಕಾರ್ಯದರ್ಶಿ ರಾಮಕೃಷ್ಣಪ್ಪ, ಬಿಜೆಪಿ ತಾಲೂಕು ಅಧ್ಯಕ್ಷ ಹೇಮಂತ್, ಪ್ರ.ಕಾರ್ಯದರ್ಶಿ ರವಿ, ಉಪಾಧ್ಯಕ್ಷ ಮಂಜುನಾಥ್, ಯುವಮೋರ್ಚಾ ಅಧ್ಯಕ್ಷ ಕೆ.ಪಿ.ಬೃಂಗೀಶ್, ಉಪಾಧ್ಯಕ್ಷ ವಸಂತ್, ಮುಖಂಡರಾದ ಸುಬ್ರರಾಯಪ್ಪ, ನಾಗರಾಜು, ಕೆ.ಪಿ.ಆನಂದ್, ತೀಥೇಶ್, ರಾಜಮ್ಮ, ಸೌಮ್ಯಾ, ಎನ್.ಸತೀಶ್, ಸೌಭಾಗ್ಯಮ್ಮ, ಆಂಜಿನಮೂರ್ತಿ, ಎಂ.ಎನ್.ರಾಮು, ಜಿ.ವಿ.ಕುಮಾರ್, ಎಚ್.ಬೈಲಪ್ಪ, ಪುನೀತ್ ಮತ್ತಿತರರಿದ್ದರು.