ಜಿಲ್ಲೆ

ರೈತ ಸಂಪರ್ಕ ಕೇಂದ್ರಕ್ಕೆ ಜಿಲ್ಲಾಧಿಕಾರಿ ದಿಢೀರ್​ ಭೇಟಿ

ವಿಜಯವಾಣಿ ಸುದ್ದಿಜಾಲ ಧಾರವಾಡ

ನಗರದ ಹೊಸ ಬಸ್​ ನಿಲ್ದಾಣ ಬಳಿಯ ರೈತ ಸಂಪರ್ಕ ಕೇಂದ್ರಕ್ಕೆ ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ದಿಢೀರ್​ ಭೇಟಿ ನೀಡಿ ಅಧಿಕಾರಿಗಳ ಹಾಜರಾತಿ, ಕೇಂದ್ರದ ಕಾರ್ಯಚಟುವಟಿಕೆಗಳನ್ನು ಪರಿಶೀಲಿಸಿದರು.

ಕೇಂದ್ರದ ವ್ಯಾಪ್ತಿಯಲ್ಲಿನ ರೈತರ ಮಾಹಿತಿ, ಏನೆಲ್ಲ ಸೌಲಭ್ಯಗಳನ್ನು ನೀಡಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಕೇಳಿದ ಪ್ರಶ್ನೆಗೆ ಅಧಿಕಾರಿಗಳಿಂದ ಸಮರ್ಪಕ ಉತ್ತರ ಸಿಗಲಿಲ್ಲ. ಇದರಿಂದ ಕೊಂಚ ಬೇಸರವಾದ ಡಿಸಿ, ಅಧಿಕಾರಿಗಳಿಗೆ ಇಲಾಖೆಯ ಮೂಲ ಮಾಹಿತಿ ಸದಾ ನೆನಪಿರಬೇಕು. ಇಲಾಖೆಯನ್ನು ಸಮರ್ಪಕ ಮತ್ತು ಸಮರ್ಥವಾಗಿ ಪ್ರತಿನಿಧಿಸಬೇಕು ಎಂದರು.

ಕೃಷಿ ಅಧಿಕಾರಿ ಮಹಾದೇವ ಸರಶೇಟ್ಟಿ ಕೇಂದ್ರದ ಮಾಹಿತಿ ನೀಡಿದರು. ಕಚೇರಿಯಲ್ಲಿ ನಿರ್ವಹಿಸುವ ವಿವಿಧ ಕಡತಗಳನ್ನು ಪರಿಶೀಲಿಸಿದ ಜಿಲ್ಲಾಧಿಕಾರಿ, ಫಲಾನುಭವಿಗಳ ಮಾಹಿತಿ ಅನುಕ್ರಮವಾಗಿ ಇರದ ಮತ್ತು ಸರಿಯಾಗಿ ದಾಖಲಿಸದ್ದನ್ನು ಗಮನಿಸಿ, ಸರಿಯಾಗಿ ವರ್ಷವಾರು ಮಾಹಿತಿ ದಾಖಲಿಸಬೇಕು. ರೈತ ಸಂಪರ್ಕ ಕೇಂದ್ರವು ಕೃಷಿ ಇಲಾಖೆಯ ಕ್ಷೇತ್ರ ಮಟ್ಟದ ಕಚೇರಿ. ನಿತ್ಯ ನೂರಾರು ರೈತರು ಕೇಂದ್ರಕ್ಕೆ ಬರುತ್ತಾರೆ. ಅವರ ಬೇಡಿಕೆಗಳನ್ನು ದಾಖಲಿಸಬೇಕು ಮತ್ತು ಅವರ ಕುಂದುಕೊರತೆ ಆಲಿಸಿ ದಾಖಲಿಸಬೇಕು. ಇದರಿಂದ ರೈತರ, ಕೃಷಿ ವಲಯದ ಸಮಸ್ಯೆಗಳನ್ನು ಮೂಲದಲ್ಲಿ ಗುರುತಿಸಿ, ಜಿಲ್ಲಾ ಮಟ್ಟದಲ್ಲಿ ಪರಿಹಾರಕ್ಕೆ ಕ್ರಮಕೆಗೊಳ್ಳಲು ಸಾಧ್ಯವಾಗುತ್ತದೆ ಎಂದು ಎಚ್ಚರಿಸಿದರು.

ಜಿಲ್ಲೆಯ ಎಲ್ಲ ರೈತ ಸಂಪರ್ಕ ಕೇಂದ್ರಗಳಲ್ಲಿ ರೈತರ ಬೇಡಿಕೆ ವಹಿ ಮತ್ತು ರೈತರ ಕುಂದುಕೊರತೆ ವಹಿಗಳನ್ನು ಪ್ರತ್ಯೇಕವಾಗಿ ಕಡ್ಡಾಯವಾಗಿ ನಿರ್ವಹಿಸಬೇಕು. ಕೃಷಿ ಇಲಾಖೆ ಜಂಟಿ ನಿರ್ದೇಶಕರು ಈ ಕುರಿತು ಜಿಲ್ಲೆಯ ಎಲ್ಲ ಕೇಂದ್ರಗಳಿಗೆ ನಿರ್ದೇಶನ ನೀಡಬೇಕು ಎಂದರು.

ಸಹಾಯಕ ಕೃಷಿ ನಿರ್ದೇಶಕ ರಾಜಶೇಖರ ಅಣಗೌಡರ, ರೈತರು, ಸಿಬ್ಬಂದಿ, ಇತರರು ಇದ್ದರು.