ಕೆ.ಎಂ.ದೊಡ್ಡಿ: ಹಳ್ಳಿಗಾಡಿನಲ್ಲಿ ಹುಟ್ಟಿದ ಕಬಡ್ಡಿ ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಜನಪ್ರಿಯತೆ ಪಡೆದಿದೆ ಎಂದು ಶಾಸಕ ಕದಲೂರು ಉದಯ್ ಅಭಿಪ್ರಾಯಪಟ್ಟರು.
ಸಮೀಪದ ಅಣ್ಣೂರಿನ ಶ್ರೀ ಮಾರಮ್ಮ ದೇವಾಲಯ ಆವರಣದಲ್ಲಿ ಶ್ರೀ ಮಾರಮ್ಮ ಸೇವಾ ಸಮಿತಿಯ ಆಶ್ರಯದಲ್ಲಿ ಅರುಣೋದಯ ಯುವಕ ಸಂಘದಿಂದ ಭಾನುವಾರ ಆಯೋಜಿಸಿದ್ದ ರಾಜ್ಯ ಮಟ್ಟದ ಹೊನಲು ಬೆಳಕಿನ ಕಬಡ್ಡಿ ಪಂದ್ಯಾವಳಿಯಲ್ಲಿ ಸಂಘದ ಸದಸ್ಯರಿಗೆ ಆರ್ಥಿಕ ನೆರವು ನೀಡಿದ ನಂತರ ಅಭಿನಂದನೆ ಸ್ವೀಕರಿಸಿ ಮಾತನಾಡಿದರು.
ಹಳ್ಳಿಗಳಲ್ಲಿ ದಿನ ನಿತ್ಯ ಕಬಡ್ಡಿ ಆಟ ನಡೆಯುತಿತ್ತು. ಬಳಿಕ ನಗರ ಪ್ರದೇಶಗಳಿಗೆ ವ್ಯಾಪಿಸಿ ತನ್ನ ಜನಪ್ರಿಯೆಯನ್ನು ಹೆಚ್ಚಿಸಿ ಕೊಂಡು ರಾಷ್ಟ್ರೀಯ ಕ್ರೀಡೆಗಳಲ್ಲಿ ಕಬಡ್ಡಿಯು ಸಹ ತನ್ನಸ್ತಿತ್ವ ಉಳಿಸಿಕೊಂಡು ದೇಶ-ವಿದೇಶಗಳಲ್ಲಿ ಪ್ರಸಿದ್ಧಿ ಪಡೆದಿದೆ ಎಂದು ಮೆಲುಕು ಹಾಕಿದರು.
ಸೋಲು-ಗೆಲುವನ್ನು ಸಮಾನವಾಗಿ ಸ್ವೀಕರಿಸಬೇಕು. ಸೋತಾಗ ಕುಗ್ಗದೆ ಮುಂದಿನ ಪಂದ್ಯಾವಳಿಯಲ್ಲಿ ಗೆಲ್ಲುವ ಆತ್ಮ ವಿಶ್ವಾಸದೊಂದಿಗೆ ಅಭ್ಯಾಸ ಮಾಡಿದರೇ ಗೆಲುವು ತಮ್ಮಲ್ಲಿಗೆ ಒಲಿದು ಬರುತ್ತದೆ ಎಂದು ಆಶಿಸಿದರು.
ರಾಜ್ಯ ಮಟ್ಟದ ಕಬಡ್ಡಿ ಪಂದ್ಯಾವಳಿಯಲ್ಲಿ ಕೆನ್ನಾಳು ಕದಂಬ ಪ್ರಥಮ, ಅಣ್ಣೂರಿನ ಶ್ರೀ ಮಾರಮ್ಮ ದ್ವಿತೀಯ ಮತ್ತು ಹಿರೇಮಾರಹಳ್ಳಿ ಬಾಯ್ಸ ತೃತೀಯ ಸ್ಥಾನ ಗಳಿಸಿದರು.
ಜಿ.ಪಂ ಮಾಜಿ ಸದಸ್ಯ ಎ.ಎಸ್. ರಾಜೀವ್, ಮುಖಂಡರಾದ ಮಾರಸಿಂಗನಹಳ್ಳಿ ಹರೀಶ್, ಅಣ್ಣೂರು ನವೀನ್‌ಕುಮಾರ್, ಹೊಂಡಾ ಸಿದ್ದೇಗೌಡ, ಅರುಣೋದಯ ಯುವಕರ ಸಂಘದ ಅಧ್ಯಕ್ಷ ಪುರುಷೋತ್ತಮ, ಉಪಾಧ್ಯಕ್ಷ ನವೀನ್, ಕಾರ್ಯದರ್ಶಿ ಪ್ರಜ್ವಲ್, ಖಜಾಂಚಿ ನಿಖಿಲ್, ಸದಸ್ಯರಾದ ಸುಮಂತ್, ಹೇಮಂತ್, ದಿಗಂತ್, ಸ್ವರೂಪ್, ಸುಪ್ರಿಯಾ, ರಾಜು, ಸಿಂಧೂ, ಸುಹಾಸ್ ಸೇರಿದಂತೆ ಮತ್ತಿತರಿದ್ದರು.