ಹುಬ್ಬಳ್ಳಿ : ಕಲ್ಲಿದ್ದಿಲು ಸಾಗಿಸುತ್ತಿದ್ದ ಗೂಡ್ಸ್ ರೈಲು ಲೋಂಡಾ-ವಾಸ್ಕೊ ಮಾರ್ಗದ ಸೊನಾಲಿಮ್ ಮತ್ತು ದೂಧಸಾಗರ ನಿಲ್ದಾಣ ಮಧ್ಯದ ಬ್ರಗಾಂಜಾ ಘಾಟ್ನಲ್ಲಿ ಹಳಿ ತಪ್ಪಿದ ಘಟನೆ ಶುಕ್ರವಾರ ಬೆಳಗ್ಗೆ ಸುಮಾರು 9.35ಕ್ಕೆ ಸಂಭವಿಸಿದೆ.
ಗೋವಾದಿಂದ ಕರ್ನಾಟಕದತ್ತ ಕಲ್ಲಿದ್ದಿಲು ತುಂಬಿಕೊಂಡು ಬರುತ್ತಿದ್ದ ಈ ರೈಲಿನ 17 ಬೋಗಿಗಳು ಹಳಿ ತಪ್ಪಿದ್ದು, ಒಂದು ಬೋಗಿ ಕಣವಿಗೆ ಬಿದ್ದಿದೆ ಎಂದು ತಿಳಿದುಬಂದಿದೆ.
ಇದರಿಂದಾಗಿ ಕೆಲ ಸಮಯ ರೈಲುಗಳ ಸಂಚಾರಕ್ಕೆ ಅಡಚಣೆ ಉಂಟಾಯಿತು. ಕೆಲ ರೈಲುಗಳ ಸಂಚಾರ ಮಾರ್ಗವನ್ನು ಬದಲಾಯಿಸಲಾಯಿತು. ಅವುಗಳಲ್ಲಿ ವಾಸ್ಕೊ- ತಿರುಪತಿ/ಹುಬ್ಬಳ್ಳಿ ವೀಕ್ಲಿ ಎಕ್ಸ್ಪ್ರೆಸ್ ರೈಲು ಸಂಚಾರವನ್ನು ಮಡಗಾಂವ, ಕಾರವಾರ, ಪಾಡಿಲ್, ಸುಬ್ರಹ್ಮಣ್ಯರೋಡ್, ಹಾಸನ, ಅರಸಿಕೇರಿ, ಚಿಕ್ಕಜಾಜೂರ, ರಾಯದುರ್ಗ ಮತ್ತು ಬಳ್ಳಾರಿ ಮಾರ್ಗವಾಗಿ, ವಾಸ್ಕೊ- ಹಜರತ್ ನಿಜಾಮುದ್ದಿನ್ ಎಕ್ಸ್ಪ್ರೆಸ್ ರೈಲು ಸಂಚಾರವನ್ನು ಮಡಗಾಂವ, ರೊಹಾ, ಪಾನ್ವೆಲ್, ಕಲ್ಯಾಣ ಮತ್ತು ಪುಣೆ ಮಾರ್ಗವಾಗಿ ಹಾಗೂ ಹಜರತ್ ನಿಜಾಮುದ್ದಿನ್- ವಾಸ್ಕೊ ಎಕ್ಸ್ಪ್ರೆಸ್ ರೈಲು ಸಂಚಾರವನ್ನು ಪುಣೆ, ಕಲ್ಯಾಣ, ಪಾನ್ವೆಲ್, ರೋಹಾ ಮತ್ತು ಮಡಗಾಂವ ಮಾರ್ಗವಾಗಿ ತಾತ್ಕಾಲಿಕವಾಗಿ ಬದಲಾಯಿಸಲಾಗಿತ್ತು. ಆ. 10ರಂದು ಸಹ ವಾಸ್ಕೊ-ಹಜರತ್ ನಿಜಾಮುದ್ದಿನ್ ಎಕ್ಸ್ಪ್ರೆಸ್ ಮತ್ತು ಹಜರತ್ ನಿಜಾಮುದ್ದಿನ್ - ವಾಸ್ಕೊ ರೈಲುಗಳು ಬದಲಾದ ಮಾರ್ಗದಲ್ಲಿ ಸಂಚರಿಸಲಿವೆ.
ಇನ್ನೂ, ಯಶವಂತಪುರ- ವಾಸ್ಕೊ ಮತ್ತು ವಾಸ್ಕೊ-ಯಶವಂತಪುರ ರೈಲುಗಳ ಗುರುವಾರದ ಸಂಚಾರವನ್ನು ರದ್ದುಗೊಳಿಸಲಾಯಿತು. ಆ. 10ರಂದು ಸಹ ಯಶವಂತಪುರ -ವಾಸ್ಕೊ ಮತ್ತು ವಾಸ್ಕೊ ಯಶವಂತಪುರ ರೈಲುಗಳ ಸಂಚಾರವನ್ನು ರದ್ದುಗೊಳಿಸಲಾಗಿದೆ.
ವಾಸ್ಕೊ ಮತ್ತು ಹುಬ್ಬಳ್ಳಿಯಿಂದ 140 ಟನ್ ಕ್ರೇನ್ ಹಾಗೂ ಇತರ ಉಪಕರಣಗಳೊಂದಿಗೆ ವಿಶೇಷ ತಂಡ ಘಟನಾ ಸ್ಥಳಕ್ಕೆ ತೆರಳಿದ್ದು, ರೈಲನ್ನು ಮರಳಿ ಹಳಿ ಮೇಲೆ ತರುವ ಕಾರ್ಯ ನಡೆದಿದೆ.
ನೈಋತ್ಯ ರೈಲ್ವೆ ವಲಯದ ಪ್ರಧಾನ ವ್ಯವಸ್ಥಾಪಕ ಅರವಿಂದ ಶ್ರೀವಾಸ್ತವ ಮತ್ತು ಅಪರ ಪ್ರಧಾನ ವ್ಯವಸ್ಥಾಪಕ ಕೆ.ಎಸ್. ಜೈನ್ ಅವರ ಮಾರ್ಗದರ್ಶನದಲ್ಲಿ ಹುಬ್ಬಳ್ಳಿ ವಿಭಾಗದ ವ್ಯವಸ್ಥಾಪಕ ಹರ್ಷ ಖರೆ ಹಾಗೂ ಇತರ ಹಿರಿಯ ಅಧಿಕಾರಿಗಳು ಘಟನಾ ಸ್ಥಳಕ್ಕೆ ತಲುಪಿ, ಪರಿಶೀಲನೆ ನಡೆಸುತ್ತಿದ್ದಾರೆ.