ಕೈಲಾಂಚ : ಗ್ರಾಮೀಣ ಹಾಲು ಉತ್ಪಾದಕರ ಸಂಘಗಳು ಅಭಿವೃದ್ಧಿಗೊಂಡರೆ ಗ್ರಾಮಗಳ ಅಭಿವೃದ್ಧಿ ಸಾಧ್ಯ ಎಂದು ಕೆ.ಜಿ.ಹೊಸಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಎಂ.ಭೈರಯ್ಯ ತಿಳಿಸಿದರು.
ಕೈಲಾಂಚ ಹೋಬಳಿ ಕೆ.ಜಿ.ಹೊಸಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ಆವರಣದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಸಂಘದ ವಾರ್ಷಿಕ ಮಹಾಸಭೆಯಲ್ಲಿ ಮಾತನಾಡಿದ ಅವರು, ಹೈನುಗಾರಿಕೆ ರೈತರ ಕೈ ಹಿಡಿಯುವಲ್ಲಿ ಯಶಸ್ವಿಯಾಗಿದೆ. ಪ್ರತೀ 15 ದಿನಗಳಿಗೊಮ್ಮೆ ಸಂಘಕ್ಕೆ ಸರಬರಾಜು ಮಾಡಿದ ಹಾಲಿಗೆ ಬ್ಯಾಂಕಿನಿಂದ ನೇರವಾಗಿ ರೈತರ ಖಾತೆಗೆ ಹಣ ಜಮಾವಣೆ ಆಗುತ್ತಿದೆ. ಇತ್ತೀಚೆಗೆ ಪಶು ಆಹಾರ ದುಪ್ಪಟ್ಟಾಗಿದ್ದು, ಒಕ್ಕೂಟವು ರೈತರಿಗೆ ಹೆಚ್ಚುವರಿ ದರ ನಿಗದಿ ಪಡಿಸಬೇಕು ಎಂದರು.
ಡೇರಿ ಅಭಿವೃದ್ಧಿಯಲ್ಲಿ ಹಾಲು ಉತ್ಪಾದಕರ ಶ್ರಮ ಅಪಾರ. ಸಂಘಕ್ಕೆ ರೈತರು ಗುಣಮಟ್ಟದ ಹಾಲು ಪೂರೈಸುತ್ತಿರುವುದದಿಂಲೇ ಕೆ.ಜಿ.ಹೊಸಹಳ್ಳಿ ಡೇರಿ ಅಭಿವೃದ್ಧಿಯಲ್ಲಿ ಸಾಗುತ್ತಿದೆ. ರೈತರು ಸಂಘದ ಸೌಲಭ್ಯಗಳನ್ನು ಸದ್ಬಳಸಿಕೊಳ್ಳಬೇಕು ಎಂದು ತಿಳಿಸಿದರು.
ಬಮುಲ್ ವಿಸ್ತರಣಾಧಿಕಾರಿ ಕವಿತಾ ಮಾತನಾಡಿ, ಸಂಘವು ಲಾಭದಲ್ಲಿ ಕಾರ್ಯನಿರ್ವಹಿಸುತ್ತಿದ್ದರೆ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಬಹುದು. ರೈತರು ಉತ್ತಮ ತಳಿಯ ರಾಸುಗಳನ್ನು ಸಾಕಿ, ಆರ್ಥಿಕವಾಗಿ ಸದೃಢರಾಗಬೇಕು ಎಂದರು.
ಮುಖ್ಯಕಾರ್ಯನಿರ್ವಾಹಕ ಎಚ್.ಎಸ್.ಪುಟ್ಟಸ್ವಾಮಿ ಸಂಘದ ಲಾಭ, ಖರ್ಚು ವೆಚ್ಚದ ಮಾಹಿತಿಯನ್ನು ಸಭೆಯಲ್ಲಿ ಮಂಡಿಸಿದರು.
ಸಂಘದ ಉಪಾಧ್ಯಕ್ಷ ಸಿದ್ದಪ್ಪಾಜಿ, ನಿರ್ದೇಶಕರಾದ ಭೈರೇಗೌಡ, ರಾಮಣ್ಣ, ಹುಲಿಯಪ್ಪ, ದ್ಯಾವಪ್ಪ, ರಾಮಚಂದ್ರು, ಪಾರ್ಥ, ಬಿ.ಮಧು, ಕೆ.ಶಿವಕುಮಾರ್, ಮಂಗಳಮ್ಮ, ಲಕ್ಷ್ಮಮ್ಮ, ಜಯಲಕ್ಷ್ಮೀ ಹಾಲು ಪರೀಕ್ಷಕ ಸಂದೀಪ್, ಸಹಾಯಕ ವೆಂಕಟಾಚಲ ಇತರರು ಇದ್ದರು.