ಶಿವಮೊಗ್ಗ: ಭದ್ರಾವತಿ ತಾಲೂಕಿನ ಪ್ರತ್ಯೇಕ ಪ್ರಕರಣದಲ್ಲಿ ಕರ್ತವ್ಯಲೋಪ ಮತ್ತು ಅನಧಿಕೃತವಾಗಿ ಗೈರು ಹಾಜರಾಗಿದ್ದ ಮುಖ್ಯ ಶಿಕ್ಷಕ ಸೇರಿ ಇಬ್ಬರನ್ನು ಅಮಾನತುಗೊಳಿಸಿ ಡಿಡಿಪಿಐ ಸಿ.ಆರ್.ಪರಮೇಶ್ವರ್ ಆದೇಶಿಸಿದ್ದಾರೆ.
ಬಿ.ಆರ್.ಪ್ರಾಜೆಕ್ಟ್‌ನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಬಿ.ಆರ್.ಶಾಂತರಾಜಪ್ಪ ಮತ್ತು ದೊಡ್ಡಗೊಪ್ಪೇನಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಹ ಶಿಕ್ಷಕಿ ಸವಿತಾ ಕ್ರಿಸ್ತಿನ್ ಮೆಂಡೋನ್ಸಾ ಸೇವೆಯಿಂದ ಅಮಾನತುಗೊಂಡವರು.
ಶಾಂತರಾಜಪ್ಪ ಅವರು ಕಳೆದ 2023ರ ಜೂ.30ರಿಂದ ಜು.8ರವರೆಗೆ ಮತ್ತು ಜು.15ರಿಂದ ಆಗಸ್ಟ್ 12ರವರೆಗೆ ಶಾಲಾ ಕರ್ತವ್ಯಕ್ಕೆ ಗೈರು ಹಾಜರಾಗಿದ್ದರು. ಅಕ್ಷರ ದಾಸೋಹ ಕಾರ್ಯಕ್ರಮದ ಯಾವುದೇ ಪುಸ್ತಕಗಳನ್ನು ಶಾಲೆಯಲ್ಲಿ ಇಡದೇ ಮನೆಗೆ ಕೊಂಡೊಯ್ದಿದ್ದಾರೆ. 71,238 ರೂ. ದುರುಪಯೋಗ ಮಾಡಿಕೊಂಡಿದ್ದಾರೆ. ಶಾಲೆಯ ದಾಖಲಾತಿಗಳನ್ನು ಸಮರ್ಪಕವಾಗಿ ನಿರ್ವಹಣೆ ಮಾಡಿಲ್ಲ. 2021-22ನೇ ಸಾಲಿನಲ್ಲಿ ಡಿಬಿಟಿ ಹಣವನ್ನು 5ರಿಂದ 8ನೇ ತರಗತಿ ವಿದ್ಯಾರ್ಥಿಗಳ ಖಾತೆಗೆ ಜಮಾ ಮಾಡದೇ ದುರುಪಯೋಗಪಡಿಸಿಕೊಂಡಿದ್ದಾರೆ. ಶಾಲಾ ಅವಧಿಯಲ್ಲಿ ಮದ್ಯಪಾನ ಮಾಡಿ ಬರುತ್ತಿರುವುದು ಮೇಲ್ನೋಟಕ್ಕೆ ಸಾಬೀತಾಗಿದೆ. ಹಾಗಾಗಿ ಶಾಂತರಾಜಪ್ಪ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತುಗೊಳಿಸಲಾಗಿದೆ.
ಮತ್ತೊಂದು ಪ್ರಕರಣದಲ್ಲಿ ಸಹ ಶಿಕ್ಷಕಿ ಸವಿತಾ ಅವರು 2022ರ ಮೇ 17ರಿಂದ ಪ್ರಭಾರ ಮುಖ್ಯ ಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿದ್ದು ಮಕ್ಕಳಿಗೆ ಕಿರುಕುಳ ನೀಡುವುದು, ಪಾಲಕರೊಂದಿಗೆ ಅಸಭ್ಯವಾಗಿ ವರ್ತಿಸುವುದು, ಅವಾಚ್ಯ ಶಬ್ಧಗಳಿಂದ ನಿಂಧನೆ ಮಾಡಿರುವುದು, ಮಕ್ಕಳ ವರ್ಗಾವಣೆ ಪತ್ರ ನೀಡಿ ಬೇರೆ ಶಾಲೆಗೆ ದಾಖಲಾಗುವಂತೆ ಕಳುಹಿಸುವ ಆರೋಪಗಳು ಕೇಳಿಬಂದಿದ್ದು ಮೇಲ್ನೋಟಕ್ಕೆ ಆರೋಪಗಳು ಸಾಬೀತಾಗಿದ್ದರಿಂದ ಡಿಡಿಪಿಐ ಪರಮೇಶ್ವರ್ ಅವರು ಅಮಾನತುಗೊಳಿಸಿದ್ದಾರೆ.