ವಿಜಯವಾಣಿ ಸುದ್ದಿಜಾಲ ಗುಡಿಬಂಡೆ
ಪಟ್ಟಣ ಪಂಚಾಯಿತಿ ಕಾರ್ಯಾಲಯದಲ್ಲಿ ಕೆಲಸ ನಿರ್ವಹಿಸುತ್ತಿರುವ ಪೌರಕಾರ್ಮಿಕರಿಗೆ ವೇತನ ನೀಡದಿರುವುದು, ದಾಖಲೆ ಇಲ್ಲದೆ ಸುರಕ್ಷತಾ ಪರಿಕರ ವಿತರಣೆ ಸೇರಿದಂತೆ ಸರ್ಕಾರದಿಂದ ಪೌರಕಾರ್ಮಿಕರಿಗೆ ನೀಡಿರುವ ಸೌಲಭ್ಯಗಳನ್ನು ತಲುಪಿಸುವಲ್ಲಿ ಲೋಪ ಕಂಡು ಬಂದಿರುವ ಹಿನ್ನೆಲೆ ಸೂಕ್ತ ರಾಜ್ಯ ಸಫಾಯಿ ಕರ್ಮಚಾರಿಗಳ ಆಯೋಗದ ಕಾರ್ಯದರ್ಶಿ ಚಂದ್ರಕಲಾ ತನಿಖೆಗೆ ಆದೇಶಿಸಿ, ತಂಡ ರಚನೆ ಮಾಡುವಂತೆ ಸೂಚಿಸಿದ್ದಾರೆ.
ಪೌರಕಾರ್ಮಿಕರಿಂದ ಕೆಲಸ ಮಾಡಿಸಿಕೊಂಡು ವೇತನ ನೀಡುತ್ತಿಲ್ಲ ಎಂಬ ದೂರಿನ ಮೇರೆಗೆ ಗುಡಿಬಂಡೆ ಪಟ್ಟಣ ಪಂಚಾಯಿತಿ ಕಾರ್ಯಾಲಯಕ್ಕೆ ಮಂಗಳವಾರ ಭೇಟಿ ನೀಡಿ ಪೌರಕಾರ್ಮಿಕರ ಸಮಸ್ಯೆ ಆಲಿಸಿದರು.
ನನಗೆ ಪೌರಕಾರ್ಮಿಕರಿಂದ ರಾತ್ರಿ ವೇಳೆಯೂ ಕೆಲಸ ಮಾಡಿಸುತ್ತಿರುವ ದೂರು ಬಂದಿದೆ. ರಾತ್ರಿಯಲ್ಲೂ ಏಕೆ ಕೆಲಸ ಮಾಡಿಸಿದ್ದೀರಿ ಎಂದು ಪಪಂ ಪ್ರಭಾರಿ ಮುಖ್ಯಾಧಿಕಾರಿ ರುದ್ರಮ್ಮ ಶರಣಯ್ಯ ಮತ್ತು ಆರೋಗ್ಯ ನಿರೀಕ್ಷಕಿ ಶ್ವೇತಾ ಅವರನ್ನು ತರಾಟೆಗೆ ತೆಗೆದುಕೊಂಡರು.
ಸರ್ಕಾರ ಪೌರಕಾರ್ಮಿಕರಿಗೆ ಪ್ರತ್ಯೇಕ ಕಾಯ್ದೆ ಜಾರಿಗೆ ತಂದಿದೆ, ಅವರಿಗೆ ಸರ್ಕಾರದಿಂದ ಬರುವ ಸೌಲಭ್ಯಗಳನ್ನು ಸರಿಯಾಗಿ ನೀಡದೇ ಇದ್ದರೆ ಸೂಕ್ತ ಕಾನೂನು ಕ್ರಮ ಜರುಗಿಸಲಾಗುತ್ತದೆ ಎಂದು ಎಚ್ಚರಿಸಿದರು.
ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ತೇಜ್ ಆನಂದರೆಡ್ಡಿ, ಬಾಗೇಪಲ್ಲಿ ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಶೇಷಾದ್ರಿ, ಗುಡಿಬಂಡೆ ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಲಕ್ಷ್ಮೀಪತಿರೆಡ್ಡಿ, ಅಧಿಕಾರಿಗಳಾದ ರವೀಂದ್ರ, ಸಫಾಯಿ ಕರ್ಮಚಾರಿ ಸಮಿತಿ ಸದಸ್ಯ ಜೀವಿಕ ನಾರಾಯಣಸ್ವಾಮಿ ಇತರರು ಇದ್ದರು.
