ಜಿಲ್ಲೆ

ಗಿಡಗಳನ್ನು ನೆಟ್ಟು ಮಕ್ಕಳಂತೆ ಪೋಷಿಸಿ

ಹೊನ್ನಾಳಿ: ನಗರ ಹಸಿರಾದರೆ ಸಾರ್ವಜನಿಕರ ಆರೋಗ್ಯದಲ್ಲಿ ಬದಲಾವಣೆಯಾಗುತ್ತದೆ. ಪ್ರತಿಯೊಬ್ಬರೂ ಒಂದು ಗಿಡವನ್ನು ಮನೆಯ ಮುಂಭಾಗದಲ್ಲಿ ನೆಟ್ಟು, ಮಕ್ಕಳಂತೆ ಪೋಷಿಸಬೇಕು ಎಂದು ಹೊನ್ನಾಳಿ ಉಪವಿಭಾಗದ ಉಪ ಕೃಷಿ ನಿರ್ದೇಶಕ ಎಚ್.ಕೆ. ರೇವಣಸಿದ್ದನಗೌಡ ಹೇಳಿದರು.

ನಗರದ ಉಪ ಕೃಷಿ ನಿರ್ದೇಶಕರ ಕಚೇರಿಯ ಆವರಣದಲ್ಲಿ ಶುಕ್ರವಾರ ಪರಿಸರ ದಿನಾಚರಣೆ ಪ್ರಯುಕ್ತ ಸಸಿ ನೆಡುವ ಕಾರ್ಯಕ್ಕೆ ಚಾಲನೆ ನೀಡಿ ಮಾತನಾಡಿದರು.

ಮರಗಿಡಗಳಿಂದ ಆರೋಗ್ಯಕ್ಕೆ ಬೇಕಾದ ಶುದ್ಧ ಗಾಳಿ ದೊರೆಯುತ್ತದೆ. ಅವುಗಳನ್ನು ಕಾಪಾಡಿಕೊಳ್ಳದಿದ್ದರೆ ಮುಂದಿನ ಪೀಳಿಗೆ ಹಣ ಕೊಟ್ಟು ಆಮ್ಲಜನಕವನ್ನು ಪಡೆದುಕೊಳ್ಳಬೇಕಾಗುತ್ತದೆ. ಅಂತಹ ಪರಿಸ್ಥಿತಿ ಬರಬಾರದೆಂದರೆ ಸಸಿಗಳನ್ನು ನೆಟ್ಟು ಬೆಳೆಸಬೇಕು ಎಂದರು.

ಕೇವಲ ಪರಿಸರ ದಿನಾಚರಣೆಯಂದು ಒಂದು ಸಸಿ ನೆಟ್ಟು ಪತ್ರಿಕೆಗಳಲ್ಲಿ ಫೋಟೋ ಹಾಗೂ ಸುದ್ದಿ ಹಾಕಿಸಿಕೊಂಡರೆ ಕರ್ತವ್ಯ ಮುಗಿಯಲಿಲ್ಲ. ನೆಟ್ಟ ಸಸಿಯನ್ನು ವರ್ಷ ಪೂರ್ತಿ ಸಾಕಬೇಕು ಎಂದರು.

ತಾಲೂಕು ಕೃಷಿ ಸಹಾಯಕ ನಿರ್ದೇಶಕ ವಿಶ್ವನಾಥ್ ಮಾತನಾಡಿ, ಕಚೇರಿ ಸುತ್ತಮುತ್ತ ಹಾಗೂ ಇನ್ನಿತರ ಕಡೆಗಳಲ್ಲಿ ಸಸಿಗಳನ್ನು ನೆಟ್ಟು ಪರಿಸರದ ಬಗ್ಗೆ ಜಾಗೃತಿ ಮೂಡಿಸುತ್ತೇವೆ. ರೈತರು ಹೊಲಗಳ ಬದುಗಳಲ್ಲಿ ಗಿಡಗಳನ್ನು ನಾಟಿ ಮಾಡಿದರೆ ಲಾಭವನ್ನು ತಂದು ಕೊಡುತ್ತದೆ ಎಂದು ಹೇಳಿದರು.

ಕೃಷಿ ಮಾರಾಟಗಾರರ ಸಂಘದ ಅಧ್ಯಕ್ಷ ಈರಣ್ಣ ಕೋರಿ, ಗೌರವಾಧ್ಯಕ್ಷ ಅಜ್ಜಣ್ಣ ಕೂಲಂಬಿ, ಕೃಷಿ ಅಧಿಕಾರಿಗಳಾದ ಅತಿಕ್ ಉಲ್ಲಾ, ಮಂಜುನಾಥ್, ಸಚಿನ್, ಕೃಷಿ ಸಿಬ್ಬಂದಿ ವೀರೇಶ್, ಆಂಜನೇಯ, ಮಂಜುನಾಥ್, ನಾಗರಾಜ್ ಕಡೆಮನಿ ಇತರರು ಇದ್ದರು.