ಜಿಲ್ಲೆ

ಕಾವ್ಯಗಳಲ್ಲಿ ಕನ್ನಡ ನಾಡಿನ ಸಿರಿ-ಸಂಪತ್ತಿನ ವರ್ಣನೆ

ಮೈಸೂರು: ನಗರದ ರಾಮಕೃಷ್ಣ ವಿದ್ಯಾಕೇಂದ್ರ ಹಾಗೂ ಸಂಯಕ್ತ ಪದವಿಪೂರ್ವ ಕಾಲೇಜಿನಲ್ಲಿ 70ನೇ ಕನ್ನಡ ರಾಜ್ಯೋತ್ಸವ ಆಚರಿಸಲಾಯಿತು.

ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಅಧ್ಯಯನ ಕೇಂದ್ರಗಳ ಡೀನ್ ಡಾ.ಎನ್.ಆರ್.ಚಂದ್ರೇಗೌಡ ಮಾತನಾಡಿ, ಕರ್ನಾಟಕ ಏಕೀಕರಣದ ಇತಿಹಾಸವನ್ನು ಬಿಚ್ಚಿಡುತ್ತಾ ಬ್ರಿಟಿಷರ ಆಡಳಿತದಲ್ಲಿ ಕನ್ನಡನಾಡು ಪ್ರಾಕೃತಿಕವಾಗಿ ಮತ್ತು ಭೌಗೋಳಿಕವಾಗಿ ಕೇರಳ, ಚೆನ್ನೈ, ಆಂಧ್ರ ಮತ್ತು ಮಹಾರಾಷ್ಟ್ರದ ವಿವಿಧ ಭಾಗದಲ್ಲಿ ಸೇರಿಕೊಂಡಿತ್ತು ಎಂದು ಹೇಳಿದರು.

ನಂತರ ಛಿದ್ರಗೊಂಡ ನಾಡನ್ನು 1956 ನವೆಂಬರ್ ಒಂದರಂದು ಏಕೀಕರಣಗೊಳಿಸಿ ‘ಮೈಸೂರು ರಾಜ್ಯ’ ಎಂದು ಹೆಸರಿಸಲಾಯಿತು. 1973ರಲ್ಲಿ ‘ಕರ್ನಾಟಕ’ ಎಂದು ಮರು ನಾಮಕರಣಗೊಂಡಿದ್ದೂ ಒಂದು ಇತಿಹಾಸ ಎಂದರು.

ಕನ್ನಡ ನಾಡಿನ ಸಿರಿ-ಸಂಪತ್ತಿನ ಬಗ್ಗೆ ಕನ್ನಡದ ಶ್ರೇಷ್ಠ ಕವಿಗಳಾದ ರನ್ನ, ಪಂಪ, ಕುಮಾರವ್ಯಾಸ, ಕುವೆಂಪು ತಮ್ಮ ಕಾವ್ಯದಲ್ಲಿ ವರ್ಣಿಸಿದ್ದಾರೆ. ಇಂತಹ ಶ್ರೇಷ್ಠ ಇತಿಹಾಸವಿರುವ ಭಾಷೆಯು ಇಂದು ಪರಭಾಷೆಯ ಪ್ರಭಾವಕ್ಕೊಳಗಾಗಿ ತನ್ನ ಮಹತ್ವವನ್ನು ಕಳೆದುಕೊಳ್ಳುತ್ತಿದೆ. ಕನ್ನಡವಾಹಿನಿಗಳಲ್ಲಿ ಕನ್ನಡದ ಪದಗಳ ಬದಲು ಇಂಗ್ಲಿಷ್ ಪದಗಳನ್ನು ಹೆಚ್ಚು ಬಳಸುತ್ತಾರೆ ಎಂದು ಬೇಸರ ವ್ಯಕ್ತಪಡಿಸಿದರು.

ಶಾಲಾ-ಕಾಲೇಜು ವಿದ್ಯಾರ್ಥಿಗಳ ಸಮೂಹ ಗಾಯನವು ಕಾರ್ಯಕ್ರಮದ ಮೆರುಗನ್ನು ಹೆಚ್ಚಿಸಿತು. ಆಡಳಿತ ಮಂಡಳಿಯಿಂದ ಚಿಗುರು ಆಶ್ರಮದ ಸಂಸ್ಥಾಪಕಿ ಎಂ.ಎಸ್.ಸುಷ್ಮಾ ಅವರನ್ನು ಸನ್ಮಾನಿಸಿತು.

ಇದೇ ಸಂದರ್ಭದಲ್ಲಿ ಶಾಲಾ-ಕಾಲೇಜಿನಿಂದ ಕ್ರೀಡೆಯಲ್ಲಿ ಸಾಧನೆಗೈದ ವಿದ್ಯಾರ್ಥಿ-ವಿದ್ಯಾರ್ಥಿನಿಯರನ್ನು ಅಭಿನಂದಿಸಲಾಯಿತು.

ಆಡಳಿತ ಮಂಡಳಿ ಅಧ್ಯಕ್ಷ ಎಂ. ಪಾಪೇಗೌಡ ಅಧ್ಯಕ್ಷತೆ ವಹಿಸಿದ್ದರು. ಕಾರ್ಯನಿರ್ವಾಹಕ ಅಧಿಕಾರಿ ಪ್ರೊ. ಜಿ.ಚಂದ್ರಶೇಖರ್, ಪ್ರಾಂಶುಪಾಲ ಸಿ.ಶಿವಪ್ಪ, ಮುಖ್ಯ ಶಿಕ್ಷಕರಾದ ಜಿ.ಎನ್.ವಿಶ್ವನಾಥ್, ವೀಣಾ.ಕೆ.ಹೆಗಡೆ ಇತರರು ಇದ್ದರು.