ವಿಜಯವಾಣಿ ಸುದ್ದಿಜಾಲ ಬೈಂದೂರು ಕೊಲ್ಲೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಭಾಭವನದಲ್ಲಿ ಕೊಲ್ಲೂರು ಗ್ರಾಮ ಪಂಚಾಯಿತಿಯ 2025-26ನೇ ಸಾಲಿನ ಪ್ರಥಮ ಸುತ್ತಿನ ಗ್ರಾಮಸಭೆ ನಡೆಯಿತು. 94/ಸಿ ಹಕ್ಕುಪತ್ರ ಕೆಲವು ಗ್ರಾಮಸ್ಥರಿಗೆ ಸಿಕ್ಕಿದರೆ, ಇನ್ನೂ ಅನೇಕರಿಗೆ ಸಿಗದ ಬಗ್ಗೆ ಸಭೆಯಲ್ಲಿ ಭಾರಿ ಚರ್ಚೆ ನಡೆಯಿತು. ಹಕ್ಕುಪತ್ರ ಸಿಗದೆ ಸೌಲಭ್ಯಗಳಿಂದ ವಂಚಿತರಾಗುತ್ತಿದ್ದೇವೆ ಎಂದು ಗ್ರಾಮಸ್ಥರು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಮುಖ್ಯರಸ್ತೆ ಅಗಲೀಕರಣವಾದರೂ ಟ್ರಾಫಿಕ್ ಜಾಮ್ ಸಮಸ್ಯೆ ಮುಕ್ತಿ ಕಂಡಿಲ್ಲ. ಪೊಲೀಸ್ ಇಲಾಖೆಯವರು ವಾಹನ ನಿಲುಗಡೆ ಸಂಚಾರದ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಗ್ರಾಮಸ್ಥರು ಆಗ್ರಹಿಸಿದರು. ಅರಣ್ಯ ಇಲಾಖೆ ನೀತಿಯಿಂದಾಗಿ ವಿವಿಧೆಡೆ ಅರಣ್ಯ ಪ್ರದೇಶಗಳ ಒತ್ತಿನಲ್ಲಿರುವ ಜಾಗದಲ್ಲಿ ವಾಸವಿರುವ ಜನರು ಗುಂಡಿಗಳಿಂದ ತುಂಬಿರುವ ಮಣ್ಣು ರಸ್ತೆಯಲ್ಲೇ ಸಂಚರಿಸುತ್ತಿದ್ದೇವೆ. ಉತ್ತಮ ಸಂಚಾರ ವ್ಯವಸ್ಥೆ ಕಲ್ಪಿಸಬೇಕೆಂದು ಅರಣ್ಯ ತಪ್ಪಲು ಪ್ರದೇಶದ ನಿವಾಸಿಗಳು ಕೋರಿದರು. ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪ್ರಸನ್ನಾ ಶರ್ಮ ಅಧ್ಯಕ್ಷತೆ ವಹಿಸಿದ್ದರು. ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯ ಯೋಗೀಶ್ ನೋಡೆಲ್ ಅಧಿಕಾರಿಯಾಗಿ ಕಾರ್ಯನಿರ್ವಹಿಸಿದರು. ಗ್ರಾ.ಪಂ. ಉಪಾಧ್ಯಕ್ಷ ನಾಗೇಶ ದಳಿ, ಗ್ರಾವ ಲೆಕ್ಕಾಧಿಕಾರಿ ವೀರೇಶ್, ಪಂಚಾಯಿತಿ ಸದಸ್ಯರಾದ ಶಿವರಾಮಕೃಷ್ಣ ಭಟ್, ಹರೀಶ ಶೆಟ್ಟಿ, ಕೆ.ಪ್ರಕಾಶ, ವನಿತಾ ಶೇರುಗಾರ್, ನಾಗವೇಣಿ, ಪುಷ್ಪಾ, ಹೇಮಾ, ಡಿಆರ್‌ಪಿಒ ಸವಿತಾ, ಅಂಗನವಾಡಿ ಮೇಲ್ವೀಚಾರಕಿ ನಿವೇದಿತಾ, ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರು, ಗ್ರಾಮಸ್ಥರು, ವಿವಿಧ ಇಲಾಖೆಗಳ ಅಧಿಕಾರಿಗಳು, ಉಪಸ್ಥಿತರಿದ್ದರು. ಪಿಡಿಒ ರುಕ್ಕನ ಗೌಡ ಕಾರ್ಯಕ್ರಮ ನಿರ್ವಹಿಸಿದರು.
ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣ ಗೋಡೆ ಕುಸಿದು ಬಿದ್ದಿದ್ದರೂ ದುರಸ್ತಿ ಮಾಡಿಲ್ಲ. ಆವರಣ ಗೋಡೆ ಪುನಃ ನಿರ್ಮಾಣ ಮಾಡಲು ಅನುದಾನ ಕೊರತೆ ಕಾರಣ ನೀಡುತ್ತಿರುವ ಬಗ್ಗೆ ಗ್ರಾಮಸ್ಥರು ಸಭೆಯಲ್ಲಿ ಪ್ರಶ್ನಿಸಿದರು. ರಸ್ತೆ ಅಗಲೀಕರಣಕ್ಕಾಗಿ ಆವರಣ ಗೋಡೆಯ ತಳಭಾಗದ ಮಣ್ಣನ್ನು ಕೊರೆದಿರುವುದು, ಆವರಣ ಗೋಡೆ ದುರಸ್ತಿಗೆ ಮುಂದಾಗದಿರುವುದು ಸಂಬಂಧಪಟ್ಟ ಇಲಾಖೆಗಳ ನಿರ್ಲಕ್ಷೃಕ್ಕೆ ಹಿಡಿದ ಕನ್ನಡಿಯಾಗಿದೆ ಎಂದು ಆರೋಪಿಸಿದರು.