ದಾಖಲೆ ನಿರ್ವಹಿಸದ್ದಕ್ಕೆ ಗರಂ
ಪೌರಕಾರ್ಮಿಕರಿಗೆ ಸುರಕಿತ ಪರಿಕರಗಳು, ಆರೋಗ್ಯ ತಪಾಸಣೆ, ಬೆಳಗಿನ ಉಪಹಾರ, ವೇತನ, ಪಿಎಫ್ ಸೇರಿ ಇತರ ದಾಖಲೆಗಳನ್ನು ನೀಡುವಂತೆ ಆರೋಗ್ಯ ನಿರೀಕ್ಷಕಿ ಶ್ವೇತಾ ಅವರನ್ನು ಕೇಳಿದಾಗ ದಾಖಲೆ ನೀಡಲು ತಡಬಡಿಸಿದರು. ಸರಿಯಾದ ದಾಖಲೆ ನಿರ್ವಹಣೆ ಮಾಡದಿರುವುದರಿಂದ ಕುಪಿತರಾದ ಕಾರ್ಯದರ್ಶಿ ಚಂದ್ರಕಲಾ, ತನಿಖೆಗೆ ಆದೇಶಿಸಿ ಸೂಕ್ತ ವರದಿ ನೀಡಬೇಕು ಎಂದು ಸೂಚಿಸಿದರು.
ದೂರಿನ ಸುರಿಮಳೆ
ಏಳು ತಿಂಗಳು ಕಳೆದರು ವೇತನ ನೀಡುವುದಿಲ್ಲ, ನಾವು ಜೀವನ ಮಾಡುವುದಾದರೂ ಹೇಗೆ, ನಮ್ಮ ಮಕ್ಕಳಿಗೆ ವಿದ್ಯಾಭ್ಯಾಸ ಸೇರಿ ಸಂಸಾರ ನಡೆಸುವುದು ಹೇಗೆ? ಅಧಿಕಾರಿಗಳನ್ನು ಕೇಳಿದರೆ ಸಬೂಬು ಹೇಳುತ್ತಾರೆ. ಪಟ್ಟಣದ ಸ್ವಚ್ಛತಾ ವಿಸ್ತೀರ್ಣ ಹೆಚ್ಚಾಗುತ್ತಿದೆ. ಆದರೆ ಕಡಿಮೆ ಸಿಬ್ಬಂದಿಗೆ ಹೆಚ್ಚು ಕೆಲಸ ಎಂಬಂತಾಗಿದೆ. ಸರ್ಕಾರದಿಂದ ಪೌರಕಾರ್ಮಿಕರನ್ನು ನೇಮಿಸಿಕೊಳ್ಳಿ ಎಂದು ಆದೇಶ ಬಂದರೂ ಹೊಸದಾಗಿ ನೇಮಕ ಮಾಡಿಕೊಳ್ಳದೆ ನಮ್ಮಿಂದಲೇ ಹೆಚ್ಚು ಕೆಲಸ ಮಾಡಿಸಿಕೊಳ್ಳುತ್ತಿದ್ದಾರೆ, ಪಿಎ್ ಕಡಿತದ ಬಗ್ಗೆ ನಮಗೆ ಮಾಹಿತಿಯೇ ಇಲ್ಲ ಎಂದು ದೂರಿದರು.
ಪೌರಕಾರ್ಮಿಕರಿಗೆ ಸರಿಯಾಗಿ ವೇತನ ನೀಡುತ್ತಿಲ್ಲ ಎಂಬ ದೂರಿನ ಮೇರೆಗೆ ಬಂದು ವಿಚಾರಿಸಿದಾಗ ಪಟ್ಟಣ ಪಂಚಾಯಿತಿಯಲ್ಲಿ ಹಲವಾರು ಲೋಪ ಕಂಡುಬಂದಿದೆ. ಯಾವುದಕ್ಕೂ ಸರಿಯಾದ ದಾಖಲಾತಿ ಇಟ್ಟಿಲ್ಲ. ಪೌರಕಾರ್ಮಿಕರಿಗೆ ಸರಿಯಾದ ಸೌಲಭ್ಯ ನೀಡದೇ ಇರುವುದು ಕಂಡು ಬಂದಿದೆ. ಹಾಗಾಗಿ ತಂಡ ರಚಿಸಿ ತನಿಖೆ ಮಾಡಿ ವರದಿ ಸಲ್ಲಿಸುವಂತೆ ತಿಳಿಸಿದ್ದೇನೆ. ವರದಿ ಬಂದ ನಂತರ ತಪ್ಪಿಸ್ಥರ ವಿರುದ್ಧ ಕ್ರಮ ಜರುಗಿಸಲಾಗುವುದು.
ಚಂದ್ರಕಲಾ, ರಾಜ್ಯ ಸಫಾಯಿ ಕರ್ಮಚಾರಿಗಳ ಆಯೋಗದ ಕಾರ್ಯದರ್ಶಿ